SUDDIKSHANA KANNADA NEWS/ DAVANAGERE/ DATE-03-05-2025
ಬೆಂಗಳೂರು: ನಮಗೆ 11495 ಕೋಟಿ ರೂಪಾಯಿ ಹದಿನೈದನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಹಣಕಾಸು ಸಚಿವೆ ಘೋಷಣೆ ಮಾಡಿದ್ದ ಹಣದಲ್ಲಿ ನಯಾ ಪೈಸೆಯನ್ನೂ ರಾಜ್ಯಕ್ಕೆ ಕೊಡಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಬ್ಯಾಂಕ್ವೆಂಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್ಥಿಕ ಇಲಾಖೆ ವತಿಯಿಂದ ಹೊಸ ವಾಹನಗಳಿಗೆ ಚಾಲನೆ ನೀಡಿ, ಅನುಕಂಪ ಆಧಾರಿತ ನೇಮಕಾತಿ ಆದೇಶ ವಿತರಿಸಿ ಮಾತನಾಡಿದರು.
ವೇತನ ಆಯೋಗ ಶಿಫಾರಸ್ಸು ಮಾಡಿದ ವೇತನದಲ್ಲಿ ನಯಾಪೈಸೆ ಚೌಕಾಸಿ ಮಾಡದೆ ಅಷ್ಟೂ ವೇತನ ನೀಡಿದ್ದೇವೆ. ಸರ್ಕಾರಿ ನೌಕರರಿಂದಲೂ ಇಷ್ಟೇ ಪ್ರಮಾಣದಲ್ಲಿ ಕರ್ತವ್ಯ ನಿರೀಕ್ಷಿಸುತ್ತೇನೆ. ತೆರಿಗೆ ಸಂಗ್ರಹದಲ್ಲಿ ಗುರಿ ತಲುಪಲೇಬೇಕು ಎಂದರು.
ನಾವು ಕೇಂದ್ರಕ್ಕೆ 4.5 ಲಕ್ಷ ಕೋಟಿ ತೆರಿಗೆ ಕೊಟ್ಟರೆ ರಾಜ್ಯಕ್ಕೆ ವಾಪಾಸ್ ಬರುವುದು ಕೇವಲ 60 ಸಾವಿರ ಕೋಟಿ ಮಾತ್ರ ಎಂದು ಹೇಳಿದ ಅವರು, ಮೋದಿ ಅವರು ಮುಖ್ಯಮಂತ್ರಿ ಆಗಿದ್ದಾಗ ಶೇ50 ರಷ್ಟು ತೆರಿಗೆ ರಾಜ್ಯಗಳಿಗೆ ವಾಪಾಸ್ ಕೊಡಬೇಕು ಎಂದು ಕೇಂದ್ರದ ಮೇಲೆ ಒತ್ತಡ ಹೇರಿದ್ದರು. ಈಗ ಇವರೇ ಪ್ರಧಾನಿ ಆದಾಗ ರಾಜ್ಯಗಳಿಗೆ ದೊಡ್ಡ ಮಟ್ಟದ ಅನ್ಯಾಯ ಮಾಡುತ್ತಿದ್ದಾರೆ ಎಂದು ಗುಡುಗಿದರು.
ಅನ್ಯಾಯಕ್ಕೆ ಒಳಗಾಗಿರುವ ದಕ್ಷಿಣದ ರಾಜ್ಯಗಳ ಜೊತೆ ಸೇರಿ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಅಗತ್ಯವಿದೆ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.