Home ದಾವಣಗೆರೆ ರಾಜಕೀಯವಾಗಿ ಮುಗಿಸಲು ಜಮೀರ್ ಅಹ್ಮದ್ ಖಾನ್ ಆಡಿಯೋ ವೈರಲ್: ಇದ್ರ ಹಿಂದೆ ಎಸ್.ಎಸ್. ಮಲ್ಲಿಕಾರ್ಜುನ್ ಷಡ್ಯಂತ್ರ – ಯಶವಂತರಾವ್ ಜಾಧವ್ ಗಂಭೀರ ಆರೋಪ
ದಾವಣಗೆರೆಕ್ರೈಂ ನ್ಯೂಸ್ಬೆಂಗಳೂರು

ರಾಜಕೀಯವಾಗಿ ಮುಗಿಸಲು ಜಮೀರ್ ಅಹ್ಮದ್ ಖಾನ್ ಆಡಿಯೋ ವೈರಲ್: ಇದ್ರ ಹಿಂದೆ ಎಸ್.ಎಸ್. ಮಲ್ಲಿಕಾರ್ಜುನ್ ಷಡ್ಯಂತ್ರ – ಯಶವಂತರಾವ್ ಜಾಧವ್ ಗಂಭೀರ ಆರೋಪ

Share
ಜಮೀರ್ ಅಹ್ಮದ್ ಖಾನ್
Share

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆ ಪ್ರಯುಕ್ತ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಕಾಂಗ್ರೆಸ್ ಮುಖಂಡ ಸಿರಾಜ್ ಅಹಮದ್ ನಡುವೆ ನಡೆದಿದೆ ಎನ್ನಲಾದ ಆಡಿಯೋ ಸಂಭಾಷಣೆ ವೈರಲ್ ಆಗಿರುವ ಹಿಂದೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ದೊಡ್ಡ ಷಡ್ಯಂತ್ರ ಅಡಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಗಂಭೀರವಾಗಿ ಆರೋಪಿಸಿದ್ದಾರೆ.

ದಾವಣಗೆರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ಇಬ್ಬರೂ ಸೇರಿ ಜಮೀರ್ ಅಹ್ಮದ್ ಅವರಿಗೆ ಸಚಿವ ಸ್ಥಾನ ಸಿಗದಂತೆ ತಡೆಯಲು ಈ ಆಡಿಯೋ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಜಮೀರ್ ಅವರನ್ನು ರಾಜಕೀಯವಾಗಿ ಹಣಿಯುವ ತಂತ್ರ ರೂಪಿಸಲಾಗಿದೆ ಎಂದರು.

‘ಆರ್ಟಿಕಲ್ 21’ರ ಉಲ್ಲಂಘನೆ: 

ಜಮೀರ್ ಅಹ್ಮದ್ ಹಾಗೂ ಸಿರಾಜ್ ಅಹಮದ್ ನಡುವಿನ ಖಾಸಗಿ ಸಂಭಾಷಣೆಯನ್ನು ರೆಕಾರ್ಡ್ ಮಾಡಿದ್ದು ಯಾರು? ಅದನ್ನು ಸುದ್ದಿವಾಹಿನಿಗಳಿಗೆ ತಲುಪಿಸಿದವರು ಯಾರು? ಎಂದು ಪ್ರಶ್ನಿಸಿದ ಜಾಧವ್, “ಇಬ್ಬರು ವ್ಯಕ್ತಿಗಳ ನಡುವಿನ ಖಾಸಗಿ ಮಾತುಕತೆಯನ್ನು ಕದ್ದಾಲಿಕೆ ಮಾಡುವುದು ಸಂವಿಧಾನದ ಆರ್ಟಿಕಲ್ 21ರ ಪ್ರಕಾರ ಮಹಾ ಅಪರಾಧ. ಸರ್ಕಾರದ ಪ್ರಭಾವಿ ಮಂತ್ರಿಯೊಬ್ಬರ ಫೋನ್ ರೆಕಾರ್ಡ್ ಮಾಡುವುದು ಸಾಮಾನ್ಯ ಜನರಿಂದ ಸಾಧ್ಯವಿಲ್ಲ. ಈ ತಾಂತ್ರಿಕ ವ್ಯವಸ್ಥೆ ಇರುವುದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (SP) ಕಚೇರಿಯಲ್ಲಿ ಮಾತ್ರ. ಹಾಗಾಗಿ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಎಸ್. ಮಲ್ಲಿಕಾರ್ಜುನ್ ಅವರೇ ಇದರ ಮೂಲ ಸೂತ್ರದಾರರು” ಎಂದು ಆರೋಪಿಸಿದರು.

‘ಬೆನ್ನಿಗೆ ಚೂರಿ ಹಾಕುವುದು ರಕ್ತದಲ್ಲೇ ಬಂದಿದೆ’

“ಬೆನ್ನಿಗೆ ಚೂರಿ ಹಾಕುವುದು ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ರಕ್ತದಲ್ಲೇ ಬಂದಿರುವ ಗುಣ” ಎಂದು ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ ಯಶವಂತರಾವ್ ಜಾಧವ್, 1996ರ ಲೋಕಸಭಾ ಚುನಾವಣೆಯಲ್ಲಿ ಚೆನ್ನಯ್ಯ ಒಡೆಯರ್ ಅವರಿಗೆ ಕಾಂಗ್ರೆಸ್ ಯಾವ ರೀತಿ ದ್ರೋಹ ಮಾಡಿತ್ತು ಎಂಬುದನ್ನು ನೆನಪಿಸಿದರು. ಅಷ್ಟೇ ಅಲ್ಲದೆ, ಬಾಪೂಜಿ ವಿದ್ಯಾಸಂಸ್ಥೆಯನ್ನು ಕಟ್ಟಿದ ಮಹಾನ್ ನಾಯಕರಾದ ಬಸಪ್ಪ, ರಾಜನಹಳ್ಳಿ ಮುದ್ದುರಾಯಪ್ಪ ಸೇರಿದಂತೆ ಹಲವರನ್ನು ಸಂಸ್ಥೆಯಿಂದ ಹೊರಹಾಕಿ, ಅದನ್ನು ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡು ಸಾವಿರಾರು ಕೋಟಿ ಲೂಟಿ ಹೊಡೆದಿದ್ದಾರೆ. ಇದಕ್ಕಿಂತ ಬೆನ್ನಿಗೆ ಚೂರಿ ಹಾಕುವ ಉದಾಹರಣೆ ಮತ್ತೊಂದಿಲ್ಲ ಎಂದರು.

ಶಾಸಕತ್ವ ಅಮಾನತ್ತಿಗೆ ಹಾಗೂ ನ್ಯಾಯಾಂಗ ತನಿಖೆಗೆ ಆಗ್ರಹ

ಹಿಂದೆ ರಾಮಕೃಷ್ಣ ಹೆಗಡೆ ಅವರ ಸರ್ಕಾರ ಫೋನ್ ಕದ್ದಾಲಿಕೆ ವಿವಾದದಿಂದಲೇ ಪತನಗೊಂಡಿದ್ದನ್ನು ನೆನಪಿಸಿದ ಅವರು, ಈ ಪ್ರಕರಣವನ್ನು ರಾಜ್ಯ ಸರ್ಕಾರ ಲಘುವಾಗಿ ಪರಿಗಣಿಸಬಾರದು ಎಂದರು.

 ಪ್ರಮುಖ ಬೇಡಿಕೆಗಳು:

– ಜಮೀರ್ ಆಡಿಯೋ ಕದ್ದಾಲಿಕೆ ಪ್ರಕರಣವನ್ನು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು.

– ತನಿಖೆ ಮುಗಿಯುವವರೆಗೆ ಶಾಸಕರಾದ ಎಸ್.ಎಸ್. ಮಲ್ಲಿಕಾರ್ಜುನ ಮತ್ತು ಸಮರ್ಥ್ ಶಾಮನೂರ್ ಅವರ ಶಾಸಕತ್ವದ ಸದಸ್ಯತ್ವವನ್ನು ಅಮಾನತಿನಲ್ಲಿಡಬೇಕು.

– ತನಿಖೆಯಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಕೂಡಲೇ ಇವರನ್ನು ಶಾಸಕ ಸ್ಥಾನದಿಂದ ಹಾಗೂ ಪಕ್ಷದಿಂದ ವಜಾ ಮಾಡಬೇಕು.

ರಾಜ್ಯ ಸರ್ಕಾರ ಇವರನ್ನು ಮಂತ್ರಿ ಸ್ಥಾನಕ್ಕೆ ಪರಿಗಣಿಸಬಾರದು.

ಈ ಕುರಿತು ರಾಜ್ಯದ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು ಹಾಗೂ ಘನವೆತ್ತ ರಾಜ್ಯಪಾಲರಿಗೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸುವಂತೆ ಆಗ್ರಹಿಸಿ ಪತ್ರ ಬರೆಯಲಾಗುವುದು ಎಂದು ಯಶವಂತರಾವ್ ಜಾಧವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಗೋಷ್ಠಿಯಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಪಕ್ಷದ ಪರಾಜಿತ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ,  ಹದಡಿ ಹಾಲೇಶಪ್ಪ, ಬಿಜೆಪಿ ಯುವ ಮುಖಂಡ ಹಾಗೂ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಪಾಟೀಲ್, ಟಿಂಕರ್ ಮಂಜಣ್ಣ, ಶಂಕರಗೌಡ ಬಿರಾದಾರ್, ಕಿಶೋರ್, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

Share

Leave a comment

Leave a Reply

Your email address will not be published. Required fields are marked *