ಮುಂಬೈ: ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಬಾಲಿಕಾ ವಧು’ ಖ್ಯಾತಿಯ ನಟಿ ಪ್ರತ್ಯುಷಾ ಬ್ಯಾನರ್ಜಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ಪ್ರಿಯಕರ ಹಾಗೂ ಲಿವ್-ಇನ್ ಪಾರ್ಟ್‌ನರ್ ರಾಹುಲ್ ರಾಜ್ ಸಿಂಗ್ ಅವರನ್ನು ಬಾಂಬೆ ಹೈಕೋರ್ಟ್ ಬುಧವಾರ ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿದೆ (ಡಿಸ್ಚಾರ್ಜ್). ಪ್ರಕರಣ ನಡೆದ ಸುಮಾರು 10 ವರ್ಷಗಳ ಸುದೀರ್ಘ ಕಾನೂನು ಹೋರಾಟದ ಬಳಿಕ ನ್ಯಾಯಾಲಯ ಈ ಪ್ರಮುಖ ತೀರ್ಪು ನೀಡಿದೆ.
ನ್ಯಾಯಮೂರ್ತಿ ಶಿವಕುಮಾರ್ ಡಿಗೆ ಅವರಿದ್ದ ಪೀಠವು, ನಟಿ ಪ್ರತ್ಯುಷಾ ಬ್ಯಾನರ್ಜಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ರಾಹುಲ್ ರಾಜ್ ಸಿಂಗ್ ಜೊತೆ ನಡೆಸಿದ್ದ ಕೊನೆಯ ಫೋನ್ ಸಂಭಾಷಣೆಯನ್ನು ಪ್ರಮುಖ ಸಾಕ್ಷಿಯಾಗಿ ಪರಿಗಣಿಸಿದೆ. ಈ ಸಂಭಾಷಣೆಯಲ್ಲಿ ರಾಹುಲ್ ಅವರು ಪ್ರತ್ಯುಷಾ ಅವರಿಗೆ ಯಾವುದೇ ಅತಿರೇಕದ ನಿರ್ಧಾರ ಕೈಗೊಳ್ಳದಂತೆ ಮನವೊಲಿಸಲು ಪ್ರಯತ್ನಿಸುತ್ತಿರುವುದು ಹಾಗೂ ತಾನು ಅವರ ಬಳಿಗೆ ತಕ್ಷಣವೇ ಹಿಂತಿರುಗಿ ಬರುತ್ತಿರುವುದಾಗಿ ಹೇಳುತ್ತಿರುವುದು ದಾಖಲಾಗಿದೆ. ಅಲ್ಲದೆ, ಪ್ರತ್ಯುಷಾ ಅವರು ತಮ್ಮ ಹೆತ್ತವರು ಸೇರಿದಂತೆ ಇತರರ ಮೇಲೆ ಬೇಸರ ವ್ಯಕ್ತಪಡಿಸಿರುವುದು ಈ ಕರೆಯಲ್ಲಿ ತಿಳಿದುಬಂದಿದೆ.
ಪ್ರಕರಣದ ಹಿನ್ನೆಲೆ:
2016ರ ಏಪ್ರಿಲ್ 1ರಂದು 24 ವರ್ಷದ ನಟಿ ಪ್ರತ್ಯುಷಾ ಬ್ಯಾನರ್ಜಿ ತಮ್ಮ ಮುಂಬೈನ ಫ್ಲ್ಯಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ವೇಳೆ ಪ್ರತ್ಯುಷಾ ಅವರ ಪೋಷಕರು, ರಾಹುಲ್ ರಾಜ್ ಸಿಂಗ್ ವಿರುದ್ಧ ದೈಹಿಕ, ಮಾನಸಿಕ ಮತ್ತು ಆರ್ಥಿಕ ಕಿರುಕುಳ ನೀಡಿದ ಆರೋಪ ಹೊರಿಸಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಇದರ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿತ್ತು.
ವಿಚಾರಣಾ ನ್ಯಾಯಾಲಯವು (ದಿಂಡೋಶಿ ಸೆಷನ್ಸ್ ಕೋರ್ಟ್) ರಾಹುಲ್ ಸಲ್ಲಿಸಿದ್ದ ಡಿಸ್ಚಾರ್ಜ್ ಅರ್ಜಿಯನ್ನು ವಜಾಗೊಳಿಸಿ ದೋಷಾರೋಪಣೆ ಮಾಡಲು ಮುಂದಾಗಿತ್ತು. ಇದನ್ನು ಪ್ರಶ್ನಿಸಿ ರಾಹುಲ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್, ರಾಹುಲ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಯಾವುದೇ ಬಲವಾದ ಸಾಕ್ಷ್ಯಗಳಿಲ್ಲ ಎಂದು ಸ್ಪಷ್ಟಪಡಿಸಿ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.





Leave a comment