SUDDIKSHANA KANNADA NEWS/ DAVANAGERE/ DATE:04-12-2024
ದಾವಣಗೆರೆ: ದಾವಣಗೆರೆ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲಲು ಪ್ರಮುಖ ಕಾರಣ ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ. ಕಾಂಗ್ರೆಸ್ ನ ಮೂವರು ಅಭ್ಯರ್ಥಿಗಳಿಗೆ ಹಣ ನೀಡಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿದ್ದಾರೆ. ಇಂಥವರ ವಿರುದ್ಧ ಕ್ರಮ ಏಕಿಲ್ಲ. ಸಿದ್ದೇಶ್ವರ ಅವರು ಹಣ ಮತ್ತು ಬೆಂಬಲ ನೀಡಿರುವ ಕುರಿತಂತೆ ಸೂಕ್ತ ದಾಖಲಾತಿಗಳು ನಮ್ಮ ಬಳಿ ಇದೆ. ಸಮಯ ಬಂದಾಗ ಬಿಡುಗಡೆ ಮಾಡುತ್ತೇವೆ ಎಂದು ಬಿಜೆಪಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ಅವರು ಗಂಭೀರ ಆರೋಪ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಕುರಿತಂತೆ ಹೈಕಮಾಂಡ್ ಕೇಳಿದರೆ ಸೂಕ್ತ ದಾಖಲಾತಿಗಳು, ಸಾಕ್ಷ್ಯಗಳನ್ನು ನೀಡುತ್ತೇವೆ. ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುವುದಿಲ್ಲ. ದಾಖಲೆಗಳು ಹಾಗೂ ಸೂಕ್ತ ಮಾಹಿತಿ ಇಟ್ಟುಕೊಂಡೇ ಮಾತನಾಡುತ್ತಿರುವ ಪರಿಜ್ಞಾನ ಇದೆ. ವಿನಾಕಾರಣ ಆರೋಪ ಮಾಡುವುದನ್ನು ಬಿಡಬೇಕು ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಜಿಲ್ಲೆಯ ಮೂರು ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಜಿ. ಎಂ. ಸಿದ್ದೇಶ್ವರ ಅವರು ಹಣ ಕೊಟ್ಟಿದ್ದಕ್ಕೆ ಸಾಕ್ಷಿಯಿದೆ. ಅಧಿಕೃತ ಬಿಜೆಪಿ ಅಭ್ಯರ್ಥಿಗಳ ಸೋಲಿಸಲು ಸಂಚು ರೂಪಿಸಿದರು. ನಮ್ಮಲ್ಲಿ ದಾಖಲೆಗಳು ಇವೆ. ಸಮಯ ಬಂದಾಗ ಬಿಡುಗಡೆ ಮಾಡುತ್ತೇವೆ. ಹೈಕಮಾಂಡ್ ಕರೆದರೆ ನಾವೂ ಹೇಳುತ್ತೇವೆ. ದಾಖಲೆ ಮುಂದಿಟ್ಟು ಮಾತನಾಡುತ್ತೇವೆ ಎಂದು ನೇರವಾಗಿ ಸಿದ್ದೇಶ್ವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಜೆಪಿ ಸೋಲಲು ಕಾರಣ ಸಿದ್ದೇಶ್ವರ, ಬಿ. ಪಿ. ಹರೀಶ್ ಅವರಂಥ ನಾಲ್ಕೈದು ನಾಯಕರೇ ಕಾರಣ. ಒಡೆದು ಆಳಬೇಕೆಂಬ ಉದ್ದೇಶದಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆದರು. ದುಡ್ಡು, ಅಧಿಕಾರ,
ದುರಹಂಕಾರದಿಂದಾಗಿ ಬಿಜೆಪಿ ಪಕ್ಷವು ಕೇವಲ 66 ಸ್ಥಾನಗಳನ್ನು ಪಡೆಯಬೇಕಾಯಿತು. ಇವರು ತಪ್ಪು ಮಾಡಬಹುದು. ಬೇರೆ ಯಾರೂ ತಪ್ಪು ಮಾಡಬಾರದು ಎಂಬ ಉಪದೇಶ ಮಾಡುತ್ತಾರೆ. ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಹೆಚ್ಚಿನ ರ್ಯಾಲಿ ಮಾಡಿದ್ದರು. ಆದ್ರೆ, ಎಲ್ಲಾ ವಿಚಾರಗಳ ಕುರಿತಂತೆ ಗಮನ ಹರಿಸಲು ಆಗದು. ಇಂಥವರು ಮಾಡಿದ ಕುತಂತ್ರದಿಂದಲೇ ಬಿಜೆಪಿ ಸೋಲಬೇಕಾಯಿತು. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದ್ದು, ಪಕ್ಷ ವಿರೋಧಿಗಳಿಗೆ ತಕ್ಕ ಶಿಕ್ಷೆ ನೀಡಲಿದೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.
ಗಾಳಿಯಲ್ಲಿ ಗುಂಡು ಹೊಡೆಯಲ್ಲ. ರಾಜ್ಯಮಟ್ಟದಲ್ಲಿ ಯಾರ ಜೊತೆಗೆ ಸೇರಿ ರಾತ್ರಿ ಕರ್ಮ ಮಾಡಿದ್ದಾರೆ ಎಂಬ ಬಗ್ಗೆ ಹೈಕಮಾಂಡ್ ಗೆ ಹೇಳುತ್ತೇವೆ. ರಾತ್ರಿ ಕರ್ಮ ಏನು ಎನ್ನುವುದು ಈಗಲೇ ಹೇಳಲ್ಲ. ಮುಂದಿನ ದಿನಗಳಲ್ಲಿ ಹೇಳುತ್ತೇನೆ. ಸಿದ್ದೇಶ್ವರ ಅವರಂಥ ದುರಹಂಕಾರಿಗಳಿಂದ ಬಿಜೆಪಿ ಸೋಲಬೇಕಾಯಿತು. ಇಂಥವರನ್ನು ಗೆಲ್ಲಿಸಿದರೆ ಮುಂದೆ ಕಷ್ಟವಾಗಬಹುದು ಎಂದುಕೊಂಡು ಕಾರ್ಯಕರ್ತರೇ ಮತ ಹಾಕಿಲ್ಲ ಎಂದು ಮಾಡಾಳ್ ಮಲ್ಲಿಕಾರ್ಜುನ್ ತಿಳಿಸಿದರು.