ಬೆಳಗಾವಿ/ಮಹಾರಾಷ್ಟ್ರ: ಮಹಾರಾಷ್ಟ್ರದ ಬುಲ್ಢಾಣಾ ಕ್ಷೇತ್ರದ ಶಿವಸೇನೆ (ಶಿಂಧೆ ಬಣ) ಶಾಸಕ ಸಂಜಯ್ ಗಾಯಕ್ವಾಡ್ ಅವರು ರೈತರ ಆತ್ಮಹತ್ಯೆ ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆಯು ರಾಜಕೀಯ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ರೈತರು ಆತ್ಮಹತ್ಯೆಯಂತಹ ತೀವ್ರ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು ತಮ್ಮ ಸಮಸ್ಯೆಗಳನ್ನು ಜನಪ್ರತಿನಿಧಿಗಳ ಬಳಿ ಹೇಳಿಕೊಳ್ಳಬೇಕು ಎಂದು ಸಲಹೆ ನೀಡುವ ಭರದಲ್ಲಿ, ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಅಂತಿಮಯಾತ್ರೆ ಹಾಗೂ ಅಂತ್ಯಸಂಸ್ಕಾರದಲ್ಲಿ ಯಾರೂ ಭಾಗವಹಿಸಬಾರದು ಎಂದು ವಿವಾದಾತ್ಮಕ ಸಲಹೆ ನೀಡಿದ್ದಾರೆ.
ವಂಚಿತ್ ಬಹುಜನ ಆಘಾಡಿ ಮುಖ್ಯಸ್ಥ ಪ್ರಕಾಶ್ ಅಂಬೇಡ್ಕರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸುವ ವೇಳೆ ಶಾಸಕರು ಈ ಮಾತುಗಳನ್ನಾಡಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ಅವರ ಕುಟುಂಬ, ಪತ್ನಿ ಮತ್ತು ಮಕ್ಕಳು ಬೀದಿಗೆ ಬೀಳುತ್ತಾರೆ ಹಾಗೂ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಅಂತ್ಯಸಂಸ್ಕಾರ ಬಹಿಷ್ಕಾರದ ವಿವಾದ: ರೈತರ ಆತ್ಮಹತ್ಯೆ ತಡೆಯಲು ಸಮಾಜವು ಕಠಿಣ ನಿಲುವು ತಾಳಬೇಕು ಎಂದಿರುವ ಶಾಸಕ ಗಾಯಕ್ವಾಡ್, ಆತ್ಮಹತ್ಯೆ ಮಾಡಿಕೊಂಡ ರೈತರ ಅಂತಿಮ ವಿಧಿಗಳಿಗೆ ಯಾರೂ ಹೋಗಬಾರದು ಎಂದು ಹೇಳಿದ್ದಾರೆ.
ಸಮಸ್ಯೆಗಳಿದ್ದರೆ ನೇರ ಸಂಪರ್ಕಕ್ಕೆ ಕರೆ: ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ಕೃತ್ಯಕ್ಕೆ ಮುಂದಾಗದೆ, ತಮ್ಮ ಸಮಸ್ಯೆಗಳ ಬಗ್ಗೆ ಸ್ಥಳೀಯ ಶಾಸಕರು, ಸಂಸದರು ಅಥವಾ ನೇರವಾಗಿ ಸರ್ಕಾರಕ್ಕೆ ಪತ್ರ ಬರೆದು ಸಹಾಯ ಕೋರಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಕುಟುಂಬದ ಸಂಕಷ್ಟದ ಬಗ್ಗೆ ಕಳಕಳಿ: ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ರೈತರು ತಮ್ಮ ಕುಟುಂಬದವರನ್ನು ಮತ್ತು ಮಕ್ಕಳನ್ನು ನಡುನೀರಿನಲ್ಲಿ ಬಿಟ್ಟು ಅನ್ಯಾಯವೆಸಗುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಶಾಸಕ ಸಂಜಯ್ ಗಾಯಕ್ವಾಡ್ ಅವರು ಈ ರೀತಿಯ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ಇದು ಮೊದಲಲ್ಲ, ಈ ಹಿಂದೆಯೂ ಅವರ ಮಾತುಗಳು ಪಕ್ಷಕ್ಕೆ ಮುಜುಗರ ತಂದಿದ್ದು, ವ್ಯಾಪಕ ಟೀಕೆಗಳಿಗೆ ಗುರಿಯಾಗಿದ್ದಾರೆ.





Leave a comment