SUDDIKSHANA KANNADA NEWS/ DAVANAGERE/ DATE:29-12-2024
ದಾವಣಗೆರೆ: ಮಾಜಿ ಮುಖ್ಯಮಂತ್ರಿ, ಸಂಸತ್ ಸದಸ್ಯ ಜಗದೀಶ್ ಶೆಟ್ಟರ್, ಶಾಸಕ ಮಹೇಶ್ ಟೆಂಗಿನಕಾಯಿ, ಕೇಂದ್ರದ ಮಾಜಿ ಸಚಿವ ಡಾ. ಜಿ.ಎಂ.ಸಿದ್ದೇಶ್ವರರವರು ಮಾಜಿ ಮಹಾನಗರಪಾಲಿಕೆ ಸದಸ್ಯ ಶಿವನಹಳ್ಳಿ ರಮೇಶ್ ಅವರ ಮನೆಯಲ್ಲಿ ಮನ್ ಕಿ ಬಾತ್ ಕಾರ್ಯಕ್ರಮ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ, ಸಂಸತ್ ಸದಸ್ಯರಾದ ಜಗದೀಶ್ ಶೆಟ್ಟರ್ ರವರು ಮಾತನಾಡಿ, ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ದಿನ ನಿತ್ಯದ ಆಡಳಿತ ಸಮಸ್ಯೆಗಳ ಕುರಿತು ದೇಶದ ನಾಗರಿಕರೊಂದಿಗೆ ಸಂವಾದ ನಡೆಸುವುದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಉದ್ದೇಶವಾಗಿದೆ. ಈ ಕಾರ್ಯಕ್ರಮವನ್ನು ದೇಶದ ಕೋಟಿ ಕೋಟಿ ಜನರು ವೀಕ್ಷಿಸುತ್ತಿದ್ದಾರೆ. ಇದರಿಂದ ಕೇಂದ್ರ ಸರ್ಕಾರದ ಉದ್ದೇಶ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಲೋಚನೆಗಳನ್ನು ಜನ ಸಾಮಾನ್ಯರು ಪರಸ್ಪರ ಚರ್ಚಿಸುವ ಮೂಲಕ ದೇಶದ ಜನ ಸಾಮಾನ್ಯರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಜಿ.ಎಂ.ಸಿದ್ದೇಶ್ವರರವರು ಮಾತನಾಡಿ, ಪ್ರತಿ ತಿಂಗಳು ಕೊನೆ ಭಾನುವಾರ ಬೆಳಿಗ್ಗೆ 11 ಗಂಟೆಯಿಂದ ಅರ್ಧ ಗಂಟೆ ಮಾತ್ರ ಮನ್ ಕಿ ಬಾತ್ ಕಾರ್ಯಕ್ರಮ ಇರುತ್ತದೆ. 2014ರ ಅಕ್ಟೋಬರ್ 3ನೇ ದಿನಾಂಕ ದಿಂದ ಪ್ರಾರಂಭವಾದ ಈ ಕಾರ್ಯಕ್ರಮ ಇಂದಿನವರೆಗೆ ಸುಮಾರು 150ಕ್ಕೂ ಸಂಚಿಕೆಗಳಲ್ಲಿ ಮೂಡಿ ಬಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಬಿ.ಪಿ.ಹರೀಶ್, ಜಿಲ್ಲಾ ಬಿಜೆಪಿ ಚುನಾವಣಾಧಿಕಾರಿ ತುಮಕೂರು ಬೈರಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಕಡ್ಲೆಬಾಳ್, ಅನಿಲಕುಮಾರನಾಯ್ಕ, ಮಹಾನಗರಪಾಲಿಕೆ ಸದಸ್ಯ ಆರ್. ಶಿವಾನಂದ, ಮುಖಂಡರಾದ ಹೆಚ್.ಎನ್.ಶಿವಕುಮಾರ, ಶಿವರಾಜ ಪಾಟೀಲ್, ಅತಿಥ್ ಅಂಬರಕರ್, ಶಾಮನೂರು ಹರೀಶ್ ಮುಂತಾದವರು ಉಪಸ್ಥಿತರಿದ್ದರು.