ದಾವಣಗೆರೆ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಆಂತರಿಕ ಅಸಮಾಧಾನ ಸ್ಫೋಟಗೊಂಡಿದೆ. ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಸಮರ್ಥ್ ಶಾಮನೂರು ಅವರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಮಾಜಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ವಿರುದ್ಧ ಕೆಪಿಸಿಸಿ ಅಧ್ಯಕ್ಷರಿಗೆ ಅಧಿಕೃತವಾಗಿ ದೂರು ಸಲ್ಲಿಕೆಯಾಗಿದೆ. ಮಾತ್ರವಲ್ಲ, ಜಮೀರ್ ಅಹ್ಮದ್ ಖಾನ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಆಗ್ರಹಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಅವರು, ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ನಿಯೋಜಿತ ಮುಖ್ಯಮಂತ್ರಿ ಡಿ. ಕೆ.
ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಿರಿಯ ನಾಯಕರಿಗೆ ಪತ್ರ ಬರೆದು ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಜಮೀರ್ ಅಹ್ಮದ್ ಖಾನ್ ಗೆ ಯಾವುದೇ ಕಾರಣಕ್ಕೂ ಸಚಿವ ಸಂಪುಟದಲ್ಲಿ ಸ್ಥಾನ ನೀಡಬಾರದು. ಆಡಿಯೋ
ವೈರಲ್ ಪ್ರಕರಣ ಇತ್ಯರ್ಥವಾಗುವವರೆಗೆ ಯಾವುದೇ ಸಚಿವ ಸ್ಥಾನಮಾನ ನೀಡಬಾರದು. ಸಮರ್ಥ್ ಶಾಮನೂರು ವಿರುದ್ಧ ಷಡ್ಯಂತ್ರ ರೂಪಿಸಿದ್ದೇ ಆದಲ್ಲಿ ಪಕ್ಷದಲ್ಲಿ ಇಂಥವರು ಇರಲೇಬಾರದು ಎಂದು ಆಗ್ರಹಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿರುವ ಆಡಿಯೋ ಕ್ಲಿಪ್ ಒಂದನ್ನು ಆಧರಿಸಿ ಈ ದೂರು ನೀಡಲಾಗಿದೆ. ಸದರಿ ಆಡಿಯೋದಲ್ಲಿ ಜಮೀರ್ ಅಹ್ಮದ್ ಖಾನ್ ಅವರು ತಮ್ಮ ಬೆಂಬಲಿಗ ಸಿರಾಜ್ ಅಹ್ಮದ್ ಜೊತೆ ಮಾತನಾಡುತ್ತಾ, “ಕಾಂಗ್ರೆಸ್
ಅಭ್ಯರ್ಥಿಗೆ ಮುಸ್ಲಿಂ ಮತಗಳು ಬೀಳಬಾರದು, ಕಾಂಗ್ರೆಸ್ ವೋಟ್‌ಗಳು ಮೈನಸ್ ಆಗಬೇಕು” ಎಂದು ನೇರವಾಗಿ ಸೂಚನೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೆ, ಹಸ್ತದ ಗುರುತಿಗೆ ಮತ ಹಾಕುವ ಬದಲಿಗೆ ಪಕ್ಷೇತರ ಅಥವಾ
ಇತರ ಸಂಘಟನೆಗಳ ‘ಕುಕ್ಕರ್’ ಗುರುತಿನ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಅಲ್ಪಸಂಖ್ಯಾತ ಸಮುದಾಯವನ್ನು ಪ್ರಚೋದಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹಾಗಾಗಿ, ಜಮೀರ್ ಅಹ್ಮದ್ ಅವರಂಥ ತಪ್ಪು ಮಾಡಿದವರಿಗೆ ಶಿಕ್ಷೆ
ಆಗಲೇಬೇಕು ಎಂದು ಒತ್ತಾಯಿಸಿದರು.
“ಪಕ್ಷದ ಹಿರಿಯ ನಾಯಕರಾಗಿ ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದುಕೊಂಡು, ಉಪಚುನಾವಣೆಯ ಸಂದರ್ಭದಲ್ಲಿ ಸ್ವಪಕ್ಷದ ಅಧಿಕೃತ ಅಭ್ಯರ್ಥಿಯ ಸೋಲಿಗೆ ಸಂಚು ರೂಪಿಸಿರುವುದು ತಳಮಟ್ಟದ ಕಾರ್ಯಕರ್ತರಲ್ಲಿ ತೀವ್ರ ನಿರಾಶೆ ಮತ್ತು
ಆಕ್ರೋಶವನ್ನು ಉಂಟುಮಾಡಿದೆ. ಇದು ಪಕ್ಷದ ಶಿಸ್ತು ಮತ್ತು ಸಿದ್ಧಾಂತಕ್ಕೆ ಬಗೆದ ದ್ರೋಹವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ತಕ್ಷಣವೇ ವೈರಲ್ ಆಗಿರುವ ಆಡಿಯೋ ಸಂಭಾಷಣೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಶಿಸ್ತು ಸಮಿತಿಗೆ ವಹಿಸಬೇಕು. ಪಕ್ಷದ ಘನತೆಗೆ ಧಕ್ಕೆ ತಂದಿರುವ ಮತ್ತು ಆಂತರಿಕವಾಗಿ ವಿಧ್ವಂಸಕ ಕೃತ್ಯ ಎಸಗಿರುವ ಮಾಜಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರ ವಿರುದ್ಧ ಸೂಕ್ತ ಕಾನೂನು ಮತ್ತು ಕಠಿಣ ಶಿಸ್ತು ಕ್ರಮ ಜರುಗಿಸಬೇಕು ಎಂದು ಪತ್ರದ ಮೂಲಕ ವಿನಂತಿಸಲಾಗಿದೆ. ದೂರಿನೊಂದಿಗೆ ವೈರಲ್ ಆಡಿಯೋದ ಸಿಡಿ/ಪೆನ್‌ಡ್ರೈವ್ ಹಾಗೂ ಮಾಧ್ಯಮಗಳ ವರದಿಗಳನ್ನು ಲಗತ್ತಿಸಿ ಸಲ್ಲಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಮಾಜಿ ಮೇಯರ್ ಕೆ. ಚಮನ್ ಸಾಬ್, ಪಾಲಿಕೆ ಮಾಜಿ ಸದಸ್ಯ ಜಾಕೀರ್ ಆಲಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆರ್. ಹೆಚ್. ನಾಗಭೂಷಣ್, ಸುರೇಶ್ ಮತ್ತಿತರರು ಹಾಜರಿದ್ದರು.
- Congress Anti Party Activity
- Congress Internal Clash
- Cooker Symbol
- D Basavaraj
- DAVANAGERE
- DAVANAGERE NEWS
- Davanagere South By-election
- Kannada News
- Karnataka Politics
- KPCC
- Samarth Shamanur
- Viral Audio Clip
- Zameer Ahmed Khan
- ಕರ್ನಾಟಕ ರಾಜಕಾರಣ
- ಕಾಂಗ್ರೆಸ್ ಪಕ್ಷ ವಿರೋಧಿ ಚಟುವಟಿಕೆ
- ಕಾಂಗ್ರೆಸ್ ಭಿನ್ನಮತ
- ಕುಕ್ಕರ್ ಗುರುತು
- ಕೆಪಿಸಿಸಿ
- ಜಮೀರ್ ಅಹ್ಮದ್ ಖಾನ್
- ಡಿ ಬಸವರಾಜ್
- ದಾವಣಗೆರೆ
- ದಾವಣಗೆರೆ ದಕ್ಷಿಣ ಉಪಚುನಾವಣೆ
- ವೈರಲ್ ಆಡಿಯೋ
- ಸಮರ್ಥ್ ಶಾಮನೂರು





Leave a comment