ದಾವಣಗೆರೆ: ರಾಜ್ಯ ಸರ್ಕಾರ ನಮ್ಮ ಕ್ಷೇತ್ರಗಳಿಗೆ ಅವಶ್ಯಕತೆಗೆ ಅನುಗುಣವಾಗಿ ಅನುದಾನ ನೀಡುತ್ತಿದ್ದು, ಈ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕಾದ ಕರ್ತವ್ಯ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹೇಳಿದರು.
ಸೋಮವಾರದಂದು ದಾವಣಗೆರೆ ಮಹಾನಗರ ಪಾಲಿಕೆಯ ವತಿಯಿಂದ ವಿವಿಧ ಯೋಜನೆಯಡಿಯಲ್ಲಿ ಸುಮಾರು 2.5 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ದಾವಣಗೆರೆ ನಗರದ ಮತ್ತು ಜಿಲ್ಲೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ನಿರಂತರ ಅನುದಾನ ನೀಡುತ್ತಿದೆ. ಈ ಅನುದಾನದಲ್ಲಿ ಅವಶ್ಯಕತೆ ಇರುವ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸದೇ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ತಾಕೀತು ಮಾಡಿದರು.
ಮಹಾಪೌರರಾದ ಕೆ.ಚಮನ್ಸಾಬ್ ಮಾತನಾಡಿ ದಾವಣಗೆರೆಗೆ ಶಾಮನೂರು ಕುಟುಂಬದ ಕೊಡುಗೆ ಸಾಕಷ್ಟಿದ್ದು, ಅವರ ಅಭಿವೃದ್ಧಿ ಚಿಂತನೆ ಇತರರಿಗೆ ಮಾದರಿ ಆಗಿದೆ. ಸ್ವತಃ ಮುಖ್ಯಮಂತ್ರಿಗಳೇ ದಾವಣಗೆರೆ ಅಭಿವೃದ್ಧಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ ಮಾತನಾಡಿ ದಾವಣಗೆರೆಯ ವಿವಿಧ ಕಡೆಗಳಲ್ಲಿ ಇ-ಸ್ವತ್ತು ಮಾಡಲು ಕೆಲವು ಗೊಂದಲ ಇದ್ದು, ಅವುಗಳನ್ನು ಬಗೆಹರಿಸುವಂತೆ ಸಂಸದರು, ಸಚಿವರು, ಶಾಸಕರು ಸೂಚನೆ ನೀಡಿದ್ದು ನಾಗರೀಕರು ತಮ್ಮ ದಾಖಲೆಗಳನ್ನು ಸರಿಪಡಿಕೊಳ್ಳುವಂತೆ ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಉಪ ಮಹಾಪೌರರಾದ ಸೋಗಿ ಶಾಂತಕುಮಾರ್, ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಸುಧಾ ಇಟ್ಟಿಗುಡಿ ಮಂಜುನಾಥ್, ಸವಿತಾ ಗಣೇಶ್ ಹುಲ್ಮನಿ, ಆಶಾ ಉಮೇಶ್, ಸದಸ್ಯರುಗಳಾದ ನೂರ್ ಜಹಾನ್ ಬೀ, ಜಾಕೀರ್ ಅಲಿ, ಜಿ.ಡಿ.ಪ್ರಕಾಶ್, ಕಬೀರ್ ಅಲಿ, ದಾದಾಪೀರ್ (ಅಯ್ಯಪ್ಪ ದಾದು) ಶಫೀಕ್ಪಂಡಿತ್, ಮಹಾನಗರ ಪಾಲಿಕೆ ಅಭಿಯಂತರರು, ಮುಖಂಡರುಗಳಾದ ಫಾರೂಕ್, ಷರೀಪ್ ಸಾಬ್ ಮತ್ತಿತರರು ಉಪಸ್ಥಿತರಿದ್ದರು.