SUDDIKSHANA KANNADA NEWS/ DAVANAGERE/ DATE:19-11-2024
ಬೆಂಗಳೂರು: ಪದೇ ಪದೆ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಅನ್ಯಾಯ ಎಸಗುತ್ತಾ ಒಂದಲ್ಲಾ ಒಂದು ಕ್ಯಾತೆ ತೆಗೆಯುತ್ತಲೇ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಆರೋಪಿಸಿದ್ದಾರೆ.
ಅನ್ನದಾತರ ಹಿತಕಾಯುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ರೈತರಿಗೆ 5 ಲಕ್ಷ ರೂಪಾಯಿವರೆಗೆ ಬಡ್ಡಿರಹಿತ ಸಾಲ ನೀಡುತ್ತಿದ್ದು, ನಬಾರ್ಡ್‌ನಿಂದ ಕರ್ನಾಟಕಕ್ಕೆ ಬರಬೇಕಾದ ನೆರವನ್ನು ಒಮ್ಮಿಂದೊಮ್ಮೆಲೆ 58% ಕಡಿತಗೊಳಿಸಿರುವುದು ರೈತರ ಭವಿಷ್ಯದ ಮೇಲೆ ಎಂತಹ ಕೆಟ್ಟ ಪರಿಣಾಮ ಬೀರಬಹುದು ಎನ್ನುವುದನ್ನು ನೀವೇ ಊಹಿಸಿ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಯಶಸ್ವಿಯಾಗುತ್ತಿರುವ 5 ಗ್ಯಾರಂಟಿಗಳು ಬಿಜೆಪಿಗೆ ಎಷ್ಟರಮಟ್ಟಿಗೆ ನಿದ್ದೆಗೆಡಿಸಿದೆ ಎಂದರೆ ಭದ್ರಾ ಮೇಲ್ದಂಡೆ ಯೋಜನೆಗೆ ಈವರೆಗೆ ಹಣ ನೀಡಿಲ್ಲ, ಇದಲ್ಲದೆ ನಮ್ಮ ಗ್ಯಾರಂಟಿಗಳ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಾ ಜನರನ್ನು ದಾರಿ ತಪ್ಪಿಸುತ್ತಿದೆ. ಜನರಿಂದ ನಿರಂತರವಾಗಿ ತಿರಸ್ಕಾರ ಎದುರಿಸುತ್ತಿರುವ ಬಿಜೆಪಿಯು, ಕರ್ನಾಟಕ ಸರ್ಕಾರದ ಪ್ರಗತಿಗೆ ಅಡ್ಡಗಾಲು ಹಾಕುತ್ತಿದೆ ಎಂದು ಕಿಡಿಕಾರಿದ್ದಾರೆ.
ಆದರೆ ನಾವು ಎಂದಿನಂತೆ ಜನಪರ ಕೆಲಸಗಳನ್ನು ಮಾಡುತ್ತಾ ಕನ್ನಡಿಗರ ಹಕ್ಕಿಗಾಗಿ ಹೋರಾಡುತ್ತೇವೆ! ಎಂದು ಸಾಮಾಜಿಕ ಜಾಲತಾಣಗಳಲ್ಲಿ ಡಿ. ಕೆ. ಶಿವಕುಮಾರ್ ಪೋಸ್ಟ್ ಮಾಡಿದ್ದಾರೆ.