ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ರಾಜಕೀಯ ವಾಗ್ದಾಳಿ ತಾರಕಕ್ಕೇರಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು “ಭಯೋತ್ಪಾದಕ” ಎಂದು ಕರೆಯುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೊಸ ಸಂಚಲನ ಮೂಡಿಸಿದ್ದಾರೆ.
ಏಪ್ರಿಲ್ 23 ರಂದು ನಡೆಯಲಿರುವ ಚುನಾವಣೆಗೆ ಮುನ್ನ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಯನ್ನು ಟೀಕಿಸುವ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಖರ್ಗೆ ನೀಡಿದ ಸ್ಪಷ್ಟನೆ: ತಮ್ಮ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ ಖರ್ಗೆ, “ನಾನು ಮೋದಿ ಅವರನ್ನು ವೈಯಕ್ತಿಕವಾಗಿ ಭಯೋತ್ಪಾದಕ ಎಂದು ಕರೆದಿಲ್ಲ. ಅವರು ಕೇಂದ್ರೀಯ ತನಿಖಾ ಸಂಸ್ಥೆಗಳಾದ ಇಡಿ (ED) ಮತ್ತು ಐಟಿ (IT) ಮೂಲಕ ವಿರೋಧ ಪಕ್ಷದ ನಾಯಕರನ್ನು ‘ಹೆದರಿಸುತ್ತಿದ್ದಾರೆ’ (Terrorising) ಎಂಬ ಅರ್ಥದಲ್ಲಿ ಆ ಮಾತು ಹೇಳಿದ್ದೇನೆ” ಎಂದು ಸಮರ್ಥಿಸಿಕೊಂಡರು. ಅಲ್ಲದೆ ಮೋದಿ ಒಬ್ಬ ಸುಳ್ಳುಗಾರ ಮತ್ತು ಅವರು ಮನುಸ್ಮೃತಿಯನ್ನು ನಂಬುವವರು ಎಂದು ಕಿಡಿಕಾರಿದರು.
ಬಿಜೆಪಿ ಆಕ್ರೋಶ: ಖರ್ಗೆ ಅವರ ಹೇಳಿಕೆಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಎಂದು ಕಿಡಿಕಾರಿದ್ದಾರೆ. ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈ ಪ್ರತಿಕ್ರಿಯಿಸಿ, “ಸೋಲಿನ ಭೀತಿಯಿಂದ ಖರ್ಗೆ ಇಂತಹ ಕೀಳುಮಟ್ಟದ ಭಾಷೆ ಬಳಸುತ್ತಿದ್ದಾರೆ” ಎಂದು ಟೀಕಿಸಿದ್ದಾರೆ.






Leave a comment