SUDDIKSHANA KANNADA NEWS/ DAVANAGERE/ DATE:19-01-2025
ದಾವಣಗೆರೆ: ಜವಾಹರ್ ಲಾಲ್ ಮಂಚ್ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಮೊಹಮ್ಮದ್ ಜಿಕ್ರಿಯಾ ಅವರನ್ನು ನೇಮಕ ಮಾಡಲಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ್, ಜವಾಹರ್ ಲಾಲ್ ಮಂಚ್ ರಾಷ್ಟ್ರೀಯ ಅಧ್ಯಕ್ಷ ಜಿ. ವಿ. ಹರಿ ಅವರ ಶಿಫಾರಸ್ಸಿನ ಮೇರೆಗೆ ಜವಾಹರ್ ಬಾಲ್ ಮಂಚ್ ನ ರಾಜ್ಯಾಧ್ಯಕ್ಷ ಮೈನುದ್ದಿನ್ ಹೆಚ್. ಜೆ. ಅವರ ಆದೇಶದ ಮೇರೆಗೆ ಮೂರನೇ ಬಾರಿ ಮೊಹಮ್ಮದ್ ಜಿಕ್ರಿಯಾ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನಿಯೋಜಿಸಲಾಗಿದೆ.
ಬಾಲ್ ಮಂಚ್ ನ ದಾವಣಗೆರೆ ಜಿಲ್ಲೆಯ ಸಂಘಟನೆಯನ್ನು ಬಲಗೊಳಿಸಿ, ಶಕ್ತಿಯುತವಾಗಿ ಶ್ರಮಿಸಲು ಸ್ಥಳೀಯ ನಾಯಕರೊಂದಿಗೆ ಕಾರ್ಯಪ್ರವೃತ್ತರಾಗುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಸುವರ್ಣ ಕರ್ನಾಟಕ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದ ಮೊಹಮ್ಮದ್ ಜಿಕ್ರಿಯಾ ಅವರ ಸಮಾಜ ಸೇವೆ ಗುರುತಿಸಿ ಇತ್ತೀಚೆಗಷ್ಟೇ ದಾವಣಗೆರೆ ಮಹಾನಗರ ಪಾಲಿಕೆಯ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಸಮಾಜ ಸೇವೆ, ಪಕ್ಷ ಸಂಘಟನೆ, ಚುನಾವಣೆಯಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಮೊಹಮ್ಮದ್ ಜಿಕ್ರಿಯಾ ಅವರಿಗೆ ಮೂರನೇ ಬಾರಿಗೆ ಜಿಲ್ಲಾಧ್ಯಕ್ಷ ಪಟ್ಟ ಅರಸಿ ಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೊಹಮ್ಮದ್ ಜಿಕ್ರಿಯಾ ಅವರು, ಪಕ್ಷವು ಸತತವಾಗಿ ಮೂರನೇ ಬಾರಿಗೆ ಜಿಲ್ಲಾ ಜವಾಹರ್ ಲಾಲ್ ಮಂಚ್ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. ನನ್ನ ಮೇಲೆ ಇಟ್ಟಿರುವ ವಿಶ್ವಾಸ, ನಂಬಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್ ಪಕ್ಷದ ಸಂಘಟನೆಗೆ ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ.