ಹೈದರಾಬಾದ್: ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಕುಕಟ್‌ಪಲ್ಲಿಯಲ್ಲಿರುವ ಪ್ರಸಿದ್ಧ ‘ಕಿಂಗ್ಸ್ ಅಂಡ್ ಕ್ವೀನ್ಸ್’ (ಕ್ಲಬ್ ಮಸ್ತಿ) ಪಬ್ ಮೇಲೆ ಸೈಬರಾಬಾದ್ ಪೊಲೀಸರು ಭರ್ಜರಿ ದಾಳಿ ನಡೆಸಿದ್ದಾರೆ. ಯುವ ಮಹಿಳಾ ಐಪಿಎಸ್ ಅಧಿಕಾರಿ, ಕುಕಟ್‌ಪಲ್ಲಿ ಡಿಸಿಪಿ ರಿತಿ ರಾಜ್ (DCP Riti Raj) ಅವರ ನೇತೃತ್ವದಲ್ಲಿ ಖುದ್ದಾಗಿ ಭೇಟಿ ನೀಡಿ ಸೀಕ್ರೆಟ್ ಆಪರೇಚನ್ ನಡೆಸುವ ಮೂಲಕ ಪಬ್‌ನಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆಗಳನ್ನು ಬಯಲಿಗೆಳೆದಿದ್ದಾರೆ.
ಅನೈತಿಕ ದಂಧೆ ಮತ್ತು ನಿಯಮ ಉಲ್ಲಂಘನೆ:
ಪೊಲೀಸರಿಗೆ ಸಿಕ್ಕ ಖಚಿತ ಮಾಹಿತಿ ಆಧರಿಸಿ ಭಾನುವಾರ ಮುಂಜಾನೆ ಈ ಅನಿರೀಕ್ಷಿತ ದಾಳಿ (Surprise Raid) ನಡೆಸಲಾಯಿತು. ಪಬ್‌ನಲ್ಲಿ ಯುವತಿಯರನ್ನು ಬಳಸಿ ಗ್ರಾಹಕರಿಂದ ಹಣ ಸುಲಿಗೆ ಮಾಡಲಾಗುತ್ತಿತ್ತು ಹಾಗೂ ಅನೈತಿಕ ಮಾನವ ಸಾಗಣಿಕೆ (ಸೆಕ್ಸ್ ದಂಧೆ) ನಡೆಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದರೊಂದಿಗೆ, ಅಪ್ರಾಪ್ತರಿಗೆ ಮದ್ಯ ಸರಬರಾಜು ಮಾಡುವುದು, ನಿಗದಿತ ಸಮಯ ಮೀರಿ ಪಬ್ ನಡೆಸುವುದು ಮತ್ತು ಪೊಲೀಸರಿಂದ ಯಾವುದೇ ಮಾನ್ಯತೆ ಪತ್ರ (NOC) ಪಡೆಯದೆ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬಂಧನ ಮತ್ತು ಕಾನೂನು ಕ್ರಮ:
ಈ ಕಾರ್ಯಾಚರಣೆಯ ವೇಳೆ ಪಬ್‌ನ ಮ್ಯಾನೇಜರ್ ಸೇರಿದಂತೆ 4 ಮಹಿಳೆಯರು ಮತ್ತು 5 ಪುರುಷ ಸಿಬ್ಬಂದಿಯನ್ನು (ಒಟ್ಟು 9 ಮಂದಿ) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಅನೈತಿಕ ಟ್ರಾಫಿಕಿಂಗ್ ತಡೆ ಕಾಯ್ದೆಯಡಿ (PITA) ಕೆಪಿಎಚ್‌ಬಿ ಪೊಲೀಸ್ ಠಾಣೆಯಲ್ಲಿ ಹೊಸ ಪ್ರಕರಣ ದಾಖಲಿಸಲಾಗಿದೆ. ಈ ಪಬ್ 2025 ರಲ್ಲೂ ಇಂತಹದೇ ಹಲವು ಕಾನೂನು ಬಾಹಿರ ಪ್ರಕರಣಗಳಲ್ಲಿ ಭಾಗಿಯಾಗಿತ್ತು ಎಂದು ಪೊಲೀಸ್ ದಾಖಲೆಗಳು ಹೇಳಿವೆ.





Leave a comment