ಪಶ್ಚಿಮ ಬಂಗಾಳ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ “ಅಂಧಭಕ್ತರು” ಎಂಬ ಹೇಳಿಕೆಯನ್ನು ಪ್ರಶ್ನಿಸಿ ಪೋಸ್ಟ್ ಹಾಕಿದ್ದ ಪಶ್ಚಿಮ ಬಂಗಾಳದ ಸಹಾಯಕ ಪ್ರಾಧ್ಯಾಪಕಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಟ್ರೋಲ್ ಆಗಿದ್ದಾರೆ.
ಬಂಗಾಳದ ಅರ್ಪಿತಾ ಚಟರ್ಜಿ ಎಂಬ ಮಹಿಳೆ, ತಾವು ಇಂಗ್ಲಿಷ್ ಮತ್ತು ಶಿಕ್ಷಣ (Education) ವಿಷಯಗಳಲ್ಲಿ ಸ್ನಾತಕೋತ್ತರ ಪದವಿ (M.A) ಹಾಗೂ ಬಿ.ಎಡ್ ಪಡೆದಿದ್ದು, ಪಿಎಚ್‌ಡಿ ಮಾಡುತ್ತಿರುವುದಾಗಿ ತಮ್ಮ ಎಕ್ಸ್ (X) ಖಾತೆಯಲ್ಲಿ ಬರೆದುಕೊಂಡಿದ್ದರು.
ತಮ್ಮ ಪೋಸ್ಟ್‌ನಲ್ಲಿ ಅವರು, “ಆತ್ಮೀಯ ರಾಹುಲ್ ಗಾಂಧಿ, ನಾನು ಒಬ್ಬ ಹೆಮ್ಮೆಯ ಅಂಧಭಕ್ತ ಮತ್ತು ಸಹಾಯಕ ಪ್ರಾಧ್ಯಾಪಕಿ. ನಾನು ಎರಡು ಮಾಸ್ಟರ್ಸ್ ಡಿಗ್ರಿ (ಇಂಗ್ಲಿಷ್ ಮತ್ತು ಎಡುಕೇಷನ್) ಹೊಂದಿದ್ದೇನೆ, ಬಿ.ಎಡ್ ಕೂಡ ಮಾಡಿದ್ದು, ಪಿಎಚ್‌ಡಿ ಮಾಡುತ್ತಿದ್ದೇನೆ. ನಿಮ್ಮ ಪ್ರಕಾರ ಅಂಧಭಕ್ತ ಎಂದರೆ ‘ಮೂರ್ಖ’. ಹಾಗಿದ್ದರೆ ನಾನು ಮೂರ್ಖಳೇ? ನಿಮಗೇನಾದರೂ ಖಾತ್ರಿ ಇದೆಯೇ?” ಎಂದು ಪ್ರಶ್ನಿಸಿದ್ದರು.
ಆದರೆ, ನೆಟ್ಟಿಗರ ಗಮನ ಮಾತ್ರ ಅವರ ರಾಜಕೀಯ ಪ್ರಶ್ನೆಗಿಂತ ಹೆಚ್ಚಾಗಿ ಅವರ ಪೋಸ್ಟ್‌ನಲ್ಲಿದ್ದ ಇಂಗ್ಲಿಷ್ ವ್ಯಾಕರಣದ (Grammar) ತಪ್ಪುಗಳ ಮೇಲೆಯೇ ನೆಟ್ಟಿತ್ತು. ಇಂಗ್ಲಿಷ್‌ನಲ್ಲಿ ಎಂ.ಎ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದರೂ, “having two master’s degree” (ಬಹುವಚನಕ್ಕೆ ‘degrees’ ಎಂದು ಬಳಸಬೇಕಿತ್ತು) ಹಾಗೂ “pursuing PhD” (‘pursuing a PhD’ ಎಂದು ಇರಬೇಕಿತ್ತು) ಎಂದು ಬರೆದ ತಪ್ಪುಗಳನ್ನು ಬಳಕೆದಾರರು ಎತ್ತಿ ತೋರಿಸಿದರು.
ರಾಜಕೀಯ ಹೇಳಿಕೆ ನೀಡಲು ಹೋದ ಪ್ರೊಫೆಸರ್‌ಗೆ ನೆಟ್ಟಿಗರು ಇಂಗ್ಲಿಷ್ ವ್ಯಾಕರಣ ತಿದ್ದುಪಡಿ ಮಾಡುವ ಮೂಲಕ ಉಚಿತ “ಗ್ರ್ಯಾಮರ್ ಕ್ಲಾಸ್” ತೆಗೆದುಕೊಂಡಂತಾಗಿದೆ ಎಂದು ಹಲವರು ಹಾಸ್ಯ ಮಾಡಿದ್ದಾರೆ.





Leave a comment