SUDDIKSHANA KANNADA NEWS/ DAVANAGERE/ DATE:06-01-2025
ದಾವಣಗೆರೆ: ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಕೆನ್ನೆಯಂತೆ ರಸ್ತೆಗಳ ನುಣುಪಾಗಿಸುತ್ತೇನೆ ಎಂಬ ಹೇಳಿಕೆ ನೀಡಿರುವ ದೆಹಲಿಯ ಬಿಜೆಪಿ ಅಭ್ಯರ್ಥಿಯ ಕೊಳಕು ಮನಸ್ಥಿತಿಗೆ ಸಾಕ್ಷಿ. ಇಂಥವರಿಗೆ ಮಹಿಳೆಯರು ಹಾಗೂ ಜನರು ತಕ್ಕ ಪಾಠ ಕಲಿಸುವುದು ಖಚಿತ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಎಸ್ಸಿ ವಿಭಾಗದ ಮಾಧ್ಯಮ ವಕ್ತಾರ ಬಿ. ಎನ್. ವಿನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸ್ಕೃತಿ, ಪರಂಪರೆ, ಮಹಿಳೆಯರ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ತಾಯಂದಿರ ಬಗ್ಗೆ ನೀಡುತ್ತಿರುವ ಹೇಳಿಕೆಗಳನ್ನು ಗಮನಿಸಿದರೆ ಮಹಿಳಾ ವಿರೋಧಿಗಳು ಎಂಬುದು ಸಾಬೀತಾಗುತ್ತಿದೆ. ಸಂಸದೆಯೊಬ್ಬರ ಬಗ್ಗೆಯೇ ಕೀಳಾಗಿ ಮಾತನಾಡಿರುವ ಕಲ್ಕಾಜಿ ಕ್ಷೇತ್ರದ ಬಿಜೆಪಿ ಶಾಸಕ ಅಭ್ಯರ್ಥಿ ರಮೇಶ್ ಬಿಧುರಿ ವಿರುದ್ಧ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಬೇಕು. ಪ್ರಿಯಾಂಕಾ ಗಾಂಧಿ ಬಗ್ಗೆ ನೀಡಿರುವ ಹೇಳಿಕೆಗೆ ದೇಶದ ಮಹಿಳೆಯರ ಕ್ಷಮೆಯಾಚಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಬಿಜೆಪಿಯು “ಮಹಿಳಾ ವಿರೋಧಿ ಪಕ್ಷ” ಎಂಬುದು ಈಗಾಗಲೇ ಸಾಬೀತಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿದ್ದ ಸಿ. ಟಿ. ರವಿ, ಹೆಚ್ ಐ ವಿ ಸೋಂಕಿತ ಹೆಣ್ಣು ಮಕ್ಕಳನ್ನು ಬಳಸಿ ರಾಜಕಾರಣಿಗಳ ಹನಿಟ್ರ್ಯಾಪ್ ನಡೆಸಿರುವ ಬಿಜೆಪಿ ಶಾಸಕ ಮುನಿರತ್ನ ಸೇರಿದಂತೆ ಬಿಜೆಪಿಯ ನಾಯಕರ ನಾಚಿಕೆಗೇಡಿತನ ವರ್ತನೆಯನ್ನು ಜನರು ಕಂಡಿದ್ದಾರೆ. ಬಿಜೆಪಿ ನಾಯಕರ ಮುಖವಾಡದ ಮುಖ ಬಯಲಾಗಿದೆ ಎಂದು ಕಿಡಿಕಾರಿದ್ದಾರೆ.
ತಾಯಂದಿರ ಬಗ್ಗೆ ಅವಹೇಳನ ಮಾಡುವಂಥ ಇಂತ ನಾಯಕರು ರಾಜಕೀಯದಲ್ಲಿ ಇರಬಾರದು. ಇಂಥವರಿಗೆ ಕಠಿಣ ಶಿಕ್ಷೆಯಾಗಬೇಕು. ಕ್ಷಮೆಯಾಚನೆ ಮಾಡದೇ ಮೊಂಡುವಾದ ಮುಂದುವರಿಸಿದರೆ ಹೋರಾಟ ನಡೆಸಬೇಕಾಗುತ್ತದೆ
ಎಂದು ಬಿ. ಎನ್. ವಿನಾಯಕ್ ಎಚ್ಚರಿಕೆ ನೀಡಿದ್ದಾರೆ.