SUDDIKSHANA KANNADA NEWS/ DAVANAGERE/ DATE:06-02-2025
ದಾವಣಗೆರೆ: ಆಶ್ರಯ ವಸತಿ ಯೋಜನೆಯಡಿ ಹಕ್ಕು ಪತ್ರ ನೀಡಿಕೆ ವಿಚಾರ ಸಂಬಂಧ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ವಾಗ್ಯುದ್ಧವೇ ನಡೆಯಿತು. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಸ್. ಎ. ರವೀಂದ್ರನಾಥ್ ಅವರು ಶಾಸಕರಾಗಿದ್ದಾಗ ಮಾಡಲಾಗಿರುವ ಆಶ್ರಯ ನಿವೇಶನಗಳ ಹಕ್ಕುಪತ್ರ ನೀಡುವಂತೆ ವಿಪಕ್ಷ ಸದಸ್ಯರು ಪಟ್ಟುಹಿಡಿದರು. ಆದ್ರೆ, ಇದಕ್ಕೆ ಆಡಳಿತ ಪಕ್ಷದ ಸದಸ್ಯರಾದ ಎ. ನಾಗರಾಜ್ ಹಾಗೂ ಗಡಿಗುಡಾಳ್ ಮಂಜುನಾಥ್ ವಿರೋಧ ವ್ಯಕ್ತಪಡಿಸಿದರು.
ನಗರದ ಆರ್ಥಿಕವಾಗಿ ಹಿಂದುಳಿದ ಜನರ ಸ್ವಂತ ಸೂರು ಹೊದುವ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ನಗರದ ಹೊರವಲಯದಲ್ಲಿ ಜಮೀನು ಖರೀದಿಸಿ ಅಭಿವೃದ್ಧಿಪಡಿಸಿ ನಿವೇಶನಗಳನ್ನು ಹಂಚುವ ಯೋಜನೆಯಡಿ ಕೆ. ಬೇವಿನಹಳ್ಳಿ ಹಾಗೂ ಬನ್ನಿಕೋಡು ಸರ್ವೆೇ ನಂಬರ್ ಗಳ ವ್ಯಾಪ್ತಿಯಲ್ಲಿ ಒಟ್ಟು 45 ಎಕರೆ ಜಮೀನು ಖರೀದಿಸಲಾಗಿದೆ. ಇದರಲ್ಲಿ 26 ಎಕರೆಗಳ ಜಮೀನನ್ನು ಅಭಿವೃದ್ಧಿಪಡಿಸಿ ಲೇ ಔಟ್ ನಿರ್ಮಿಸಿ ಒಟ್ಟು 966 ಜನ ವಸತಿ ರಹಿತರಿಗೆ ಹಾಗೆಯೇ ಬಾತಿ ಗ್ರಾಮ ಹಾಗೂ ದೊಡ್ಡ ಬೂದಿಹಾಳ ಗ್ರಾಮದ ಬ;ಿ ಒಟ್ಟು 53 ಎಕರೆ ಜಮೀನು ಖರೀದಿಸಿ ಅಭಿವೃದ್ಧಿಪಡಿಸಲಾಗಿದೆ. 1403 ಜನ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ನ್ಯಾಯಾಲಯದ ತೀರ್ಪಿನ ನಂತರ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಬಜೆಟ್ ನಲ್ಲಿ ತಿಳಿಸಲಾಗಿದೆ.
ಈ ವಿಚಾರ ಕುರಿತಂತೆ ಪ್ರಶ್ನಿಸಿದ ಬಿಜೆಪಿ ಸದಸ್ಯ ಶಿವಾನಂದ್ ಅವರು, ಲೋಕಾಯುಕ್ತ ಕೇಸ್ ಇರುವುದು ದಾವಣಗೆರೆ ದಕ್ಷಿಣ ಕ್ಷೇತ್ರದ್ದು. ದಾವಣಗೆರೆ ಉತ್ತರ ಕ್ಷೇತ್ರದ್ದು ಯಾವ ಕೇಸ್ ಲೋಕಾಯುಕ್ತದಲ್ಲಿ ಇಲ್ಲ. ಆದರೂ ಹಕ್ಕುಪತ್ರ ನೀಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ. ಆಯುಕ್ತರು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಪಟ್ಟುಹಿಡಿದರು.
ಈ ವೇಳೆ ಮಧ್ಯಪ್ರವೇಶಿಸಿದ ಮೇಯರ್ ಕೆ. ಚಮನ್ ಸಾಬ್ ಅವರು, ಉತ್ತರ ವಿಧಾನಸಭಾ ಕ್ಷೇತ್ರದಲ್ಲಿನ ಆಶ್ರಯ ಫಲಾನುಭವಿಗಳ ಆಯ್ಕೆ ವಿಚಾರದಲ್ಲಿ ಕೆಲ ತೊಂದರೆಗಳಿವೆ. ಹರಿಹರ ಕ್ಷೇತ್ರಕ್ಕೆ ದಾವಣಗೆರೆ ಮತದಾರರ ಸೇರ್ಪಡೆಯಾಗುತ್ತದೆ. ಈ ಕಾರಣಕ್ಕೆ ಹಕ್ಕುಪತ್ರ ನೀಡಿಲ್ಲ. ಮೇಲಾಗಿ ಹಕ್ಕುಪತ್ರ ನೀಡುವುದು ನಾನಲ್ಲ. ಆಶ್ರಯ ಸಮಿತಿ. ಈ ಸಮಿತಿಯ ಅಧ್ಯಕ್ಷರನ್ನು ಕೇಳಿ. ದಾವಣಗೆರೆ ದಕ್ಷಿಣದಲ್ಲಿ ಹೆಚ್ಚು ಕಡಿಮೆ ಆಗಿದೆ. ಈ ಕಾರಣಕ್ಕೆ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಕೆ. ಎಂ. ವೀರೇಶ್ ಅವರು, ಮಾಯಕೊಂಡ ವಿಧಾನಸಭಾ ಕ್ಷೇತ್ರದ ಗ್ರಾಮಗಳನ್ನು ದಾವಣಗೆರೆಗೆ ಸೇರಿಸಿಕೊಂಡು ನಿವೇಶನ ಹಂಚಿಕೆ ಮಾಡಿಲ್ವಾ? ಆಗ ಒಂದು ಸಂವಿಧಾನ, ಕಾನೂನು ಇತ್ತು, ಈಗ ಒಂದು ಕಾನೂನು, ಸಂವಿಧಾನ ಇದೆಯಾ ಎಂದು ಪ್ರಶ್ನಿಸಿದರು. ದಾವಣಗೆರೆ ಭೀಷ್ಮ ಎಂದು ಕರೆಯಿಸಿಕೊಳ್ಳುವ ಎಸ್. ಎ. ರವೀಂದ್ರನಾಥ್ ಅವರು ಬಡವರಿಗೆ ಸೂರು ಒದಗಿಸುವ ಕೆಲಸ ಮಾಡಿದ್ದಾರೆ. ಟೆಂಟ್ ಹಾಕಿಕೊಂಡು, ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದಾರೆ. ಚೇಳು, ಹಾವುಗಳ ಕಾಟದ ಮಧ್ಯೆ ಬದುಕು ಸಾಗಿಸುತ್ತಿದ್ದು, ಅವರ ಕಷ್ಟವನ್ನಾದರೂ ಅರಿತು ಹಕ್ಕುಪತ್ರ ನೀಡುವಂತೆ ಒತ್ತಾಯಿಸಿದರು.
ಆಗ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯರಾದ ಎ. ನಾಗರಾಜ್ ಮತ್ತು ಗಡಿಗುಡಾಳ್ ಮಂಜುನಾಥ್, ಫಲಾನುಭವಿಗಳ ಆಯ್ಕೆ ವಿಚಾರದಲ್ಲಿ ಭಾರೀ ಹಗರಣ ನಡೆದಿದೆ. ಹಣ ಪಡೆದು ನಿವೇಶನ ನೀಡಲಾಗುತ್ತಿದೆ. ನಾಳೆಯೇ ಬೇಕಾದರೆ ಹಣ ಕೊಟ್ಟವರ ಕ್ಯೂ ನಿಲ್ಲಿಸುತ್ತೇನೆ. ಹಣ ಕೊಟ್ಟವರನ್ನು ಕರೆದುಕೊಂಡು ಬರುತ್ತೇನೆ ಎಂದರು. ಆಗ ಬಿಜೆಪಿ ಸದಸ್ಯರು ಕರೆದುಕೊಂಡು ಬನ್ನಿ. ಹಣ ಕೊಟ್ಟವರ ಹೆಸರು ಬಹಿರಂಗಪಡಿಸಿ. ಇಲ್ಲಿಗೆ ಕರೆಯಿಸಿ ಎಂದು ಸವಾಲೆಸೆದರು. ಈ ಸವಾಲು ಸ್ವೀಕರಿಸಿದ ಎ. ನಾಗರಾಜ್ ನಾಳೆಯೇ ಕರೆದುಕೊಂಡು ಬರುತ್ತೇನೆ. ಹಣ ವಾಪಸ್ ಕೊಡಿಸಬೇಕು ಎಂದರು. ಈ ವೇಳೆ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಮೊಬೈಲ್ ತೆಗೆದ ಎ. ನಾಗರಾಜ್ ನಡೆಗೆ ಬಿಜೆಪಿ ಸದಸ್ಯರು ಭಾರೀ ವಿರೋಧ ವ್ಯಕ್ತಪಡಿಸಿದರು.
ಶಿವಾನಂದ ಮಾತನಾಡಿ ಅವ್ಯವಹಾರ ಆಗಿದ್ದರೆ, ಹಣ ಪಡೆದಿದ್ದರೆ ತನಿಖೆ ನಡೆಸಿ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿ. ಅರ್ಹರಿಗೆ ನೀಡಿ. ಭ್ರಷ್ಟಾಚಾರವಾಗಿದ್ದರೆ ತನಿಖೆ ನಡೆಸಿ, ಅನರ್ಹರನ್ನು ತೆಗೆದು ಅರ್ಹರಿಗೆ ಹಕ್ಕುಪತ್ರ ವಿತರಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಎಸ್. ಟಿ. ವೀರೇಶ್ ಸೇರಿದಂತೆ ಬಿಜೆಪಿ ಸದಸ್ಯರು ಅನುಮೋದಿಸಿದರು. ಈ ವೇಳೆ ಮಾತನಾಡಿದ ಕೆ. ಚಮನ್ ಸಾಬ್ ಅವರು, ಈ ಕೇಸ್ ಅನ್ನು ಸಿಒಡಿಗೆ ನೀಡೋಣ. ಅಧಿಕಾರಿಗಳು ಈ ಬಗ್ಗೆ ನೋಡಿಕೊಳ್ಳಿ ಎಂದು ಹೇಳಿದರು.
ಶಿವಾನಂದ್ ಅವರು ಆಯುಕ್ತರು ಸ್ಪಷ್ಟನೆ ನೀಡಬೇಕೆಂದು ಪದೇ ಪದೇ ಪಟ್ಟುಹಿಡಿದರೂ ಆಯುಕ್ತರು ಉತ್ತರ ಕೊಡಲು ಹೋದಾಗ ಕಾಂಗ್ರೆಸ್ ನವರು ಅಡ್ಡಿಪಡಿಸಿದ ಘಟನೆಯೂ ನಡೆಯಿತು. ಆಯುಕ್ತೆ ರೇಣುಕಾ ಅವರು ನಾಗರಾಜ್ ಅವರೇ ಕುಳಿತುಕೊಳ್ಳಿ. ಎರಡು ನಿಮಿಷ ಟೈಂ ಕೊಡಿ. ಮಾಹಿತಿ ನೀಡುತ್ತೇನೆ ಎಂದ್ರು. ಆದ್ರೆ ಎ. ನಾಗರಾಜ್ ಅವರು ಬೇರೆ ವಿಚಾರ ಪ್ರಸ್ತಾಪಿಸಿದರು. ಹಲವು ಬಾರಿ ಮನವಿ ಮಾಡಿದರೂ ಆಯುಕ್ತರು ಉತ್ತರಿಸಲಿಲ್ಲ.
ಕೆ. ಎಂ. ವೀರೇಶ್ ಮಾತನಾಡಿ, ಕೈ ಮುಗಿದು ಮನವಿ ಮಾಡುತ್ತೇನೆ. ಬಡವರಿಗೆ ಹಕ್ಕುಪತ್ರ ನೀಡಿ ಪುಣ್ಯ ಕಟ್ಟಿಕೊಳ್ಳಿ. ಬಡವರ ಮೇಲೆ ಯಾಕೆ ಕಾಂಗ್ರೆಸ್ ನವರಿಗೆ ಸಿಟ್ಟು. ಜನರು ನಿತ್ಯವೂ ಹಕ್ಕುಪತ್ರ ನೀಡಿಸುವಂತೆ ಕೇಳಿಕೊಳ್ಳುತ್ತಲೇ ಇದ್ದಾರೆ. ಮನವಿ ಪುರಸ್ಕರಿಸಿ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಮಂಜುನಾಥ್ ಈ ಬಗ್ಗೆ ತನಿಖೆಯಾಗಬೇಕು. ಬ್ರಹ್ಮಾಂಡ ಭ್ರಷ್ಟಾಚಾರ ಆಗಿದೆ ಎಂದರು.