SUDDIKSHANA KANNADA NEWS/ DAVANAGERE/ DATE:29-12-2024
ಬೆಂಗಳೂರು: ಕರ್ನಾಟಕದ ಸಿಂಗಂ ಎಂದೇ ಖ್ಯಾತಗೊಂಡಿದ್ದ ಕೆ. ಅಣ್ಣಾಮಲೈ ಐಪಿಎಸ್ ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದು ಹಳೆ ವಿಚಾರ. ಆದ್ರೆ, ಈಗ ಅಣ್ಣಾ ವಿವಿಯಲ್ಲಿ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣ ತಮಿಳುನಾಡಿನಲ್ಲಿ ಕಿಚ್ಚು ಹಚ್ಚಲು ಕಾರಣವೇ ಕೆ. ಅಣ್ಣಾಮಲೈ. ಯಾಕೆಂದರೆ ವಿದ್ಯಾರ್ಥಿನಿಗೆ ನ್ಯಾಯ ಸಿಗದ ಕಾರಣ ತನಗೆ ಛಡಿಯೇಟು ಹೊಡೆದುಕೊಂಡು ಡಿಎಂಕೆ ಸರ್ಕಾರ ಕಿತ್ತೊಗೆಯುವ ಪ್ರತಿಜ್ಞೆ ಮಾಡಿದ್ದಾರೆ.
ತಮಿಳುನಾಡಿನಲ್ಲಿ ಚಾಟಿಏಟಿಗೆ ತನ್ನದೇ ಆದ ಇತಿಹಾಸ ಪರಂಪರೆ ಇದೆ. ತಪ್ಪು ಮಾಡಿದವರು, ಶಿಕ್ಷೆಗೆ ಗುರಿಯಾಗಬೇಕಾದವರು ತಪ್ಪಿಸಿಕೊಂಡರೆ, ಒಳ್ಳೆಯದಾಗಲಿ ಈ ಛಡಿ ಏಟು ಹೊಡೆದುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ.
ಎಷ್ಟೋ ದೇಗುಲಗಳಲ್ಲಿ ಚಾಟಿಏಟಿಗೂ ದೇವರಿಗೂ ಅವಿನಾವಭಾವ ಸಂಬಂಧ ಇದೆ ಎಂದೂ ನಂಬಲಾಗುತ್ತದೆ.
ದೈವಶ್ರದ್ಧೆ, ಆಚಾರ ವಿಚಾರಗಳು ನಂಬಿಕೆಯನ್ನು ಆಧರಿಸಿದ್ದು, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾದ ಕೆ. ಅಣ್ಣಾಮಲೈ ತಮ್ಮ ನಂಬಿಕೆಯನ್ನು ಆಧರಿಸಿ ದೈವ ಶ್ರದ್ಧೆಯನ್ನು ಪ್ರದರ್ಶಿಸುವ ಮೂಲಕ ತಮಿಳುನಾಡಿನ ಅಣ್ಣಾ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಿರುವ ಅತ್ಯಾಚಾರ ಘಟನೆಯ ವಿರುದ್ಧ ಹೋರಾಟಕ್ಕಿಳಿದು ‘ದಾಷ್ಟ್ಯತನದಿಂದ ವರ್ತಿಸುತ್ತಿರುವ’ ಡಿಎಂಕೆ ಸರ್ಕಾರವು ಆರೋಪಿತ ದುಷ್ಕರ್ಮಿಗಳ ವಿರುದ್ಧ ಕಾನೂನಿನ ಚಾಟಿ ಬೀಸದ ಧೋರಣೆಯನ್ನು ಪ್ರತಿಭಟನಾ ಸೂಚಕವಾಗಿ ದೈವಶ್ರದ್ಧೆಯ ಚಾಟಿ ಏಟು ಬಾರಿಸಿಕೊಂಡು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕ ಹೇಳಿದೆ.
ಈ ಪ್ರತಿಭಟನೆಯನ್ನು ಕೆಲವು ವಿಕೃತಿಗಳು ವಿಡಂಬನೆ ಮಾಡುತ್ತಿವೆ, ಸ್ತ್ರೀ ಕುಲದ ರಕ್ಷಣೆಗಾಗಿ, ಸಂತ್ರಸ್ತ ವಿದ್ಯಾರ್ಥಿನಿಗೆ ನ್ಯಾಯ ದೊರಕಿಸಿಕೊಡಲು ವಿನೂತನ ರೀತಿಯಲ್ಲಿ ಪ್ರತಿಭಟಿಸಿದ ಕ್ರಮವನ್ನು ನಾವೆಲ್ಲರೂ ಬೆಂಬಲಿಸಬೇಕಿದೆ. ಈ ಸಂಬಂಧ ವಿಕೃತಿ ಮೆರೆಯುವವರ ಹೇಳಿಕೆ ಹಾಗೂ ವರ್ತನೆಯನ್ನು ಖಂಡಿಸಬೇಕಿದೆ ಎಂದು ಹೇಳಿದೆ.
ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವವರೆಗೆ ಪಾದರಕ್ಷೆಗಳನ್ನು ತೊಡುವುದಿಲ್ಲ ಎಂದು ಭೀಷ್ಮ ಪ್ರತಿಜ್ಞೆ ತೊಟ್ಟಿರುವ ಕೆ.ಅಣ್ಣಾಮಲೈ ಅವರ ಶಪಥದ ಹೋರಾಟ ಗೆಲುವಿನ ಗುರಿ ಮುಟ್ಟಲಿ ಎಂದು ಹಾರೈಸೋಣ. ತಮಿಳುನಾಡಿನ ಮಹಿಳಾ ಪೀಡಕ ಡಿಎಂಕೆ ಸರ್ಕಾರದ ವಿರುದ್ಧ ಆರಂಭವಾಗಿರುವ ದಿಟ್ಟ ಹೋರಾಟ ಬಿಜೆಪಿಯ ಬದ್ಧತೆ ಏನೆಂಬುದನ್ನು ಸಾಕ್ಷೀಕರಿಸಿದೆ ಎಂದು ಬಿಜೆಪಿ ಹೇಳಿದೆ.