SUDDIKSHANA KANNADA NEWS/ DAVANAGERE/ DATE:26-01-2025
ದಾವಣಗೆರೆ: ಜಿಲ್ಲೆಯಲ್ಲಿ ಅಭಿವೃದ್ಧಿಯ ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡಲಾಗುತ್ತಿದೆ. ಇದರಿಂದಲೇ ದಾವಣಗೆರೆ ಜಿಲ್ಲೆ ಸಾಕಷ್ಟು ಹೆಸರನ್ನು ಪಡೆದುಕೊಂಡು ರಾಜ್ಯದ ಪ್ರಮುಖ ವಾಣಿಜ್ಯ ನಗರವೆನಿಸಿದೆ. ಜಿಲ್ಲೆಯ ರೈತರ ಬದುಕನ್ನು ಇನ್ನಷ್ಟು ಹಸನಗೊಳಿಸಲು ಕೆರೆ ತುಂಬಿಸುವ ಯೋಜನೆ, ನಾಲೆಗಳ ದುರಸ್ಥಿ ಕೈಗೊಳ್ಳುವ ಮೂಲಕ ಕೊನೆ ಭಾಗದ ರೈತರಿಗೂ ನೀರು ಸಿಗುವಂತೆ ಮಾಡುವುದು ನಮ್ಮ ಉದ್ದೇಶ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್, ಮಲ್ಲಿಕಾರ್ಜುನ್ ತಿಳಿಸಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 76 ನೇ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯು ತೋಟಗಾರಿಕೆಯಲ್ಲಿ ಮುಂಚೂಣಿಯಲ್ಲಿದೆ. 1
ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತೋಟಗಾರಿಕೆ ಬೆಳೆಗಳಿವೆ. ಇದರ ಸಾಗುವಳಿ ವಿಸ್ತೀರ್ಣ ಶೇ.27 ರಷ್ಟಿದೆ. ತೋಟಗಾರಿಕೆಯನ್ನು ಪ್ರೋತ್ಸಾಹಿಸಲು ಇಲಾಖೆಯ ಮೂಲಕ ಕೃಷಿ ಸಿಂಚಾಯಿ, ಎನ್.ಹೆಚ್.ಎಂ., ಆರ್.ಕೆ.ವಿ.ವೈ
ಹಾಗೂ ಇತರೆ ಯೋಜನೆಗಳ ಮೂಲಕ ಅಂದಾಜು ಒಟ್ಟು ರೂ. 67 ಕೋಟಿ ಆರ್ಥಿಕ ಗುರಿಯೊಂದಿಗೆ 13,715 ಫಲಾನುಭವಿಗಳಿಗೆ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.
ಜನರ ಆರೋಗ್ಯ ರಕ್ಷಣೆ ಸರ್ಕಾರದ ಜವಾಬ್ದಾರಿಯಾಗಿದೆ. ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ರೂ. 35 ಕೋಟಿ ವೆಚ್ಚದಲ್ಲಿ ಮಹಿಳಾ ಮತ್ತು ಮಕ್ಕಳ ಚಿಕಿತ್ಸಾ ಘಟಕವನ್ನು ಹಾಗೂ ರೂ. 13 ಕೋಟಿ ವೆಚ್ಚದಲ್ಲಿ ಅಪಘಾತ ಮತ್ತು ಟ್ರಾಮಾ ಕೇರ್
ಸೆಂಟರ್ ಕಾರ್ಯಾರಂಭ ಮಾಡಲಾಗಿದೆ. ಅತ್ಯವಶ್ಯಕವಾಗಿದ್ದ ತೀವ್ರ ನಿಗಾ ಘಟಕ ನಿರ್ಮಾಣಕ್ಕೆ ರೂ. 17 ಕೋಟಿ ಅನುದಾನ ನೀಡಲಾಗಿದೆ. ಇದಲ್ಲದೇ ಹೊನ್ನಾಳಿಯ ಕತ್ತಿಗೆ ಮತ್ತು ಕೂಲಂಬಿಯಲ್ಲಿ ರೂ. 6 ಕೋಟಿ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹೊಸ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ದೇಶ ನಮ್ಮದು. ನಮ್ಮ ಆಡಳಿತದ ಕೈಗನ್ನಡಿ ಸಂವಿಧಾನವಾಗಿದೆ. ಇದರ ಆಶಯಗಳನ್ನು ಈಡೇರಿಸುವ ಹೊಣೆಗಾರಿಕೆ ವಿದ್ಯಾರ್ಥಿಗಳು ಸೇರಿದಂತೆ ಪ್ರತಿ ನಾಗರಿಕರ ಮೇಲಿದ್ದು, ಸ್ವಾತಂತ್ರ್ಯ ಹಾಗೂ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸವನ್ನು ನಾವು ನೀವೆಲ್ಲರೂ ಸೇರಿ ಮಾಡೋಣ ಎಂದು ಕರೆ ನೀಡಿದರು.