ನವದೆಹಲಿ: ದುಬೈನಿಂದ ತೆಲ ಅವೀವ್‌ಗೆ ತೆರಳುತ್ತಿದ್ದ ‘ಫೈದುಬೈ’ ವಿಮಾನ FZ1073 ನಲ್ಲಿ ಸಹ-ಪೈಲಟ್ ನಡೆಸಿದ ಭೀಕರ ವಿಮಾನ ಪತನ ಸಂಚನ್ನು ಭಾರತೀಯ ಮೂಲದ ಮುಖ್ಯ ಪೈಲಟ್ ಸ್ಮಿತ್ ಮಚ್ಛಾರ್ ಹಾಗೂ ನಾಲ್ವರು ಇಸ್ರೇಲಿ ಪ್ರಯಾಣಿಕರು ತಮ್ಮ ಪ್ರಾಣದ ಹದಗೆಟ್ಟ ಸ್ಥಿತಿಯಲ್ಲೂ ಸಾಹಸ ಮೆರೆದು ವಿಫಲಗೊಳಿಸಿದ್ದಾರೆ. ವಿಮಾನದಲ್ಲಿದ್ದ 27 ಮಕ್ಕಳು ಸೇರಿದಂತೆ ಒಟ್ಟು 174 ಪ್ರಯಾಣಿಕರು ಹಾಗೂ 6 ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ವಿವರ:
ವಿಮಾನವು ಭಾರಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ ಓಮನ್ ಮೂಲದ ಸಹ-ಪೈಲಟ್, ಮುಖ್ಯ ಪೈಲಟ್ ಸ್ಮಿತ್ ಮಚ್ಛಾರ್ ಅವರ ಮೇಲೆ ಅನಿರೀಕ್ಷಿತವಾಗಿ ಕೊಡಲಿಯಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳ ಹೊರತಾಗಿಯೂ, ಪೈಲಟ್ ಸ್ಮಿತ್ ಸಮಯಪ್ರಜ್ಞೆ ಮೆರೆದು ಕಾಕ್‌ಪಿಟ್ ಬಾಗಿಲನ್ನು ತೆರೆದು ಪ್ರಯಾಣಿಕರಿಗೆ ಹಾಗೂ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ.
ಬಾಗಿಲು ತೆರೆಯುತ್ತಿದ್ದಂತೆ ವಿಮಾನವು ದಿಢೀರನೆ 90 ಡಿಗ್ರಿ ಕೋನದಲ್ಲಿ ಕೆಳಕ್ಕೆ ಮುಖಮಾಡಿ ಅಪಾಯಕಾರಿ ಹಂತದಲ್ಲಿ ಧುಮುಕಲಾರಂಭಿಸಿತು. ಈ ಸಂದರ್ಭದಲ್ಲಿ ವಿಮಾನದಲ್ಲಿದ್ದ ನಾಲ್ವರು ಇಸ್ರೇಲಿ ನಾಗರಿಕರು ತಕ್ಷಣವೇ ಕಾಕ್‌ಪಿಟ್‌ಗೆ ನುಗ್ಗಿ ದುಷ್ಕರ್ಮಿಯನ್ನು ಮಟ್ಟಹಾಕಿದ್ದಾರೆ.
ವಿಮಾನ ರಕ್ಷಿಸಿದ 5 ‘ಸಾಹಸಿಗರು’:
ಸ್ಮಿತ್ ಮಚ್ಛಾರ್ (ಭಾರತೀಯ ಪೈಲಟ್):
ತಲೆ ಮತ್ತು ಕೈಗಳಿಗೆ ಗಂಭೀರ ಗಾಯಗಳಾಗಿದ್ದರೂ, ಕಾಕ್‌ಪಿಟ್ ಬಾಗಿಲು ತೆರೆದು ಪ್ರಯಾಣಿಕರಿಗೆ ಎಚ್ಚರಿಕೆ ರವಾನಿಸಿದರು. ಪ್ರಸ್ತುತ ಸೌದಿ ಅರೇಬಿಯಾದ ತಬುಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇವರ ಧೈರ್ಯವನ್ನು ಶ್ಲಾಘಿಸಿದ್ದಾರೆ.
ಯಾನಿವ್ ಹಯೂನ್ (ಪ್ಲಂಬರ್):
ಕಾಕ್‌ಪಿಟ್‌ಗೆ ನುಗ್ಗಿ ಕಂಟ್ರೋಲ್ ಬಿಡಿಸದಂತೆ ಕುಳಿತಿದ್ದ ಉಗ್ರರೂಪಿ ಸಹ-ಪೈಲಟ್‌ನನ್ನು ಎಳೆದು ಹೊರಹಾಕಿದರು. ‘ಮೇಡೇ’ ಟಿವಿ ಶೋ ನೋಡಿ ಕಲಿತ ಅನುಭವದಿಂದ ಯೋಕ್ (ಕಂಟ್ರೋಲ್) ಹಿಂದಕ್ಕೆ ಎಳೆದು ವಿಮಾನದ ಪತನವನ್ನು ತಡೆದರು.
ಅಸಫ್ ರಾಜುವಾನ್ (ಉದ್ಯಮಿ):
ಕಾಕ್‌ಪಿಟ್‌ನಲ್ಲಿದ್ದ ರಕ್ತದ ಮಡುವಿನ ನಡುವೆಯೇ ದುಷ್ಕರ್ಮಿಯನ್ನು ಹಿಡಿದು ಸುಮಾರು 50 ನಿಮಿಷಗಳ ಕಾಲ ಬಲವಂತವಾಗಿ ಬಂಧನದಲ್ಲಿಡಲು ಸಹಾಯ ಮಾಡಿದರು.
ಝ್ವಿಕಾ ಮನೆಸ್ (ಬ್ಯಾಂಕರ್ – ಬ್ಯಾಂಕ್ ಲೆಯುಮಿ ಸಿಇಒ):
ವಿಮಾನದಲ್ಲಿದ್ದ ಹೆಡ್‌ಫೋನ್ ಕೇಬಲ್‌ಗಳನ್ನು ಬಳಸಿ ಭಾರಿ ಬಲಶಾಲಿಯಾಗಿದ್ದ ದಾಳಿಕೋರ ಸಹ-ಪೈಲಟ್‌ನನ್ನು ಕಟ್ಟಿಹಾಕಿ ಸಂಪೂರ್ಣ ನಿಷ್ಕ್ರಿಯಗೊಳಿಸಿದರು.
ಡಾ. ಶೋಟಾ ಮುಸಾಯೇವ್ (ದಂತ ವೈದ್ಯ):
ವಿಮಾನದಲ್ಲಿದ್ದ ಏಕೈಕ ವೈದ್ಯರಾಗಿದ್ದ ಇವರು, ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಪೈಲಟ್ ಸ್ಮಿತ್ ಅವರ ತಲೆ ಮತ್ತು ಕೈಗಳ ರಕ್ತಸ್ರಾವವನ್ನು ತಡೆದು ತುರ್ತು ಚಿಕಿತ್ಸೆ ನೀಡಿ ಪ್ರಾಣ ಉಳಿಸಿದರು.
ತುರ್ತು ಪರಿಸ್ಥಿತಿ ಘೋಷಿಸಿದ ನಂತರ ವಿಮಾನವನ್ನು ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು.





Leave a comment