Home ಕ್ರೈಂ ನ್ಯೂಸ್ ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಸಿಕ್ಕಿಬಿದ್ದ 7 ವರ್ಷಗಳಿಂದ ನಾಪತ್ತೆಯಾಗಿದ್ದ ಗಂಡ: ಕೊಲೆ ಅಪವಾದದಿಂದ ಮುಕ್ತಿ ಪಡೆದ ಪತ್ನಿ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಸಿಕ್ಕಿಬಿದ್ದ 7 ವರ್ಷಗಳಿಂದ ನಾಪತ್ತೆಯಾಗಿದ್ದ ಗಂಡ: ಕೊಲೆ ಅಪವಾದದಿಂದ ಮುಕ್ತಿ ಪಡೆದ ಪತ್ನಿ!

Share
ಪತ್ನಿ
Share

ಹರ್ದೋಯಿ/ಲೂಧಿಯಾನ: ಗರ್ಭಿಣಿ ಪತ್ನಿಯನ್ನು ತೊರೆದು ಪ್ರೇಯಸಿಯೊಂದಿಗೆ ಪರಾರಿಯಾಗಿದ್ದ ಗಂಡನೊಬ್ಬ ಬರೋಬ್ಬರಿ ಏಳು ವರ್ಷಗಳ ನಂತರ ಇನ್‌ಸ್ಟಾಗ್ರಾಮ್ ರೀಲ್ಸ್‌ ಒಂದರ ಮೂಲಕ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಗಂಡನನ್ನು ಕೊಲೆ ಮಾಡಿದ್ದಾಳೆಂಬ ಅಪವಾದ ಹೊತ್ತು ಏಳು ವರ್ಷ ಕಾಲ ನರಕಯಾತನೆ ಅನುಭವಿಸಿದ್ದ ಪತ್ನಿ, ಕೊನೆಗೂ ಪತಿಯನ್ನು ಲೂಧಿಯಾನದಲ್ಲಿ ಪೊಲೀಸರಿಗೆ ಹಿಡಿದುಕೊಡುವ ಮೂಲಕ ತನಗೆಂಟಾಗಿದ್ದ ಕಳಂಕದಿಂದ ಮುಕ್ತಿ ಪಡೆದಿದ್ದಾಳೆ.

ಘಟನೆಯ ವಿವರ:

ಉತ್ತರ ಪ್ರದೇಶದ ಹರ್ದೋಯಿ ಮೂಲದ ಶೀಲು ಎಂಬ ಯುವತಿಗೆ 2017ರಲ್ಲಿ ಜಿತೇಂದ್ರ ಕುಮಾರ್ ಎಂಬಾತನೊಂದಿಗೆ ವಿವಾಹವಾಗಿತ್ತು. ಮದುವೆಯಾದ ಕೆಲವೇ ತಿಂಗಳಲ್ಲಿ ಆಕೆ ಗರ್ಭವತಿಯಾದಾಗ, 2018ರಲ್ಲಿ ಜಿತೇಂದ್ರ ಏಕಾಏಕಿ ನಾಪತ್ತೆಯಾಗಿದ್ದ. ಪತಿ ನಾಪತ್ತೆಯಾಗುತ್ತಿದ್ದಂತೆ ಗಂಡನ ಮನೆಯವರು ಶೀಲು ಹಾಗೂ ಆಕೆಯ ಕುಟುಂಬದ ಮೇಲೆಯೇ ಅನುಮಾನ ವ್ಯಕ್ತಪಡಿಸಿ, “ಗಂಡನನ್ನೇ ಕೊಲೆ ಮಾಡಿದ್ದಾರೆ” ಎಂದು ಸುಳ್ಳು ಆರೋಪ ಹೊರಿಸಿ ಮಾನಸಿಕ ಕಿರುಕುಳ ನೀಡಿದ್ದರು. ಮಗುವಿನೊಂದಿಗೆ ಏಕಾಂಗಿಯಾದ ಶೀಲು, ‘ಗಂಡನನ್ನೇ ಕೊಂದವಳು’ ಎಂಬ ಸಾಮಾಜಿಕ ಕಳಂಕವನ್ನು ಹೊತ್ತು ದಿನ ದೂಡುತ್ತಿದ್ದರು.

ಅಸಲಿ ಸತ್ಯ ಬಯಲು ಮಾಡಿದ ರೀಲ್ಸ್:

ಆದರೆ ವಾಸ್ತವದಲ್ಲಿ ಜಿತೇಂದ್ರ ಕುಮಾರ್ ತನ್ನ ಪ್ರೇಯಸಿಯೊಂದಿಗೆ ಪಂಜಾಬ್‌ನ ಲೂಧಿಯಾನಕ್ಕೆ ಓಡಿಹೋಗಿ, ಅಲ್ಲಿ ಮತ್ತೊಂದು ಮದುವೆಯಾಗಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದ. ಇತ್ತೀಚೆಗೆ ಲೂಧಿಯಾನದ ಗಣೇಶ ಮಂಟಪವೊಂದರಲ್ಲಿ ಎರಡನೇ ಪತ್ನಿಯೊಂದಿಗೆ ನೃತ್ಯ ಮಾಡಿ ಆತ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಹಂಚಿಕೊಂಡಿದ್ದ. ಈ ವಿಡಿಯೋ ಶೀಲು ಅವರ ಕಣ್ಣಿಗೆ ಬಿದ್ದಿದ್ದು, ತನಿಖೆ ನಡೆಸಿದಾಗ ಆತ ಲೂಧಿಯಾನದ ಬಟ್ಟೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವುದು ಖಚಿತವಾಯಿತು.

ರೆಡ್‌ಹ್ಯಾಂಡ್‌‌ ಆಗಿ ಹಿಡಿದ ಪತ್ನಿ:

 ಕೂಡಲೇ ಜಾಗರೂಕರಾದ ಶೀಲು ಲೂಧಿಯಾನಕ್ಕೆ ತೆರಳಿ, ಸ್ಥಳೀಯ ಪೊಲೀಸರ ನೆರವಿನಿಂದ ಜಿತೇಂದ್ರನನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದು ಠಾಣೆಗೆ ಎಳೆತಂದಿದ್ದಾರೆ. ಏಳು ವರ್ಷಗಳಿಂದ ತನ್ನ ಮೇಲಿದ್ದ ಕೊಲೆ ಆರೋಪವನ್ನು ಸುಳ್ಳಾಗಿಸಿ, ಗಂಡನ ಮನೆಯವರು ತಲೆತಗ್ಗಿಸುವಂತೆ ಮಾಡಿದ್ದಾರೆ. ಸದ್ಯ ಪೊಲೀಸರು ಜಿತೇಂದ್ರ ಕುಮಾರ್‌ನನ್ನು ದ್ವಿತೀಯ ವಿವಾಹ (Bigamy) ಮತ್ತು ವಂಚನೆ ಆರೋಪದಡಿ ಬಂಧಿಸಿ ಜೈಲಿಗಟ್ಟಿದ್ದಾರೆ.

Share

Recent Comments

No comments to show.
Related Articles