SUDDIKSHANA KANNADA NEWS/ DAVANAGERE/ DATE:06-02-2025
ದಾವಣಗೆರೆ: ಮಹಾನಗರ ಪಾಲಿಕೆಯ ಕೊನೆಯ ಬಜೆಟ್ ಮಂಡನೆ ಮಾಡಲಾಯಿತು. 2025-26ನೇ ಸಾಲಿಗೆ 516.35 ಲಕ್ಷ ರೂಪಾಯಿ ಉಳಿತಾಯ ಬಜೆಟ್ ಅನ್ನು ಮಂಡಿಸಲಾಯಿತು.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಉರ್ ಬಾನು ಪರವಾಗಿ ಮೇಯರ್ ಕೆ. ಚಮನ್ ಸಾಬ್ ಅವರು ಮಂಡಿಸಿದರು.
ಮಹಾನಗರ ಪಾಲಿಕೆಯಲ್ಲಿ 3433.11 ಲಕ್ಷ ರೂಪಾಯಿ ಆರಂಭಿಕ ಶಿಲ್ಕು ಇದ್ದರೆ, ವಾಣಿಜ್ಯ ಮಳಿಗೆಗಳ ಬಾಡಿಗೆ, ಕಟ್ಟಡ ಪರವಾನಗಿ, ಅಭಿವೃದ್ಧಿ ಶಿಲ್ಕು, ಉದ್ದಿಮೆ ಪರವಾನಗಿ, ರಸ್ತೆ ಕಡಿತ ಇತರೆ ಮೂಲಗಳಿಂದ 21056, 45 ಲಕ್ಷ ಒಟ್ಟು ರಾಜಸ್ವ ಜಮೆ, ಮಾನವ ಸಂಪನ್ಮೂಲ, ಹೊರ ಗುತ್ತಿಗೆ, ಇಂಧನ ಮತ್ತು ವಿದ್ಯುತ್ ವೆಚ್ಚ, ಜಮೀನು ಖರೀದಿ, ಕಚೇರಿ ಕಟ್ಟಡಗಳು ಸೇರಿದಂತೆ ಒಟ್ಟು 20291.59 ಲಕ್ಷ ಬಂಡವಾಳ ಪಾವತಿ ಮಾಡಬೇಕಿದೆ.
22782.11 ಅಸಾಮಾನ್ಯ ಪಾವತಿ ನಿರೀಕ್ಷೆ ಇದೆ. ಮಹಾನಗರ ಪಾಲಿಕೆ ಆದಾಯ, ನಿರೀಕ್ಷಿತ ಅನುದಾನದಲ್ಲಿ ಖರ್ಚು ತೆಗೆದರೆ 516.35 ಲಕ್ಷ ರೂಪಾಯಿ ಉಳಿತಾಯ ಬಜೆಟ್ ಮಂಡನೆ ಮಾಡಲಾಗಿದೆ ಎಂದು ಚಮನ್ ಸಾಬ್ ತಿಳಿಸಿದರು.
ದಾವಣಗೆರೆ ಮಹಾನಗರ ಪಾಲಿಕೆಗೆ ಆಸ್ತಿ ತೆರಿಗೆ ಅತೀ ಪ್ರಮುಖ ಆದಾಯದ ಮೂಲವಾಗಿದೆ. ರಾಜ್ಯ ಸರ್ಕಾರ ಅನಧಿಕೃತ ಆಸ್ತಿ ಗಳಿಗೆ ಬಿ ಖಾತೆ ನೀಡುವ ಯೋಜನೆ ತರುತ್ತಿರುವಂತೆ 14 ಸಾವಿರ ಆಸ್ತಿ ಗಳನ್ನು ಆಸ್ತಿ ತೆರಿಗೆ ಜಾಲಕ್ಕೆ ಒಳಪಡಿಸಲಾಗುವುದು. ಇದರಿಂದ 6000 ಲಕ್ಷ ತೆರಿಗೆ ಸಂಗ್ರಹಣ ನಿರೀಕ್ಷೆ ಮಾಡಲಾಗಿದೆ ಎಂದು ಹೇಳಿದರು.
ನೀರಿನ ಕಂದಾಯದಿಂದ 600 ಲಕ್ಷ, ವಾಣಿಜ್ಯ ಮಳಿಗೆಗಳಿಂದ 150 ಲಕ್ಷ, ವ್ಯಾಪಾರ ಪರವಾನಗಿಯಿಂದ 165 ಲಕ್ಷ ರಾಜಸ್ವ ನಿರೀಕ್ಷಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಹೃದಯ ಭಾಗದಲ್ಲಿರುವ ದಾವಣಗೆರೆಯಲ್ಲಿ ರಾಜ್ಯ ಸರ್ಕಾರ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ 50 ಲಕ್ಷ ವಂತಿಗೆ ನೀಡಲು ಅನುದಾನ ಕಾಯ್ದಿರಿಸಿದೆ ಎಂದು ಮಾಹಿತಿ ನೀಡಿದರು.
ತಾಲೂಕು ಕನ್ನಡ ಸಮ್ಮೇಳನಕ್ಕೆ 25 ಸಾವಿರ ರೂಪಾಯಿ, ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 50 ಲಕ್ಷ ರೂಪಾಯಿ ನೀಡಲು ನಿರ್ಧರಿಸಲಾಗಿದೆ. ಪಾಲಿಕೆ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಪ್ರತಿ ಬಾರಿಯೂ ಅದ್ಧೂರಿಯಾಗಿ ಹಾಗೂ ಅರ್ಥಗರ್ಭಿತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಪರಂಪರೆ ಮುಂದುವರಿಸುವ ನಿಟ್ಟಿನಲ್ಲಿ 50 ಲಕ್ಷ ರೂಪಾಯಿ ಮೀಸಲಿಡಲಾಗಿದೆ ಎಂದು ತಿಳಿಸಿದರು.
ಕಲ್ಯಾಣ ಯೋಜನೆಗಳ ಅನುಷ್ಠಾನ, ಕಿರುತೋಟ, ತಾರಸಿ ಉದ್ಯಾನವನ ಪ್ರೋತ್ಸಾಹಿಸಲು ಆಸಕ್ತರಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದ್ದು, ಪ್ರಾರಂಭಿಕವಾಗಿ 50 ಲಕ್ಷ ರೂಪಾಯಿ ಮೀಸಲಿಡಲಾಗಿದೆ. ಗರಡಿ ಮನೆಗಳ ನಿರ್ಮಾಣ, ನವೀಕರಣ, ಮೇಯರ್ ಕಪ್ ಪಂದ್ಯಾವಳಿಗೆ ಅನುದಾನ ಮೀಸಲಿರಿಸಲಾಗಿದೆ. ಕ್ರೀಡಾ ಚಟುವಟಿಕೆಗಳ ಉತ್ತೇಜನಕ್ಕಾಗಿ ನಿಧಿ ಇದ್ದು, 20 ಲಕ್ಷ ರೂಪಾಯಿ ಕ್ರಿಯಾ ಯೋಜನೆ ತಯಾರಿಸಿ ಜಾರಿಗೊಳಿಸಲಾಗುವುದು. ರಾಜ್ಯಮಟ್ಟದ ಮಹಾನಗರ ಪಾಲಿಕೆಗಳ ನೌಕರರ ಕ್ರೀಡಾಕೂಟಕ್ಕೆ 25 ಲಕ್ಷ ರೂಪಾಯಿ ಕಾಯ್ದಿರಿಸಲಾಗಿದೆ ಎಂದು ವಿವರಿಸಿದರು.
ಪಾಲಿಕೆಯ ಖಾಯಂ ನೌಕರರು, ಅಧಿಕಾರಿಗಳು, ಸದಸ್ಯರಿಗೆ ಗುಂಪು ವೈದ್ಯಕೀಯ ವಿಮೆ, ತಪಾಸಣೆ ಶಿಬಿರ, ವಸತಿಗೃಹ ನಿರ್ಮಾಣಕ್ಕೂ ಅನುದಾನ ಒದಗಿಸಲಾಗುವುದು ಎಂದು ಚಮನ್ ಸಾಬ್ ತಿಳಿಸಿದರು.
ಸಭೆಯಲ್ಲಿ ಉಪ ಮೇಯರ್ ಸೋಗಿ ಶಾಂತಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಹುಲ್ಲುಮನಿ ಗಣೇಶ್, ಉರುಬಾನ್, ಸುಧಾ ಇಟ್ಟಿಗುಡಿ ಮಂಜುನಾಥ್, ಆಶಾ ಉಮೇಶ್, ವಿಪಕ್ಷ ನಾಯಕ ಆರ್.ಎಲ್. ಶಿವಪ್ರಕಾಶ್, ಮಾಜಿ ಮೇಯರ್ ಎಸ್. ಟಿ. ವೀರೇಶ್, ಶಿವಾನಂದ್, ಕೆ. ಎಂ. ವೀರೇಶ್ ಇತರರು ಇದ್ದರು.