ಜೈಪುರ / ಸಿಕಾರ್: ತಿಂಗಳಿಗೆ ಕೇವಲ ಹತ್ತು ಸಾವಿರ ರೂಪಾಯಿ ವೇತನ ಪಡೆಯುತ್ತಿದ್ದ ರಾಜಸ್ತಾನದ 22 ವರ್ಷದ ಯುವಕನೊಬ್ಬನ ಬ್ಯಾಂಕ್ ಖಾತೆಗೆ ದಿಢೀರನೆ ಬರೋಬ್ಬರಿ 10 ಸಾವಿರ ಕೋಟಿ ರೂಪಾಯಿ (₹೧,೦೦,೦೦,೦೦,೦೦,೦೦೦) ಜಮೆಯಾಗಿರುವ ಅಪರೂಪದ ಹಾಗೂ ಆಶ್ಚರ್ಯಕರ ಘಟನೆ ರಾಜಸ್ಥಾನದ ಸಿಕಾರ್‌ನಲ್ಲಿ ನಡೆದಿದೆ.
ಆದರೆ ಈ ಸಂತೋಷ ಹೆಚ್ಚು ಹೊತ್ತು ಉಳಿಯಲಿಲ್ಲ. ಬ್ಯಾಂಕ್ ತಾಂತ್ರಿಕ ದೋಷದಿಂದಾಗಿ ಈ ಬೃಹತ್ ಮೊತ್ತದ ಜೊತೆಗೆ ಯುವಕನ ಖಾತೆಯಲ್ಲಿದ್ದ ಅಸಲಿ ಹಣಕ್ಕೂ ತಕ್ಷಣವೇ ತಡೆ ಬಿದ್ದಿದೆ.
ಸಿಕಾರ್‌ನ ಸಾಲಾಸರ್ ಬಸ್ ನಿಲ್ದಾಣದ ಬಳಿಯ ಮೆಡಿಕಲ್ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿರುವ ಸಮೀರ್ ಖಾನ್ ಎಂಬ ಯುವಕ, ಬುಧವಾರ ತನ್ನ ಮೊಬೈಲ್ ರೀಚಾರ್ಜ್ ಮಾಡಲು ಬ್ಯಾಂಕಿಂಗ್ ಆ್ಯಪ್ ಓಪನ್ ಮಾಡಿ ಬ್ಯಾಲೆನ್ಸ್ ತಪಾಸಣೆ ನಡೆಸಿದ್ದಾನೆ. ಈ ವೇಳೆ ಆತನ ಖಾತೆಯಲ್ಲಿ ಬ್ಯಾಲೆನ್ಸ್ ‘ಶೂನ್ಯ’ (Zero) ಎಂದು ತೋರಿಸಿದ್ದರಿಂದ ಅನುಮಾನಗೊಂಡು ವಿವರ ಪರಿಶೀಲಿಸಿದಾಗ, ಬರೋಬ್ಬರಿ 10 ಸಾವಿರ ಕೋಟಿ ರೂಪಾಯಿ ಜಮೆಯಾಗಿ ‘ಲಿಯನ್’ ಬಿದ್ದಿರುವುದು ಬೆಳಕಿಗೆ ಬಂದಿದೆ.
ಇದರಿಂದಾಗಿ ಆತನ ಖಾತೆಯಲ್ಲಿದ್ದ ಸ್ವಂತ ಹಣವಾದ 55,000 ರೂಪಾಯಿಯನ್ನು ಸಹ ಹಿಂಪಡೆಯಲು ಸಾಧ್ಯವಾಗದೆ ಕಂಗಾಲಾಗಿದ್ದಾನೆ. ತಕ್ಷಣವೇ ಮಾಲೀಕ ಧೀರಜ್ ಶರ್ಮಾ ಅವರೊಂದಿಗೆ ಸೈಬರ್ ಪೊಲೀಸ್ ಠಾಣೆ ಹಾಗೂ ಬ್ಯಾಂಕ್ ಶಾಖೆಗೆ ತೆರಳಿ ದೂರು ನೀಡಿದಾಗ, ತಾಂತ್ರಿಕ ದೋಷದಿಂದ ಈ ಅಡಚಣೆ ಉಂಟಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ಸ್ಪಷ್ಟಪಡಿಸಿ ದೋಷ ಸರಿಪಡಿಸಿದ್ದಾರೆ.
₹10,000 ಕೋಟಿ ತಾಂತ್ರಿಕ ಜಮೆ: ಮೆಡಿಕಲ್ ಸ್ಟೋರ್ ಉದ್ಯೋಗಿಯ ಖಾತೆಗೆ ಬ್ಯಾಂಕ್ ತಾಂತ್ರಿಕ ದೋಷದಿಂದ ₹10,000 ಕೋಟಿ ಜಮೆಯಾಗಿತ್ತು.
ಅಸಲಿ ಹಣವೂ ಸೀಜ್: ಬೃಹತ್ ಮೊತ್ತ ಜಮೆಯಾದ ಬೆನ್ನಲ್ಲೇ ಬ್ಯಾಂಕ್ ಖಾತೆಗೆ ಲಿಯನ್ ಬಿದ್ದಿದ್ದರಿಂದ ಯುವಕನ ಖಾತೆಯಲ್ಲಿದ್ದ ₹೫೫,೦೦೦ ಅಸಲಿ ಹಣವೂ ಬ್ಲಾಕ್ ಆಗಿತ್ತು.
ತಾಂತ್ರಿಕ ದೋಷ ಪರಿಹಾರ: ಪೊಲೀಸರು ಹಾಗೂ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿದ ನಂತರ ತಾಂತ್ರಿಕ ದೋಷ ಸರಿಪಡಿಸಿ, ಹಳೆಯ ಬ್ಯಾಲೆನ್ಸ್ ಪುನಃಸ್ಥಾಪಿಸಲಾಗಿದೆ.





Leave a comment