SUDDIKSHANA KANNADA NEWS/ DAVANAGERE/ DATE:08-01-2025
ದಾವಣಗೆರೆ: ಹಿಂಸಾಮಾರ್ಗವನ್ನು ತ್ಯಜಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳಲು ನಿರ್ಧರಿಸಿರುವ ನಕ್ಸಲ್ ಚಳುವಳಿಗಾರರನ್ನು ಸ್ವಾಗತಿಸುತ್ತೇನೆ. ಇವರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ ಈಡೇರಿಸುವ ಪ್ರಯತ್ನವನ್ನು ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಮಾಡಲಿದೆ. ಇವರ ವಿರುದ್ದದ ಪ್ರಕರಣಗಳ ಶೀಘ್ರ ಇತ್ಯರ್ಥ್ಕಕ್ಕೆ ಅಗತ್ಯವಾದ ಕ್ರಮಗಳನ್ನೂ ನಮ್ಮ ಸರ್ಕಾರ ಕೈಗೊಳ್ಳಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಅನ್ಯಾಯ-ಶೋಷಣೆ ವಿರುದ್ದದ ಪ್ರಜಾಸತ್ತಾತ್ಮಕವಾಗಿ ನಡೆಸುವ ಹೋರಾಟವನ್ನು ನಾನು ಸದಾ ಗೌರವಿಸುತ್ತಾ ಬಂದವನು. ನಮ್ಮ ಸಂವಿಧಾನದಲ್ಲಿಯೂ ಇದಕ್ಕೆ ಅವಕಾಶ ಇದೆ.ಕಾಡಿನಲ್ಲಿದ್ದುಕೊಂಡು ಶಸ್ತ್ರಾಸ್ತ್ರಗಳ ಮೂಲಕ ಹೋರಾಟ ನಡೆಸುತ್ತಿದ್ದ ನಕ್ಸಲರು ಮನವೊಲಿಸಿ ಅವರನ್ನು ನಾಡಿಗೆ ಕರೆದು ತರುವ ಪ್ರಯತ್ನವನ್ನು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿಯೇ ನಮ್ಮ ಸರ್ಕಾರ ಪ್ರಾರಂಭಿಸಿತ್ತು. ಕಳೆದ ಅವಧಿಯಲ್ಲಿ ಹನ್ನೆರಡು ಮಂದಿ ನಕ್ಸಲರು ಶರಣಾಗಿ ಬಂದು ಮುಖ್ಯವಾಹಿನಿ ಸೇರಿಕೊಂಡಿದ್ದರು. ಇದೀಗ ಆರು ಮಂದಿ ನಕ್ಸಲರು ಬಂದಿದ್ದಾರೆ ಎಂದು ಹೇಳಿದ್ದಾರೆ.
ಶರಣಾಗಿರುವ ನಕ್ಸಲರು ಮುಂದಿನ ದಿನಗಳಲ್ಲಿ ಇವರೆಲ್ಲರೂ ಜವಾಬ್ದಾರಿಯುತ ನಾಗರಿಕರಾಗಿ ತಮ್ಮ ಬದುಕನ್ನು ಕಳೆಯಲಿದ್ದಾರೆ ಎಂಬ ನಂಬಿಕೆ ನನಗಿದೆ. ಈ ಆರು ಮಂದಿ ನಕ್ಸಲೀಯರ ಶರಣಾಗತಿಯ ನಂತರ ಕರ್ನಾಟಕ ನಕ್ಸಲ್ ಮುಕ್ತ
ರಾಜ್ಯವಾಗಿದೆ ಎಂಬ ವಿಶ್ವಾಸ ನನಗಿದೆ. ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರಲು ಪ್ರಯತ್ನಿಸಿದ ಪುನರ್ವಸತಿ ಸಮಿತಿ ಸದಸ್ಯರು ಮತ್ತಿತರ ಸಾಮಾಜಿಕ ಕಾರ್ಯಕರ್ತರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.