SUDDIKSHANA KANNADA NEWS/ DAVANAGERE/ DATE:14-03-2024
ದಾವಣಗೆರೆ: ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಕಾಂಗ್ರೆಸ್ ಬಿಟ್ಟು ಮಾಜಿ ಶಾಸಕ ಹೆಚ್. ಪಿ. ರಾಜೇಶ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ
ನಾಯಕ ಆರ್. ಅಶೋಕ್, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ದಾವಣಗೆರೆ ಲೋಕಸಭಾ ಸದಸ್ಯ ಡಾ. ಜಿ. ಎಂ. ಸಿದ್ದೇಶ್ವರ, ಮಾಜಿ ಸಚಿವ ಸಿ. ಟಿ. ರವಿ, ಜಗಳೂರು ಮಾಜಿ ಶಾಸಕ ಎಸ್. ವಿ. ರಾಮಚಂದ್ರಪ್ಪ ಸಮ್ಮುಖದಲ್ಲಿ ಅಧಿಕೃತವಾಗಿ ಕಮಲ ಮುಡಿದರು.
ಬಿಜೆಪಿ ಬಾವುಟ ಸ್ವೀಕರಿಸುವ ಮೂಲಕ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಹೆಚ್. ಪಿ. ರಾಜೇಶ್ ಅವರು, ಕಾಂಗ್ರೆಸ್ ಪಕ್ಷದಲ್ಲಿ ತಮಗೆ ಆದ ನೋವು ತೋಡಿಕೊಂಡರು. ಕಾಂಗ್ರೆಸ್ ಪಕ್ಷವು ಕೊನೆಯವರೆಗೂ ಟಿಕೆಟ್ ನೀಡದೇ ಮೋಸ ಮಾಡಿತು. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ತೀವ್ರ ಪೈಪೋಟಿ ನೀಡಿದ್ದೆ. ಕ್ಷೇತ್ರದ ಜನರು ತುಂಬಾನೇ ಪ್ರೀತಿ ಕೊಟ್ಟಿದ್ದಾರೆ. ಮತವನ್ನೂ ಹಾಕಿದ್ದಾರೆ. ಈ ಋಣ ಮರೆಯಲಾಗದು. ನಾನು ಮೊದಲು ಬಿಜೆಪಿಯಲ್ಲಿದ್ದೆ. ಮತ್ತೆ ಮನೆಗೆ ಬಂದಷ್ಟೇ ಖುಷಿಯಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು.
ಮಾಜಿ ಶಾಸಕ ಎಸ್. ವಿ. ರಾಮಚಂದ್ರಪ್ಪ ಅವರು ಮಾತನಾಡಿ, ಹೆಚ್. ಪಿ. ರಾಜೇಶ್ ಅವರು ಬಿಜೆಪಿ ಸೇರ್ಪಡೆಯಿಂದ ಆನೆ ಬಲ ಬಂದಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚು ಅನುಕೂಲವಾಗಲಿದೆ. ಮಾತ್ರವಲ್ಲ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಪಡೆದಿದ್ದಂಥ ಮತಗಳಷ್ಟೇ ಪಡೆದಿದ್ದರು. ಪಕ್ಷೇತರರಾಗಿ ಕಣಕ್ಕಿಳಿದು ತೀವ್ರ ಪೈಪೋಟಿ ನೀಡಿದ್ದರು ಎಂದು ಹೇಳಿದರು.
ರಣರೋಚಕ ಕದನ:
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿ ರಣರೋಚಕ ಕದನದಲ್ಲಿ ಸ್ವಲ್ಪದರಲ್ಲಿ ಸೋಲು ಕಂಡಿದ್ದ ಜಗಳೂರು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಹೆಚ್. ಪಿ. ರಾಜೇಶ್ ಅವರು, ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿದ್ದರು. ಬಿಜೆಪಿಯತ್ತ ಹೆಚ್ಚಿನ ಒಲವು ತೋರಿದ್ದ ಅವರು ಇಂದು ಅಧಿಕೃತವಾಗಿ ಕಮಲ ತೆಕ್ಕೆಗೆ ಸೇರಿದರು.
ಹೆಚ್. ಪಿ. ರಾಜೇಶ್ ಅವರು ಜಗಳೂರಿನಲ್ಲಿ ಕಾಂಗ್ರೆಸ್ ಭದ್ರವಾಗಿ ನೆಲೆಯೂರುವಂತೆ ಮಾಡಿದ್ದರಲ್ಲದೇ, ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿಯೂ ಆಯ್ಕೆಯಾಗಿದ್ದರು. ಐದು ವರ್ಷಗಳ ಕಾಲ ಜನರ ಸೇವೆ ಮಾಡುವ ಮೂಲಕ ಎಲ್ಲರಿಂದಲೂ ಸೈ ಎನಿಸಿಕೊಂಡವರು. ಜಗಳೂರು ಕ್ಷೇತ್ರದಿಂದ ಎಸ್. ವಿ. ರಾಮಚಂದ್ರಪ್ಪರು ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದರೂ ಆಪರೇಷನ್ ಕಮಲಕ್ಕೆ ತುತ್ತಾಗಿ ಬಿಜೆಪಿ ಸೇರಿದ್ದರು. 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಆಗ ಹೆಚ್. ಪಿ. ರಾಜೇಶ್ ಶಾಸಕರಾಗಿ ಆಯ್ಕೆಯಾಗಿದ್ದರು.
ಕ್ಷೇತ್ರಾದ್ಯಂತ ಉತ್ತಮ ಹೆಸರು ಹೊಂದಿದ್ದ ಹೆಚ್. ಪಿ. ರಾಜೇಶ್ ಅವರಿಗೆ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗುತ್ತೆ ಎಂಬ ಬಲವಾದ ವಿಶ್ವಾಸ ಹೊಂದಿದ್ದರು. 2018ರಲ್ಲಿ ಸೋಲು ಕಂಡಿದ್ದರೂ ಜನರ ಜೊತೆಗಿನ ನಂಟು ಬಿಟ್ಟಿರಲಿಲ್ಲ. ಆದ್ರೆ, ಕಾಂಗ್ರೆಸ್ ಹೈಕಮಾಂಡ್ ಕೊನೆ ಹಂತದಲ್ಲಿ ರಾಜೇಶ್ ಅವರಿಗೆ ಕೈ ಕೊಟ್ಟು ದೇವೇಂದ್ರಪ್ಪರಿಗೆ ಟಿಕೆಟ್ ಕೊಟ್ಟಿತ್ತು. ಪಕ್ಷೇತರರಾಗಿ ಕಣಕ್ಕಿಳಿದಿದ್ದ ಹೆಚ್. ಪಿ. ರಾಜೇಶ್ ಅವರು ತೋರಿಸಿದ ಹೋರಾಟ ಕಾಂಗ್ರೆಸ್ ನಾಯಕರಷ್ಟೇ ಅಲ್ಲ, ಬಿಜೆಪಿ ನಾಯಕರನ್ನು ನಡುಗಿಸಿತ್ತು. ಭಾರೀ ಕಡಿಮೆ ಅಂತರದಲ್ಲಿ ಸೋಲು ಕಂಡ ಹೆಚ್. ಪಿ. ರಾಜೇಶ್ ಅವರ
ವರ್ಚಸ್ಸು, ತಾಕತ್ತು, ಶಕ್ತಿ ಏನು ಎಂಬುದು ಎಲ್ಲರಿಗೂ ಗೊತ್ತಾಗಿತ್ತು. ಮಾತ್ರವಲ್ಲ, ಕೊರೊನಾದಂಥ ಸಂಕಷ್ಟದ ವೇಳೆಯಲ್ಲಿ ಜನರ ಪರವಾಗಿ ಹೋರಾಡಿದ್ದರು.
ಕ್ಷೇತ್ರದ ಜನರಿಗಾಗಿ ಹಗಲಿರುಳು ಶ್ರಮಿಸಿದ್ದರು. ಮಾತ್ರವಲ್ಲ, ಜನರ ಪ್ರೀತಿ ಸಂಪಾದನೆ ಮಾಡಿದ್ದರು. ಎಲ್ಲಾ ವರ್ಗದವರ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಿಂದ ಹೆಚ್. ಪಿ. ರಾಜೇಶ್ ಗೆ ಹಿನ್ನೆಡೆ ಆಯ್ತು. ಇಲ್ಲದಿದ್ದರೆ ಗೆಲುವು ಕಟ್ಟಿಟ್ಟ ಬುತ್ತಿಯಾಗಿತ್ತು ಎಂದು ರಾಜೇಶ್ ಪರ ಚುನಾವಣೆಯಲ್ಲಿ ಕೆಲಸ ಮಾಡಿದವರ ಮಾತು.
ಪಕ್ಷೇತರರಾಗಿ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದರೂ ಪಡೆದಿದ್ದ ಮತಗಳು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಸೆಡ್ಡು ಹೊಡೆದಿದ್ದರು. ಇದೀಗ ಅವರ ಮುಂದಿನ ಹಾದಿ ಯಾವ ಪಕ್ಷದತ್ತ ಎಂಬ ಕುತೂಹಲ ಗರಿಗೆದರಿತ್ತು. ಮುಂಬರುವ ಲೋಕಸಭಾ ಚುನಾವಣೆ ಹಿತದೃಷ್ಟಿಯಿಂದ ರಾಜೇಶ್ ಅವರನ್ನು ಕರೆತಂದಿದ್ದರೆ ಜಗಳೂರು ತಾಲೂಕು ಮಾತ್ರವಲ್ಲ, ಜಿಲ್ಲೆಯಲ್ಲಿರುವ ವಾಲ್ಮೀಕಿ ಸಮಾಜದ ಮತಗಳು ಬಿಜೆಪಿಗೆ ಬರುವ ಲೆಕ್ಕಾಚಾರವೂ ಅಡಗಿತ್ತು. ಮಾತ್ರವಲ್ಲ, ಕಾಂಗ್ರೆಸ್ ಪಕ್ಷ ಟಿಕೆಟ್ ನೀಡದೇ ಮೋಸ ಮಾಡಿದೆ ಎಂಬ ಟ್ರಂಪ್ ಕಾರ್ಡ್ ಉಪಯೋಗಿಸಿಕೊಳ್ಳಲು ಸಿದ್ಧತೆ ಮಾಡಿಕೊಂಡಿದೆ. ಈ ಕಾರಣಕ್ಕಾಗಿ ರಾಜೇಶ್ ಅವರ ವರ್ಚಸ್ಸು ಪಡೆದರೆ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಲಾಭವಾಗಬಹುದು ಎಂಬ ಲೆಕ್ಕಾಚಾರವೂ ಕೇಸರಿ ಪಡೆಯಲ್ಲಿದೆ. ಮಾತ್ರವಲ್ಲ, ಎಸ್. ವಿ. ರಾಮಚಂದ್ರಪ್ಪ ಅವರಿಗೆ 2028ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡುವ ಭರವಸೆ ನೀಡಲಾಗಿದೆ. ಜೊತೆಗೆ ಹೆಚ್. ಪಿ. ರಾಜೇಶ್ ರಿಗೆ ಉನ್ನತ ಸ್ಥಾನಮಾನ ನೀಡುವ ಭರವಸೆ ನೀಡಲಾಗಿದೆ.
ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ವರ್ಚಸ್ಸು, ಜನಪ್ರಿಯತೆ, ಕುಸಿಯುತ್ತಿರುವ ಕಾಂಗ್ರೆಸ್ ಜನಪ್ರಿಯತೆ ಎಲ್ಲವನ್ನೂ ಪರಾಮರ್ಶಿಸಿದರೆ ಬಿಜೆಪಿಗೆ ಹೋಗುವುದೇ ಲೇಸು ಎಂಬ ನಿರ್ಧಾರಕ್ಕೆ ರಾಜೇಶ್ ಬಂದಿದ್ದರು. ಅಂತಿಮವಾಗಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದಾರೆ.