SUDDIKSHANA KANNADA NEWS/ DAVANAGERE/ DATE:19-11-2024
ದಾವಣಗೆರೆ: ಕಾರ್ಪೊರೇಟ್ ಪರ ಹಾಗೂ ರೈತ ವಿರೋಧಿ ಕೃಷಿ ನೀತಿ ಕೈಬಿಡಬೇಕು ಎಂದು ಒತ್ತಾಯಿಸಿ ಎಐಕೆಕೆಎಂಎಸ್ ಸಂಘಟನೆಯು ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ತೆರಳಿ ಮನವಿ ಸಲ್ಲಿಸಿತು.
ರಾಜ್ಯದ ಎಲ್ಲಾ ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕುಪತ್ರಗಳನ್ನು ನೀಡಲು ಎಲ್ಲಾ ಅವಶ್ಯಕ ಕ್ರಮಗಳನ್ನು ಕೈಗೊಳ್ಳಿ. ಈ ಕಾರಣಕ್ಕಾಗಿ ರೈತರ ಮೇಲೆ ಅನಾವಶ್ಯಕ ಕೇಸ್ಗಳನ್ನು ಹಿಂಪಡೆಯಿರಿ. ಅರಣ್ಯ ಇಲಾಖೆಯ ಕಿರುಕುಳವನ್ನು
ತಪ್ಪಿಸಬೇಕು. ರಾಜ್ಯದಲ್ಲಿ ಜಾರಿಗೆ ತರಲಾದ ಕರಾಳ ಕೃಷಿ ಕಾನೂನುಗಳಾದ ವಿದ್ಯುತ್ ಮಸೂದೆ, ಎಪಿಎಂಸಿ ಮಸೂದೆ, ಭೂ ಸುಧಾರಣೆ ಕಾಯ್ದೆಗಳನ್ನು ಕೂಡಲೇ ರದ್ದುಗೊಳಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಅವಶ್ಯಕ ವಸ್ತುಗಳ ಸಂಪೂರ್ಣ ಸರ್ಕಾರಿ ವ್ಯಾಪಾರವನ್ನು ಜಾರಿಗೊಳಿಸಬೇಕು. ಮತ್ತು ಕನಿಷ್ಟ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸಬೇಕು. ಹಾಗೂ ಸಿ2+50% ಸೂತ್ರದಡಿ ನಿಗದಿಯಾದ ಬೆಲೆಗೆ ರೈತರ ಬೆಳೆದ ಕೃಷಿ ಉತ್ಪನ್ನಗಳ
ಖರೀದಿಯನ್ನು ಖಚಿತಪಡಿಸಬೇಕು. ಕೃಷಿ ಕಾರ್ಮಿಕರಿಗೆ ವರ್ಷ ಪೂರ್ತಿ ಉದ್ಯೋಗ ಮತ್ತು ಸಮರ್ಪಕ ವೇತನವನ್ನು ಕೊಡಬೇಕು. ವಿದ್ಯುತ್ಕಾಯ್ದೆ 2023 ಅನ್ನು ವಾಪಸ್ ತೆಗೆದುಕೊಳ್ಳಬೇಕು. ರೈತರ ಪಂಪ್ಸೆಟ್ಗಳಿಗೆ ಸ್ಮಾರ್ಟ್ ಮೀಟರ್ ಹಾಕುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ರೈತರ ಕೃಷಿ ಸಾಲಗಳನ್ನು ಮನ್ನಾ ಮಾಡಬೇಕು. ಅರವತ್ತು ವರ್ಷಗಳನ್ನು ದಾಟಿದ ರೈತರಿಗೆ (ಮಾಸಿಕ ರೂ.10,000 ದಂತೆ) ಪಿಂಚಣಿಯನ್ನು ಕೊಡಬೇಕು. ಜಿಲ್ಲೆಯಲ್ಲಿ ಅತೀ ಹೆಚ್ಚು ಮೆಕ್ಕೆಜೋಳ ಮತ್ತು ಭತ್ತ ಬೆಳೆಗಳನ್ನು ಬೆಳೆಯುತ್ತಿದ್ದು, ಕೂಡಲೇ
ಖರೀದಿ ಕೇಂದ್ರಗಳನ್ನು ಸ್ಥಾಪಿಸಿ, ಯೋಗ್ಯ ಬೆಂಬಲ ಬೆಲೆಯನ್ನು ಘೋಷಿಸಿ ರೈತರಿಗೆ ದಾಸ್ತಾನು ಮಾಡಿಕೊಳ್ಳಲು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬೇಕು. ತೆಂಗು ಬೆಳೆಗಾರರಿಗೆ ಅನ್ಯಾಯವಾಗದಂತೆ ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸಿ ಸಂಸ್ಕರಣೆ
ಮತ್ತು ನಿರ್ವಹಣೆಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಮುಂಗಾರು ಮಳೆಯಿಂದ ಆಗಿರುವ ಬೆಳೆ ಹಾನಿಗೆ ಕೂಡಲೇ ಸೂಕ್ತ ಪರಿಹಾರವನ್ನು ಘೋಷಿಸಿ ಬೆಳೆ ನಷ್ಟ ಆಗಿರುವ ಜಿಲ್ಲೆಯ ಎಲ್ಲಾ ರೈತರಿಗೆ ಪರಿಹಾರ ದೊರಕಿಸುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಅನ್ನದಾತ’ರ ಯೋಗಕ್ಷೇಮವನ್ನು ಸರಿಯಾಗಿ ನೋಡಿಕೊಳ್ಳುವುದು ಪ್ರತಿಯೊಂದು ನಾಗರಿಕ ಸಮಾಜದ ಆದ್ಯ ಕರ್ತವ್ಯ. ಆದರೆ ಇಲ್ಲಿಯವರೆಗೆ ಆಳಿರುವ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಮೂಲಭೂತ ಜವಾಬ್ದಾರಿಯನ್ನು ನಿರಾಕರಿಸುತ್ತಾ ಬಂದಿರುವುದು ದುರಂತದ ವಿಷಯವಾಗಿದೆ. ಇಡೀ ದೇಶದಾದ್ಯಂತ ಇಂದು ರೈತ ಸಮುದಾಯ ಮತ್ತು ಕೃಷಿ ಕಾರ್ಮಿಕರು ಅತ್ಯಂತ ಸಂಕಟಮಯ ಜೀವನ ನಡೆಸುತ್ತಿದ್ದಾರೆ. ಸಾಲದ ಹೊರೆಯಿಂದಾಗಿ ಇಂದು ಸಾವಿರಾರು ರೈತರು ಆತ್ಮಹತ್ಯೆಗೆ ಮೊರೆ ಹೋಗುತ್ತಿದ್ದಾರೆ. ಪ್ರತಿದಿನವೂ ಬೀಜ, ಗೊಬ್ಬರ, ಕೀಟನಾಶಕಗಳಂತಹ ಕೃಷಿ ಒಳಸುರಿಗಳ ಬೆಲೆಗಳು ಗಗನಕ್ಕೇರುತ್ತಿವೆ. ಆದರೆ ಯಾವ ಸರ್ಕಾರಗಳೂ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ದೊರಕುವಂತೆ ಕ್ರಮಗಳನ್ನು ತೆಗೆದುಕೊಳ್ಳದಿರುವುದು ವಿಷಾದದ ಸಂಗತಿಯಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆ ಅಧ್ಯಕ್ಷ ಮಧು ತೊಗಲೇರಿ, ಜಿಲ್ಲಾ ಕಾರ್ಯದರ್ಶಿ ನಾಗಸ್ಮಿತ, ಸತೀಶ್ ಕೈದಾಳೆ ಮತ್ತಿತರರು ಪಾಲ್ಗೊಂಡಿದ್ದರು.