SUDDIKSHANA KANNADA NEWS/ DAVANAGERE/ DATE:27-02-2024
ದಾವಣಗೆರೆ: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ನಗರದ ಎಸ್ ಎಸ್ ಶಾದಿ ಮಹಲ್ ನಲ್ಲಿ ಪಕ್ಷ ಸಮಾವೇಶ ಆಯೋಜಿಸಲಾಗಿತ್ತು.
ಎಸ್ ಡಿ ಪಿ ಐ ದಾವಣಗೆರೆ ಜಿಲ್ಲಾಧ್ಯಕ್ಷ ಯಹಿಯಾ ಮಾತನಾಡಿ, ಈ ಪಕ್ಷವು ತಾಯಿ ಮಕ್ಕಳ ಮತ್ತು ಯಾವುದೇ ಕುಟುಂಬಕ್ಕೆ ಸೀಮಿತವಾದ ಪಕ್ಷವಲ್ಲ, ಈ ಪಕ್ಷವು ಕಾರ್ಯಕರ್ತರ ಪಕ್ಷ, ಇಲ್ಲಿ ಸಾಮಾನ್ಯ ಕಾರ್ಯಕರ್ತನೂ ಜಿಲ್ಲಾಧ್ಯಕ್ಷನಾಗಬಹುದು ಎಂಬುದಕ್ಕೆ ನಾನೇ ಸಾಕ್ಷಿ. ಕೊರೊನಾ ಸಂದರ್ಭದಲ್ಲಿ ನಾವು ಯಾವುದೇ ಜಾತಿ ಮತ ನೋಡದೆ ಅವರವರ ಧಾರ್ಮಿಕ ವಿಧಿ ವಿಧಾನಗಳಂತೆ ತಮ್ಮ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸಿದವರು. ಅದೇ ರೀತಿ ರಾಮಕೃಷ್ಣ ಹೆಗಡೆ ನಗರ ನಿವಾಸಿಗಳ ಜೊತೆ ಇಲ್ಲಿನ ವ್ಯವಸ್ಥೆ ಅನ್ಯಾಯ ಮಾಡಿದಾಗ ಅವರ ಜೊತೆ ನಿಂತಿದ್ದು ಎಸ್ ಡಿ ಪಿ ಐ ಪಕ್ಷ ಎಂದರು.
ದಲಿತ, ಹಿಂದುಳಿದ ಶೋಷಿತ ಸಮುದಾಯಗಳ ಹಕ್ಕುಗಳಿಗಾಗಿ ಮುಂಚೂಣಿಯಲ್ಲಿ ನಿಂತು ಹೋರಾಡುವ ಪಕ್ಷವಾಗಿದೆ. ಇಲ್ಲಿನ ಕಾರ್ಪೊರೇಟರ್ ಗಳನ್ನು ನೋಡಿದರೆ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ನ ಕಾರ್ಪೊರೇಟರ್ ಗಳು ಹೊರತು ಸಮುದಾಯದ ನ್ಯಾಯಕ್ಕಾಗಿ ಹೋರಾಡುವವರಲ್ಲ. ಆದ್ದರಿಂದ ಮುಂಬರುವ ದಿನಗಳಲ್ಲಿ ಎಸ್ ಡಿ ಪಿ ಐ ಜೊತೆ ನಿಲ್ಲುವಂತೆ ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಪಕ್ಷದ ಸಮಾವೇಶ ಉದ್ದೇಶಿಸಿ ಮಾತನಾಡಿ ಕಳೆದ ಚುನಾವಣೆಯಲ್ಲಿ ಜಾತ್ಯತೀತ ಪಕ್ಷ ಎನಿಸಿಕೊಂಡ ಕಾಂಗ್ರೆಸ್ ಗೆ ದಲಿತರು, ಹಿಂದುಳಿದವರು ಮತ್ತು ಹೆಚ್ಚಾಗಿ ಶೇ. 90ರಷ್ಟು ಮುಸ್ಲಿಂ ಸಮುದಾಯ ಮತ ನೀಡುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ್ದಾರೆ. ಏಕೆಂದರೆ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಮುವಾದ ಮೈಗೂಡಿಸಿಕೊಂಡಿರುವ ಬಿಜೆಪಿಯ ತನ್ನ ಆಡಳಿತ ಅವಧಿಯಲ್ಲಿ ಕೋಮು ಕೋಮುಗಳ ಮಧ್ಯೆ ಸಂಘರ್ಷವನ್ನು ಉಂಟು ಮಾಡಿ ಅದರಿಂದ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಉದ್ದೇಶದಿಂದ ರಾಜ್ಯದಲ್ಲಿ ಹಿಜಾಬ್, ಹಲಾಲ್ , ವ್ಯಾಪಾರ ನಿಷೇಧ, 2 ಬಿ ನಿಷೇಧ ಮತ್ತು ಅಸಂವಿಧಾನಿಕ ಕಾನೂನುಗಳ ಜಾರಿ ಮಾಡುವ ಮೂಲಕ ರಾಜ್ಯದಲ್ಲಿ ಸಂಘರ್ಷವನ್ನು ಉಂಟು ಮಾಡಿತ್ತು ಎಂದು ತಿಳಿಸಿದರು.
ಬಿಜೆಪಿ ದುರಾಡಳಿತ ಬೇಸತ್ತು ಜನರು ರಾಜ್ಯದ ಅಭಿವೃದ್ಧಿ,ಹಿತಾಸಕ್ತಿ ಮತ್ತು ಶಾಂತಿಯುತ ಜೀವನದ ನಿರೀಕ್ಷೆಯಲ್ಲಿ ಮತ ನೀಡಿದರೆ ಹೊರತು ಕಾಂಗ್ರೆಸ್ ನ ಗ್ಯಾರಂಟಿ ಗಳಿಗೆ ಮರಳಾಗಿ ಅಲ್ಲ. ಆದರೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕಳೆದ 10 ತಿಂಗಳ ಅವಧಿಯಲ್ಲಿ ನೋಡಿದರೆ ಬಿಜೆಪಿಯನ್ನೇ ಮೀರಿಸಿದಂತಿದೆ. ಆದರೆ ಕಳೆದ ಚುನಾವಣೆಯಲ್ಲಿ 2 ಎಸ್ಡಿಪಿಐನ ಎಂಎಲ್ಎ ಗಳು ವಿಧಾನಸೌಧಕ್ಕೆ ಗೆಲ್ಲಿಸಿ ಕಳಿಸಿದ್ದರೆ ಎಲ್ಲಾ ಸಂಘರ್ಷಗಳಿಗೆ ತಡೆ ನೀಡಬಹುದಿತ್ತು. ಆದ್ದರಿಂದ ಮುಂದಿನ ದಿನಗಳಲ್ಲಿ ಇಂತಹ ನಕಲಿ ಜಾತ್ಯಾತೀತ ಮುಖವಾಡ ಧರಿಸಿದಂತ ಇವರನ್ನು ತಿರಸ್ಕರಿಸಿ ನೈಜ ಪರ್ಯಾಯವಾದ ಎಸ್ ಡಿ ಪಿ ಐ ಪಕ್ಷವನ್ನು ಬೆಂಬಲಿಸಲು ಕರೆ ನೀಡಿದರು.
ಸಮಾವೇಶದಲ್ಲಿ ಕುಳಿತು ವಿಡಿಯೋ ರೆಕಾರ್ಡ್ ಮಾಡುತ್ತಿರುವ ಪೊಲೀಸರಿಗೆ ಹೇಳುವುದು ಏನೆಂದರೆ ನೀವು ಇಲ್ಲಿ ಕುಳಿತು ಮೇಲಾಧಿಕಾರಿಗಳು ಬಿಜೆಪಿ ಮತ್ತು ಸಂಘ ಪರಿವಾರದ ತಾಕೀತಿನಂತೆ ವಿಡಿಯೋ ರೆಕಾರ್ಡ್ ಮಾಡಿಕೊಂಡು ಕುಳಿತುಕೊಳ್ಳುವ ಬದಲು ಅದೇ ಕೆಲಸವನ್ನು ನೀವು ಆರ್ ಎಸ್ ಎಸ್, ಬಜರಂಗದಳ, ವಿಶ್ವ ಹಿಂದೂ ಪರಿಷತ್ ಮತ್ತು ದುರ್ಗವಾಹಿನಿ ಅಂತ ಸಂಘಟನೆಗಳ ಹಿಂದೆ ಬಿದ್ದಿದ್ದರೆ ಈ ರಾಜ್ಯದಲ್ಲಿ ಸಂಘರ್ಷವಿಲ್ಲದ ಶಾಂತಿಯ ರಾಜ್ಯವನ್ನು ಸ್ಥಾಪನೆ ಮಾಡಬಹುದಿತ್ತು ಎಂದು ಹೇಳಿದರು.
ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಅಜರುದ್ದೀನ್ ಬಾತಿ ಸ್ವಾಗತಿಸಿದರು ಹಾಗೂ ಪಕ್ಷದ ಕಾರ್ಯ ಚಟುವಟಿಕೆಗಳ ಬಗ್ಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೋಹಸಿನ್ ವರದಿ ನೀಡಿದರು. ಜಿಲ್ಲಾ ಕೋಶಾಧಿಕಾರಿಯ ಎ. ಆರ್. ತಾಹಿರ್ ವಂದಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿ ಫಯಾಜ್ಅ ಹಮದ್, ಜಿಲ್ಲಾ ಉಪಾಧ್ಯಕ್ಷ ರಜ್ವಿ ರಿಯಾಜ್ ಅಹಮದ್, ಜಿಲ್ಲಾ ಸಮಿತಿ ಸದಸ್ಯ ಫರೀದ್ ಖಾನ್ ಮಾಜಿ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಜಬಿವುಲ್ಲಾ, ಮತ್ತು ಹರಿಹರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಮಿವುಲ್ಲಾ ಮುಲ್ಲಾ ಹಾಗೂ ಪಕ್ಷದ ಕಾರ್ಯಕರ್ತರು ಬೆಂಬಲಿಗರು ಹಿತೈಷಿಗಳು ಮತ್ತು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.