SUDDIKSHANA KANNADA NEWS/ DAVANAGERE/ DATE:05-02-2025
ದಾವಣಗೆರೆ: ಗ್ರೇಡ್ ನೀಡಲು ಲಂಚ ಸ್ವೀಕರಿಸುವ ವೇಳೆ ಸಿಬಿಐ ಬಲೆಗೆ ಬಿದ್ದು ಆಂಧ್ರಪ್ರದೇಶದ ಗುಂಟೂರಿನ ಜೈಲಿನಲ್ಲಿರುವ ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮ ಜೀವವಿಜ್ಞಾನ ಪ್ರಾಧ್ಯಾಪಕಿ ಗಾಯತ್ರಿ ದೇವರಾಜ ಅವರನ್ನು ಇದುವರೆಗೆ ಸಸ್ಪೆಂಡ್ ಮಾಡಲಾಗಿಲ್ಲ. ಲೋಕಾಯುಕ್ತ ದಾಳಿ ಆಗಿ ಎಫ್ ಐ ಆರ್ ದಾಖಲಾಗುತ್ತಿದ್ದಂತೆ ಸರ್ಕಾರಿ ನೌಕರರನ್ನು ಸಸ್ಪೆಂಡ್ ಮಾಡಲಾಗುತ್ತದೆ. ಆದ್ರೆ, ಸಿಬಿಐನಿಂದ ಬಂಧಿತರಾದರೂ ಇದುವರೆಗೆ ಗಾಯತ್ರಿ ದೇವರಾಜ ಅವರನ್ನು ಸಸ್ಪೆಂಡ್ ಮಾಡದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ.
ಎ++ ಗ್ರೇಡ್ ನೀಡುವ ವಿಚಾರದಲ್ಲಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ಬಂಧಿತರಾಗಿರುವುದು ಸಣ್ಣ ವಿಚಾರ ಏನಲ್ಲ. ಯಾಕೆಂದರೆ ದೇಶಾದ್ಯಂತ ದಾಳಿ ನಡೆಸಿ ಸಿಬಿಐ ಭ್ರಷ್ಟರ ಬೇಟೆ ನಡೆಸಿ ಜೈಲಿಗಟ್ಟಿದೆ. ಮಾತ್ರವಲ್ಲ, ಕಳೆದ ತಿಂಗಳು ಜನವರಿ 30ರಂದು ಗಾಯತ್ರಿ ದೇವರಾಜ ಅವರ ಮೇಲೆ ಎಫ್ ಐ ಆರ್ ದಾಖಲಾಗಿತ್ತು. ಆಮೇಲೆ ಬಂಧಿಸಲಾಗಿತ್ತು. ಇದುವರೆಗೆ ಉನ್ನತ ಶಿಕ್ಷಣ ಸಚಿವರಾಗಲೀ, ರಾಜ್ಯಪಾಲರಾಗಲೀ, ದಾವಣಗೆರೆ ವಿವಿಯ ರಿಜಿಸ್ಟ್ರಾರ್ ಆಗಲಿ ಕ್ರಮ ಜರುಗಿಸದಿರುವುದು ಚರ್ಚೆಗೆ ಕಾರಣವಾಗಿದೆ.
ದಾವಣಗೆರೆ ವಿವಿಯಲ್ಲಿ ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಗಾಯತ್ರಿ ದೇವರಾಜ ಅವರ ಮೇಲೆ ಈ ಹಿಂದೆಯೂ ಗುರುತರ ಆರೋಪಗಳು ಕೇಳಿ ಬಂದಿದ್ದವು. ಸೂಟ್ ಕೇಸ್ ಖರೀದಿಯಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಹೊಡೆಯಲಾಗಿದೆ ಎಂಬ ದೂರು ಕೇಳಿ ಬಂದಿತ್ತು. ಇದೇ ರೀತಿಯಲ್ಲಿ ಹಲವು ಬಾರಿ ದೂರು ಬಂದಿದ್ದರೂ ಕ್ಯಾರೇ ಎಂದಿರಲಿಲ್ಲ. ಆದ್ರೆ ಈಗ ಸಿಬಿಐ ದಾಳಿ ನಡೆಸಿ ಲಂಚ ಪಡೆಯುವಾಗ ಅರೆಸ್ಟ್ ಮಾಡಿದ್ದರೂ ಕ್ರಮ ಜರುಗಿಸದಿರುವುದರಿಂದ ಇದರ ಹಿಂದೆ ಯಾರದ್ದರ ಕೈವಾಡವಿದೆಯೋ ಅಥವಾ ರಾಜ್ಯಪಾಲರು, ಉನ್ನತ ಶಿಕ್ಷಣ ಇಲಾಖೆಯಿಂದ ಪತ್ರ ಬರೆಯುವವರೆಗೆ ಕಾಯಲಾಗುತ್ತಿದೆಯಾ ಎಂಬ ಕುರಿತಂತೆ ಸ್ಪಷ್ಟ ಮಾಹಿತಿ ಇಲ್ಲ.
ವೈದ್ಯಕೀಯ ಮೈಕ್ರೋಬಯಾಲಜಿ ಮತ್ತು ಎನ್ವಿರಾನ್ಮೆಂಟಲ್ ಬಯೋಟೆಕ್. ಸುಸ್ಥಿರ ಪರಿಸರಕ್ಕಾಗಿ ಬಯೋರೆಮಿಡಿಯೇಷನ್, ಪ್ರಾಣಿ ಮತ್ತು ಮಾನವ ರೋಗಕಾರಕಗಳನ್ನು ಪತ್ತೆಹಚ್ಚಲು ಮೊನೊಕ್ಲೋನಲ್ ಪ್ರತಿಕಾಯಗಳ ಬಳಕೆ, ಆರೋಗ್ಯ ರಕ್ಷಣೆಗಾಗಿ ಪ್ರೋಬಯಾಟಿಕ್ಗಳು. ಹೈಬ್ರಿಡೋಮಾವನ್ನು ಬಳಸಿಕೊಂಡು ರೋಗಕಾರಕ ಬ್ಯಾಕ್ಟೀರಿಯಾಗಳಿಗೆ ಸಂಯೋಜಿತ/ಬಹು-ಉದ್ದೇಶಿತ ಲಸಿಕೆ ಅಭಿವೃದ್ಧಿ ಮತ್ತು ನ್ಯಾನೋ ತಂತ್ರಜ್ಞಾನ ಕುರಿತಂತೆ ಲೇಖನಗಳನ್ನು ಬರೆದಿದ್ದರು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದ ಗಾಯತ್ರಿ ದೇವರಾಜ ಅವರು ಸಿಬಿಐ ಕೈಗೆ ಸಿಕ್ಕಿಬಿದ್ದಿರುವುದು ವಿದ್ಯಾರ್ಥಿಗಳಿಗೂ ಇರಿಸು ಮುರಿಸು ತಂದಿದೆ.
ದಾವಣಗೆರೆ ವಿವಿಯ ಇತಿಹಾಸದಲ್ಲಿ ಇಂಥ ಉನ್ನತ ಹುದ್ದೆಯಲ್ಲಿದ್ದವರು ಸಿಬಿಐಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಜೈಲು ಪಾಲಾಗಿರುವುದು ಇದೇ ಪ್ರಥಮ ಎಂದು ಹೇಳಲಾಗುತ್ತಿದೆ. ದಾವಣಗೆರೆ ವಿವಿಯ ರಿಜಿಸ್ಟ್ರಾರ್ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಂಡು ಬರುತ್ತಿಲ್ಲ. ಯಾಕೆಂದರೆ ಇದುವರೆಗೆ ಸರ್ಕಾರದಿಂದಾಗಲೀ, ರಾಜ್ಯಪಾಲರಿಂದಾಗಲೀ, ಉನ್ನತ ಶಿಕ್ಷಣ ಇಲಾಖೆಯಿಂದಾಗಲೀ ಯಾವುದೇ ಪತ್ರ ಬಂದಿಲ್ಲ. ಈ ಬಗ್ಗೆ ಹೆಚ್ಚೇನೂ ಮಾಹಿತಿ ಇಲ್ಲ. ಸಿಬಿಐನವರು ಯಾವುದೇ ಮಾಹಿತಿ ನೀಡಿಲ್ಲ. ಪತ್ರವನ್ನೂ ಕಳುಹಿಸಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ, ಗಾಯತ್ರಿ ದೇವರಾಜ ಅವರನ್ನು ಸಸ್ಪೆಂಡ್ ಮಾಡಿಲ್ಲ ಎಂಬುದು ಇದರಿಂದಲೇ ಗೊತ್ತಾಗುತ್ತದೆ.
ಪ್ರೊ. ಗಾಯತ್ರಿ ದೇವರಾಜ ಅವರು 2004 ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್ಡಿ ಪಡೆದರು. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕೆಲಸ ನಿರ್ವಹಿಸಿದ್ದ ಅವರು, 2006ರಿಂದ ದಾವಣಗೆರೆ ವಿವಿಯಲ್ಲಿ ಪ್ರಾಧ್ಯಾಪಕಿಯಾಗಿ ಕೆಲಸ
ನಿರ್ವಹಿಸುತ್ತಿದ್ದು, ಇಂದಿಗೂ ದಾವಣಗೆರೆ ವಿವಿಯಲ್ಲಿಯೇ ಇದ್ದರು. ಹಂತ ಹಂತವಾಗಿ ಭಡ್ತಿ ಪಡೆದು ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಏನಿದು ಕೇಸ್…?
ಲಂಚ ಪಡೆದು ಎ++ ಗ್ರೇಡ್ ನೀಡುವ ವಿಚಾರದಲ್ಲಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಗಾಯತ್ರಿ ದೇವರಾಜ ಸೇರಿದಂತೆ ಹತ್ತು ಜನರನ್ನು ಸಿಬಿಐ ಬಂಧಿಸಿತ್ತು.
10 ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ ತಂಡದ ಅಧ್ಯಕ್ಷರು ಮತ್ತು ಜೆಎನ್ ಯು ಪ್ರೊಫೆಸರ್ ಸೇರಿದಂತೆ ಶಿಕ್ಷಣ ಸಂಸ್ಥೆಯ ಅಧಿಕಾರಿಗಳು ಸೇರಿದಂತೆ 10 ಸದಸ್ಯರನ್ನು ಸೆರೆ ಹಿಡಿದಿತ್ತು.
ಪ್ರಕರಣದ ತನಿಖೆ ನಡೆಸುತ್ತಿರುವಾಗ, ಚೆನ್ನೈ, ಬೆಂಗಳೂರು, ವಿಜಯವಾಡ, ಪಲಮು, ಸಂಬಲ್ಪುರ, ಭೋಪಾಲ್, ಬಿಲಾಸ್ಪುರ, ಗೌತಮ್ ಬುದ್ಧ ನಗರ ಮತ್ತು ನವದೆಹಲಿ ಸೇರಿದಂತೆ ದೇಶಾದ್ಯಂತ 20 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿತ್ತು. ಈ ವೇಳೆ 37 ಲಕ್ಷ ರೂಪಾಯಿ ನಗದು, 6 ಲ್ಯಾಪ್ಟಾಪ್ಗಳು, ಐಫೋನ್ 16 ಪ್ರೊ, ಚಿನ್ನದ ನಾಣ್ಯ ಸೇರಿದಂತೆ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಸಾರಧಿ ವರ್ಮಾ, ಉಪಕುಲಪತಿ, ಕೆಎಲ್ಇಎಫ್, ಗುಂಟೂರು, ಕೋನೇರು ರಾಜಾ ಹರಿನ್, ಉಪಾಧ್ಯಕ್ಷರು, ಕೆ ಎಲ್ ಇ ಎಫ್, ಎ.ರಾಮಕೃಷ್ಣ, ನಿರ್ದೇಶಕರು, ಕೆಎಲ್ ವಿಶ್ವವಿದ್ಯಾಲಯ, ಹೈದರಾಬಾದ್ ಬಂಧನಕ್ಕೊಳಗಾಗಿದ್ದರು.
ಸಮರೇಂದ್ರ ನಾಥ್ ಸಹಾ – ಉಪಕುಲಪತಿ, ರಾಮಚಂದ್ರ ಚಂದ್ರವಂಶಿ ವಿಶ್ವವಿದ್ಯಾಲಯ, ರಾಜೀವ್ ಸಿಜಾರಿಯಾ – ಪ್ರೊಫೆಸರ್, JNU, ದೆಹಲಿ (NAAC ಸಂಯೋಜಕ), ಡಿ. ಗೋಪಾಲ್, ಡೀನ್ – ಭಾರತ್ ಇನ್ಸ್ಟಿಟ್ಯೂಟ್ ಆಫ್ ಲಾ, ರಾಜೇಶ್ ಸಿಂಗ್ ಪವಾರ್ – ಡೀನ್, ಜಾಗರಾನ್ ಲೇಕ್ಸಿಟಿ ವಿಶ್ವವಿದ್ಯಾಲಯ, ಭೋಪಾಲ್, ಮಾನಸ್ ಕುಮಾರ್ ಮಿಶ್ರಾ – ನಿರ್ದೇಶಕರು, ಜಿಎಲ್ ಬಜಾಜ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಗಾಯತ್ರಿ ದೇವರಾಜ – ಪ್ರಾಧ್ಯಾಪಕರು, ದಾವಣಗೆರೆ ವಿಶ್ವವಿದ್ಯಾಲಯ – ಬುಲು ಮಹಾರಾಣಾ, ಪ್ರೊಫೆಸರ್ – ಸಂಬಲ್ಪುರ ವಿಶ್ವವಿದ್ಯಾಲಯ ಬಂಧನಕ್ಕೊಳಗಾಗಿದ್ದವರು.
ಸಿಬಿಐ ಆರೋಪಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಆದರೂ ಇದುವರೆಗೆ ಕಠಿಣ ಕ್ರಮಕ್ಕೆ ಮುಂದಾಗುವುದಿರಲಿ, ಸಸ್ಪೆಂಡ್ ಕೂಡ ಮಾಡದಿರುವುದು ಚರ್ಚೆ ಜೊತೆಗೆ ಅನುಮಾನ ಕಾಡುತ್ತಿದೆ. ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.