SUDDIKSHANA KANNADA NEWS/ DAVANAGERE/ DATE:13-03-2024
ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 18ರ ಮಧ್ಯಾಹ್ನ ಒಂದು ಗಂಟೆಗೆ ಶಿವಮೊಗ್ಗ ನಗರದ ಅಲ್ಲಮ ಪ್ರಭು ಮೈದಾನಕ್ಕೆ ಆಗಮಿಸಲಿದ್ದು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಗೂ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಉಡುಪಿ – ಚಿಕ್ಕಮಗಳೂರು ಜಿಲ್ಲೆಗಳಿಂದ ಕನಿಷ್ಠ ಎಂದರೂ 5 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್ ನಾಗಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಂಗಾ ತೀರದಿಂದ ತುಂಗಾ ತೀರಕ್ಕೆ ಆಗಮಿಸಿ ಕರ್ನಾಟಕದ ಜನತೆಯಲ್ಲಿ ಮೋದಿ ಮತಯಾಚನೆ ಮಾಡಲಿದ್ದಾರೆ. ದೇಶದ ಜನತೆಯ ಕನಸು ಮತ್ತು ಭಾರತೀಯ ಜನತಾ ಪಕ್ಷದ ಜನ ಸಂಘದಿಂದಲೂ ಪ್ರಣಾಳಿಕೆಯಲ್ಲಿ ವಿಶೇಷವಾಗಿದ್ದ ಪುರುಷೋತ್ತಮ ಶ್ರೀರಾಮಚಂದ್ರ ಜನ್ಮಭೂಮಿ ಅಯೋಧ್ಯೆ ನಗರದಲ್ಲಿ ಶ್ರೀರಾಮ ಲಲ್ಲ ಪ್ರಾಣ ಪ್ರತಿಷ್ಠಾಪನೆಯಾದ ನಂತರ ಮೊದಲ ಬಾರಿಗೆ ನಾಡಿನ ಜನತೆಯ ಮುಂದೆ ಆಗಮಿಸುತ್ತಿರುವುದು ವಿಶೇಷ ಎಂದು ತಿಳಿಸಿದರು.
ದೇಶದ ಜನತೆಯ ಇನ್ನೊಂದು ಕನಸಾದ ಸಿಎಎ ಜಾರಿಯಾದ ನಂತರ ಆಗಮಿಸುತ್ತಿರುವುದು ಕೂಡ ನಮ್ಮ ನಾಡಿನ ಜನತೆಗೆ ಒಂದು ಸಂತಸದ ವಿಷಯ. ಹಾಗೆಯೇ ಕಳೆದ ಹತ್ತು ವರ್ಷಗಳಲ್ಲಿ ದೇಶವನ್ನು ಆರ್ಥಿಕವಾಗಿ ರಕ್ಷಣಾತ್ಮಕವಾಗಿ ಆರೋಗ್ಯಕರ ವಿಷಯವಾಗಿ ರೈತರ ಕಷ್ಟಗಳಲ್ಲಿ ಯುವಕರ, ಮಹಿಳೆಯರ, ಬಡವರ ವಿಷಯದಲ್ಲಿ ಆಶಾಕಿರಣವಾಗಿ ಹೊರಹೊಮ್ಮಿದ ಪ್ರಧಾನಮಂತ್ರಿಗಳು ಆಗಮಿಸುತ್ತಿರುವುದು ಬಿಜೆಪಿ ಮತ್ತಷ್ಟು ಶಕ್ತಿ ತರಲಿದೆ. ಶಿವಮೊಗ್ಗದ ಅಲ್ಲಮಪ್ರಭು ಮೈದಾನದ 50 ಎಕರೆಗೂ ಹೆಚ್ಚಿನ ಜಾಗದಲ್ಲಿ ಪ್ರಧಾನ ಮಂತ್ರಿಗಳ ಸಭೆಯನ್ನು ಅತ್ಯಂತ ವ್ಯವಸ್ಥಿತ ಹಾಗೂ ಜಾಗರೂಕವಾಗಿ ಶಿವಮೊಗ್ಗ ಜಿಲ್ಲಾ ಬಿಜೆಪಿ ವ್ಯವಸ್ಥೆ ಮಾಡಿಕೊಳ್ಳುತ್ತಿದೆ ಎಂದರು.
ದಾವಣಗೆರೆ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಾದ ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಹರಿಹರ, ಹರಪನಹಳ್ಳಿ, ಜಗಳೂರು, ಚನ್ನಗಿರಿ, ಮಾಯಕೊಂಡ, ಹೊನ್ನಾಳಿ ಕ್ಷೇತ್ರಗಳಿಂದ ಅತಿ ಹೆಚ್ಚು ಜನರು ತೆರಳುತ್ತಿದ್ದು, ಒಂದು ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ. ದಾವಣಗರ ಲೋಕಸಭಾ ಕ್ಷೇತ್ರದ ಪ್ರತಿ ಬೂತ್ಗಳಿಂದ ಮತದಾರರು ಬರುವ ನಿರೀಕ್ಷೆ ಇದೆ. ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ಹೊಸ ಮತದಾರರು, ರೈತರು, ಮಹಿಳೆಯರು, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗದ ಹಾಗೂ ಅಲ್ಪಸಂಖ್ಯಾತ ಬಂಧುಗಳು ತಂಡ ತಂಡವಾಗಿ ಬರುವ ನಿರೀಕ್ಷೆಯೂ ಇದೆ ಎಂದು ತಿಳಿಸಿದರು.
ರಿಪೋರ್ಟ್ ಕಾರ್ಡ್ ಬಿಡುಗಡೆ:
ಮಾ.15 ರಂದು ಬೆಳಗ್ಗೆ 11.30ಕ್ಕೆ ನಗರದ ಪಿಬಿರಸ್ತೆಯಲ್ಲಿರುವ ಹಳೇ ವಾಣಿಹೊಂಡಾ ಶೋರೂಂ ಆವರಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರು ಸಂಸದ ಜಿ.ಎಂ ಸಿದ್ದೇಶ್ವರ್ ಅವರ ಹತ್ತುವರ್ಷದ ಸಾಧನೆಗಳ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಹರಿಹರ ಶಾಸಕ ಬಿ. ಪಿ. ಹರೀಶ್, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕಡ್ಲೇಬಾಳು ಧನಂಜಯ್, ಅನಿಲ್ ಕುಮಾರ್ ನಾಯ್ಕ್,, ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ವೀರೇಶ್ ಹನಗವಾಡಿ, ಸತೀಶ್ ಕೊಳೇನಹಳ್ಳಿ, ಹರೀಶ್ ಶಾಮನೂರು, ಶಿವರಾಜ್ ಪಾಟೀಲ್, ಜಿಲ್ಲಾ ಮಾಧ್ಯಮ್ ಪ್ರಮುಖ್ ಹೆಚ್. ಪಿ. ವಿಶ್ವಾಸ್ ಮತ್ತಿತರರು ಹಾಜರಿದ್ದರು.