ನವದೆಹಲಿ: ಜಾಗತಿಕ ಇ-ಕಾಮರ್ಸ್ ದೈತ್ಯ ಅಮೆಜಾನ್ (Amazon) ಕಂಪನಿಯು ಮತ್ತೊಮ್ಮೆ ಉದ್ಯೋಗ ಕಡಿತದ (Layoffs) ಬಿಸಿ ಮುಟ್ಟಿಸಿದೆ. ತನ್ನ ಡಿವೈಸಸ್ (Devices) ವಿಭಾಗದಲ್ಲಿ ಸುಮಾರು 250 ಉದ್ಯೋಗಗಳನ್ನು ಕಡಿತಗೊಳಿಸಿರುವುದಾಗಿ ಕಂಪನಿ ಅಧಿಕೃತವಾಗಿ ಖಚಿತಪಡಿಸಿದೆ. Kindle ಇ-ರೀಡರ್‌ಗಳು ಮತ್ತು Echo ಸ್ಮಾರ್ಟ್ ಸ್ಪೀಕರ್‌ಗಳನ್ನು ತಯಾರಿಸುವ ಈ ವಿಭಾಗದಲ್ಲಿ ಮುಖ್ಯವಾಗಿ ಸಾಫ್ಟ್‌ವೇರ್ ಅಭಿವೃದ್ಧಿ (Software Development) ಪಾತ್ರಗಳಲ್ಲಿ ಕೆಲಸ ಮಾಡುತ್ತಿದ್ದವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ.
ಸಂಕಷ್ಟಕ್ಕೀಡಾದ ನೌಕರರಿಗೆ ಮುಂಜಾನೆಯೇ ಇಮೇಲ್ ಹಾಗೂ ಟೆಕ್ಸ್ಟ್ ಮೆಸೇಜ್‌ಗಳ ಮೂಲಕ ಉದ್ಯೋಗ ಕಡಿತದ ಕಹಿ ಸುದ್ದಿಯನ್ನು ತಲುಪಿಸಲಾಗಿದೆ. ಅಮೆಜಾನ್ ಉಪಾಧ್ಯಕ್ಷೆ ಚೆರಿ ರಾಬಿನ್ಸನ್ ಅವರ ಹೆಸರಿನಲ್ಲಿ ಕಳುಹಿಸಲಾದ ಇಮೇಲ್‌ನಲ್ಲಿ, ಕಂಪನಿಯ ರಚನೆಯ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಿದ ನಂತರ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಭವಿಷ್ಯದ ಪ್ರಾಡಕ್ಟ್ ರೋಡ್‌ಮ್ಯಾಪ್‌ಗೆ ತಕ್ಕಂತೆ ಕಂಪನಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಮೆಜಾನ್ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಉದ್ಯೋಗ ಕಡಿತದ ವಿವರ: ಅಮೆಜಾನ್‌ನ ಎಕೋ ಮತ್ತು ಕೈಂಡಲ್ ಡಿವೈಸಸ್ ವಿಭಾಗದಲ್ಲಿ ಸುಮಾರು 250 ಉದ್ಯೋಗಿಗಳನ್ನು ಏಕಾಏಕಿ ವಜಾಗೊಳಿಸಲಾಗಿದೆ.
ಎಐ (AI) ತಂತ್ರಜ್ಞಾನಕ್ಕೆ ಒತ್ತು: ತಂತ್ರಜ್ಞಾನ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಪ್ರಮುಖ ಪಾತ್ರ ವಹಿಸುತ್ತಿರುವ ಹಿನ್ನೆಲೆಯಲ್ಲಿ, ಸಾಫ್ಟ್‌ವೇರ್ ಇಂಜಿನಿಯರಿಂಗ್ ವಿಭಾಗದಲ್ಲಿ ಕಂಪನಿಯು ಭಾರೀ ಬದಲಾವಣೆಗಳಿಗೆ ಮುಂದಾಗಿದೆ.
ಸತತ ಉದ್ಯೋಗ ಕಡಿತ: ಈ ತಿಂಗಳ ಆರಂಭದಲ್ಲಿ ಕೋರ್ ರಿಟೇಲ್ ವಿಭಾಗದಲ್ಲೂ ಅಮೆಜಾನ್ ಸುಮಾರು 1,000 ಉದ್ಯೋಗಗಳನ್ನು ಕಡಿತಗೊಳಿಸಿತ್ತು. ಪ್ರಸಕ್ತ ವರ್ಷ ಜಾಗತಿಕವಾಗಿ ಲಕ್ಷಾಂತರ ಟೆಕ್ ಉದ್ಯೋಗಗಳು ನಷ್ಟವಾಗಿವೆ.





Leave a comment