ನವದೆಹಲಿ: ನಿಕಟಪೂರ್ವ ಸಂಸತ್ತಿನ ಮುಂಗಾರು ಅಧಿವೇಶನವು ನಿರಂತರ ಗದ್ದಲ ಮತ್ತು ಪ್ರತಿಭಟನೆಗಳಿಗೆ ಆಹುತಿಯಾಗಿದ್ದು, ಸಾರ್ವಜನಿಕರ ಕೋಟ್ಯಂತರ ರೂಪಾಯಿ ತೆರಿಗೆ ಹಣ ಪೋಲಾಗಿದೆ. ಲಭ್ಯವಿರುವ ಅಧಿಕೃತ ಅಂಕಿಅಂಶಗಳ ಪ್ರಕಾರ, ಈ ಬಾರಿಯ ಅಧಿವೇಶನದಲ್ಲಿ ಒಟ್ಟು 7,023 ನಿಮಿಷಗಳ ಅಮೂಲ್ಯ ಸಮಯ ವೃಥಾ ಹಾಳಾಗಿದೆ.
ಲೋಕಸಭೆಯ ಕಲಾಪ ನಡೆಸಲು ಪ್ರತಿ ನಿಮಿಷಕ್ಕೆ ಸುಮಾರು 2.5 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಈ ಲೆಕ್ಕಾಚಾರದಂತೆ, ಇದುವರೆಗೆ ಕಲಾಪ ತಡೆ ಹಾಗೂ ಗದ್ದಲದಿಂದಾಗಿ ಸುಮಾರು 175 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ.
ಚರ್ಚೆಯಿಲ್ಲದೇ 20 ಮಸೂದೆಗಳು ಪಾಸ್:
ಅಧಿವೇಶನದಲ್ಲಿ ನಿರಂತರ ಪ್ರತಿಪಕ್ಷಗಳ ಗದ್ದಲ ಹಾಗೂ ಕಲಾಪ ಬಹಿಷ್ಕಾರದ ನಡುವೆಯೂ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ 20 ಪ್ರಮುಖ ಮಸೂದೆಗಳನ್ನು ಅಂಗೀಕರಿಸಲಾಯಿತು. ಆದರೆ, ಸೂಕ್ತ ಚರ್ಚೆ ಅಥವಾ ಸಂವಾದಗಳಿಲ್ಲದೇ ಗದ್ದಲದ ವಾತಾವರಣದಲ್ಲೇ ಈ ಮಸೂದೆಗಳಿಗೆ ಅಂಕಿತ ಹಾಕಲಾಯ್ತು.
ಇದೇ ಮೊದಲಲ್ಲ – ಇತಿಹಾಸದಲ್ಲೂ ನಡೆದಿದೆ ಕಲಾಪದ ‘ವಾಶ್ಔಟ್’:
ಸಂಸತ್ತಿನ ಇಡೀ ಅಧಿವೇಶನ ಗದ್ದಲಕ್ಕೆ ಬಲಿಯಾಗಿರುವುದು ಇದೇ ಮೊದಲೇನಲ್ಲ. 1980ರ ದಶಕದ ಬೋಫೋರ್ಸ್ ಹಗರಣದಿಂದ ಹಿಡಿದು ಇತ್ತೀಚಿನ ವರ್ಷಗಳವರೆಗೆ ಹಲವು ವಿಷಯಗಳು ಸಂಸತ್ತಿನ ಕಲಾಪವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿವೆ.
2010ರ ಚಳಿಗಾಲದ ಅಧಿವೇಶನ: 2G ಸ್ಪೆಕ್ಟ್ರಮ್ ಹಗರಣದ ತನಿಖೆಗೆ ಜಂಟಿ ಸಂಸದೀಯ ಸಮಿತಿ (JPC) ರಚನೆಗೆ ಆಗ್ರಹಿಸಿ ಇಡೀ ಅಧಿವೇಶನ ರದ್ದಾಗಿತ್ತು.
2012ರ ಮುಂಗಾರು ಅಧಿವೇಶನ: ಕಾಮನ್ವೆಲ್ತ್ ಗೇಮ್ಸ್ ಅಕ್ರಮ ಹಾಗೂ ಲೋಕಪಾಲ್ ಮಸೂದೆ ವಿವಾದದಿಂದಾಗಿ ಲೋಕಸಭೆಯು ನಿಗದಿತ 60 ಗಂಟೆಗಳಲ್ಲಿ ಕೇವಲ 23 ಗಂಟೆ ಮಾತ್ರ ಕಾರ್ಯನಿರ್ವಹಿಸಿತು.
2015ರ ಮುಂಗಾರು ಅಧಿವೇಶನ: ವ್ಯಾಪಂ ಹಗರಣ ಮತ್ತು ಲಲಿತ್ ಮೋದಿ ಪ್ರಕರಣದ ಪ್ರತಿಭಟನೆಯಿಂದಾಗಿ ಕೇವಲ 46% ಕೆಲಸ ಮಾತ್ರ ಪೂರ್ಣಗೊಂಡಿತ್ತು.
2016ರ ಚಳಿಗಾಲದ ಅಧಿವೇಶನ: ನೋಟು ರದ್ದತಿ (ಡಿಮಾನಿಟೈಸೇಶನ್) ವಿರೋಧಿ ಪ್ರತಿಭಟನೆಯಿಂದಾಗಿ ಲೋಕಸಭೆಯ ಸುಮಾರು 92 ಗಂಟೆಗಳ ಸಮಯ ಪೋಲಾಗಿತ್ತು.
2018ರ ಮುಂಗಾರು ಅಧಿವೇಶನ: ರಫೇಲ್ ಯುದ್ಧ ವಿಮಾನ ಒಪ್ಪಂದದ ಅಕ್ರಮ ಆರೋಪ ಹಾಗೂ ಅವಿಶ್ವಾಸ ನಿರ್ಣಯದ ಗದ್ದಲದಿಂದ ನಿಗದಿತ ಕೆಲಸದಲ್ಲಿ ಕೇವಲ 15% ಮಾತ್ರ ಪೂರ್ಣಗೊಂಡಿತ್ತು.
2023ರ ಮುಂಗಾರು ಅಧಿವೇಶನ: ಮಣಿಪುರ ಹಿಂಸಾಚಾರದ ಕುರಿತು ಚರ್ಚೆಗೆ ಪಟ್ಟು ಹಿಡಿದಿದ್ದರಿಂದ ಅಧಿವೇಶನ ತೀವ್ರ ಗದ್ದಲಕ್ಕೆ ಸಾಕ್ಷಿಯಾಗಿತ್ತು.





Leave a comment