SUDDIKSHANA KANNADA NEWS/ DAVANAGERE/ DATE:26-01-2025
ದಾವಣಗೆರೆ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಜನಸಾಮಾನ್ಯರೆಲ್ಲರಿಗೂ ಮರಳು ಲಭ್ಯವಾಗುವಂತೆ ಮಾಡಲು ಈಗಾಗಲೇ ಗುರುತಿಸಲಾದ 24 ಮರಳಿನ ಬ್ಲಾಕ್ಗಳಲ್ಲಿ 4 ಬ್ಲಾಕ್ಗಳನ್ನು ಸರ್ಕಾರಿ ಕಾಮಗಾರಿಗಳಿಗೆ ಮೀಸಲಿರಿಸಿ ಉಳಿದ 20 ಬ್ಲಾಕ್ಗಳಿಗೆ ಟೆಂಡರ್ ಕರೆಯಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಮಾಹಿತಿ ನೀಡಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 76 ನೇ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿದ ಅವರು ಕೆಲವೇ ದಿನಗಳಲ್ಲಿ ಜನರಿಗೆ ಅವರ ಅಗತ್ಯತೆಗಳಿಗನುಗುಣವಾದ
ಮರಳು ನಿಗದಿತ ದರದಲ್ಲಿ ದೊರೆಯುವಂತೆ ಮಾಡಲು ಇಲಾಖೆಯು ಕ್ರಮ ವಹಿಸಿದೆ ಎಂದು ತಿಳಿಸಿದರು.
ನಗರದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು ಸ್ವಚ್ಛ ಭಾರತ ಮಿಷನ್ 2.0 ಯೋಜನೆಯಡಿ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಲು ಟೆಂಡರ್ ಕರೆಯಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಡಿ ಜಿಲ್ಲೆಯಲ್ಲಿ 82 ವಿದ್ಯಾರ್ಥಿನಿಲಯ ಹಾಗೂ ವಸತಿ ಶಾಲೆಗಳಲ್ಲಿ ಒಟ್ಟು 12,600 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗಮಾಡುತ್ತಿದ್ದಾರೆ. ಡಾ.ಬಿ.ಆರ್. ಅಂಬೇಡ್ಕರ್ರವರ ಗೌರವಾರ್ಥವಾಗಿ ಮಹಾರಾಷ್ಟ್ರದ ನಾಗಪುರದಲ್ಲಿನ ‘ದೀಕ್ಷಾ ಭೂಮಿ ಯಾತ್ರೆ’ ಕೈಗೊಳ್ಳಲು 139 ಜನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಂಧುಗಳಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 85 ವಿದ್ಯಾರ್ಥಿ ನಿಲಯಗಳಿದ್ದು, ಒಟ್ಟು 8,657 ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ 11 ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯಗಳಿದ್ದು 725 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಡಿ 14 ವಿದ್ಯಾರ್ಥಿನಿಲಯಗಳಲ್ಲಿ 1,300 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲಾಖೆಯಿಂದ ವಿವಿಧ ವಿದ್ಯಾರ್ಥಿ ವೇತನ ಯೋಜನೆಯಡಿ ಪರಿಶಿಷ್ಟ ಪಂಗಡದ 10,000 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಗಿದೆ ಎಂದು ವಿವರಿಸಿದರು.