SUDDIKSHANA KANNADA NEWS/ DAVANAGERE/ DATE:11-01-2025
ದಾವಣಗೆರೆ: ಅಕ್ರಮ ಮರಳು ಸಂಗ್ರಹಣೆಯ ಮೇಲೆ ದಾಳಿ ಮಾಡಿ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಲೇಬೆನ್ನೂರು, ಹರಿಹರ ತುಂಗಾಭದ್ರಾ ನದಿ, ಹೊನ್ನಾಳಿ ತಾಲೂಕಿನ ತುಂಗಾಭದ್ರಾ ನದಿ ಇಕ್ಕೆಲಗಳಲ್ಲಿಯೂ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಇದು ಪೊಲೀಸರು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿಲ್ಲ ಎಂದೇನಿಲ್ಲ. ಮುಂಬರುವ ದಿನಗಳಲ್ಲಿ ಅಕ್ರಮ ಮರಳುಗಾರಿಕೆಯಿಂದ ಲಾಭ ಪಡೆಯುತ್ತಿರುವವರ ವಿರುದ್ಧವೂ ಪೊಲೀಸ್ ಇಲಾಖೆ ಬಿಸಿ ಮುಟ್ಟಿಸಲು ಮುಂದಾಗಿದೆ.
ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳು ಮತ್ತು ಅಕ್ರಮ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ಸಲುವಾಗಿ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ. ಸಂತೋಷ, ಜಿ. ಮಂಜುನಾಥ ಗ್ರಾಮಾಂತರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಸವರಾಜ್ ಬಿ..ಎಸ್. ಮಾರ್ಗದರ್ಶನದಲ್ಲಿ ಹಾಗೂ ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ಮತ್ತು ಪಿ.ಎಸ್.ಐ ಪ್ರಭು ಡಿ. ಕೆಳಗಿನಮನಿ ಮಲೇಬೆನ್ನೂರುರವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ಇಂದು ಸಂಜೆ 5 ಗಂಟೆ ಸಮಯದಲ್ಲಿ ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಗೋವಿನಹಾಳ್ ಗ್ರಾಮದ ಬಳಿಯ ಬೈರನಪಾದದ ಹತ್ತಿರದ ತುಂಗಭದ್ರಾ ನದಿ ದಂಡೆಯಲ್ಲಿ ಯಾರೋ ಅಪರಿಚತರು ಮರಳನ್ನು ಅಕ್ರಮವಾಗಿ ಸಾಗಣಿಕೆ
ಮಾಡಿ ಲಾಭ ಮಾಡಿಕೊಳ್ಳುವ ದುರುದ್ದೇಶದಿಂದ ಮರಳನ್ನು ಸಂಗ್ರಹಿಸಿಟ್ಟಿದ್ದನ್ನು ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ಅವರ ಮಾರ್ಗದರ್ಶನದಲ್ಲಿ ಮಲೇಬೆನ್ನೂರು ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರಭು ಡಿ ಕೆಳಗಿನಮನಿ ಅವರನ್ನೊಳಗೊಂಡ ತಂಡವು ದಾಳಿ ಮಾಡಿ, ಸುಮಾರು ಅಂದಾಜು ಬೆಲೆ 50,000 ರೂ ಬೆಲೆಯ ಸುಮಾರು 20 ಮೆಟ್ರಿಕ್ ಟನ್ ಮರಳನ್ನು ವಶ ಪಡಿಸಿಕೊಂಡಿದೆ. ಈ ಬಗ್ಗೆ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೆ, ಆರೋಪಿಗಳ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ಯಾರಿಗೆ ಸೇರಿದ್ದು ಎಂಬ ಕುರಿತಂತೆಯೂ ಮಾಹಿತಿ ನೀಡಿಲ್ಲ. ಅಕ್ರಮ ಮರಳು ಸಂಗ್ರಹಿಸಿಟ್ಟಿದ್ಯಾರು? ಜಿಲ್ಲೆಯ ಕೆಲವೆಡೆ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿರುದ್ದ ಯಾಕೆ ದಾಳಿ ನಡೆಸುತ್ತಿಲ್ಲ? ಪೊಲೀಸ್ ಇಲಾಖೆಗೆ ದೂರು ನೀಡಿದ್ದರೂ ಸುಮ್ಮನಿರುವುದೇಕೆ? ಇದುವರೆಗೆ ಯಾರ್ಯಾರಿಗೆ ಎಷ್ಟೆಷ್ಟು ಪಾಲು ಹೋಗಿದೆ ಎಂಬ ಕುರಿತಂತೆ ಸಮಗ್ರ ತನಿಖೆ ನಡೆಸಬೇಕು. ಪೊಲೀಸ್ ಇಲಾಖೆಯು ಕೇವಲ ದಾಳಿ ನಡೆಸಿದರೆ ಸಾಕಾಗದು. ಇದುವರೆಗೆ ಯಾರ್ಯಾರು ಲಾಭ ಪಡೆಯುತ್ತಿದ್ದಾರೆ? ತಿಂಗಳಿಗೆ ಯಾರ್ಯಾರಿಗೆ ಅಕ್ರಮ ಮರಳುಗಾರಿಕೆ ನಡೆಸುವವರು ಹಣ ಕೊಡುತ್ತಿದ್ದಾರೆ? ಎಂಬ ಕುರಿತಂತೆಯೂ ತನಿಖೆ ನಡೆಸಬೇಕು ಎಂದು ಹೊನ್ನಾಳಿ, ಹರಿಹರ, ಮಲೇಬೆನ್ನೂರು ಸೇರಿದಂತೆ ಮರಳುಗಾರಿಕೆ ನಡೆಯುವ ಗ್ರಾಮಸ್ಥರು ಪೊಲೀಸರನ್ನು ಒತ್ತಾಯಿಸಿದ್ದಾರೆ.