SUDDIKSHANA KANNADA NEWS/ DAVANAGERE/ DATE:11-07-2024
ದಾವಣಗೆರೆ: ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಚಿಕ್ಕಮಗಳೂರು ಜಿಲ್ಲೆಯ ಕೆಪಿಟಿಸಿಎಲ್ ಟಿ. ಎಲ್. ಅಂಡ್ ಎಸ್. ಎಸ್. ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಡಿ. ಹೆಚ್. ಉಮೇಶ್ ಅವರ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅಕ್ರಮ ಆಸ್ತಿ ಕುರಿತ ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ.
ದಾವಣಗೆರೆ ನಗರದ ಶಿವಕುಮಾರಸ್ವಾಮಿ ಬಡಾವಣೆಯಲ್ಲಿನ ಎರಡನೇ ಹಂತದಲ್ಲಿರುವ ವಾಸದ ಮನೆ, ದಾವಣಗೆರೆ ಜಿಲ್ಲೆಯ ಕಸಬ ಹೋಬಳಿ ಆವರಗೆರೆ ಗ್ರಾಮದಲ್ಲಿರುವ ಹೊಸ ಮನೆ, ಚಿಕ್ಕಮಗಳೂರಿನ ಟಿಎಲ್ ಅಂಡ್ ಎಸ್ ಎಸ್ ವಿಭಾಗದ
ಕಚೇರಿ, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಗವಿರಂಗಾಪುರ ಗ್ರಾಮದಲ್ಲಿರುವ ಮನೆ, ದಾವಣಗೆರೆ ನಗರದ ಕೆ ಐ ಡಿ ಬಿ ಕರೂರ್ ವಲಯದಲ್ಲಿರುವ ಉಗ್ರಾಣಕ್ಕೆ ಭೇಟಿ ನೀಡಿರುವ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳಾದ ಪ್ರಭು ಬ ಸೂರಿನ, ಹೆಚ್. ಎಸ್. ರಾಷ್ಟ್ರಪತಿ, ಎನ್. ಹೆಚ್. ಆಂಜನೇಯ, ಮುಸ್ಕಾಕ್ ಅಹ್ಮದ್, ಸಂಗಮೇಶ್ವರ ಅವರು ದಾಳಿ ನಡೆಸಿ ವಿಚಾರಣೆ ಮುಂದುವರಿಸಿದ್ದಾರೆ.
ದಾವಣಗೆರೆ ಬೆಸ್ಕಾಂ ವಿಜಿಲೆನ್ಸ್ ಎಇಇ ಎಂ. ಎಸ್. ಪ್ರಭಾಕರ್ ಅವರಿಗೆ ಸೇರಿದ ಸ್ಥಳಗಳ ಮೇಲೂ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅಕ್ರಮ ಆಸ್ತಿ ಪತ್ತೆ ಹಚ್ಚುವ ಕಾರ್ಯ ನಡೆಸುತ್ತಿದ್ದಾರೆ.
ದಾವಣಗೆರೆ ನಗರದ ಎಂಸಿಸಿ ಎ ಬ್ಲಾಕ್ 13 ನೇ ಮುಖ್ಯರಸ್ತೆಯಲ್ಲಿರುವ ವಾಸದ ಮನೆ, ದಾವಣಗೆರೆ ನಗರದ ತರಳಬಾಳು ಬಡಾವಣೆಯಲ್ಲಿರುವ ಅಧಿಕಾರಿಯ ಮಾವನವರ ಮನೆ, ಬೆಸ್ಕಾಂ ವಿಜಿಲೆನ್ಸ್ ಕಚೇರಿಯ ಮೇಲೂ ದಾಳಿ ನಡೆಸಿ ದಾಖಲಾತಿಗಳ ಪರಿಶೀಲನೆ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಅಕ್ರಮ ಆಸ್ತಿ ಕುರಿತಂತೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ಕೆ. ಕಲಾವತಿ, ಬಿ. ಪಿ. ಚಂದ್ರಶೇಖರ್, ಮಹಮ್ಮದ್ ರಫೀಕ್ ನೇತೃತ್ವದ ಅಧಿಕಾರಿಗಳ ತಂಡವು ದಾಳಿ ನಡೆಸಿ ಅಕ್ರಮ ಆಸ್ತಿ, ಮನೆಯಲ್ಲಿರುವ ಸಿಕ್ಕಿರುವ ನಗದು ಸೇರಿದಂತೆ ಹಲವು ಮಾಹಿತಿ ಕಲೆ ಹಾಕಿದ್ದಾರೆ. ಅಕ್ರಮ ಆಸ್ತಿ ಕುರಿತಂತೆ ದೂರು ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ.