SUDDIKSHANA KANNADA NEWS/ DAVANAGERE/ DATE:25-02-2024
ಸಿರಿಗೆರೆ: ಇದೇ ಮೊದಲ ಬಾರಿಗೆ ತರಳಬಾಳು ಹುಣ್ಣಿಮೆಯಲ್ಲಿ ಅಡ್ಡಪಲ್ಲಕ್ಕಿ ಮೆರವಣಿಗೆಯನ್ನು ನಿರಾಕರಿಸಿ ಅಲಂಕೃತ ವಾಹನದಲ್ಲಿ ಗ್ರಾಮ ಸಂಚಾರ ಮಾಡಿದ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ನಿರ್ಧಾರಕ್ಕೆ ಭಕ್ತ ವಲಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮೆರವಣಿಗೆಯಲ್ಲಿ ಭಾಗವಹಿಸಲು ಹಲವು ಜಿಲ್ಲೆಗಳಿಂದ ಬಂದಿದ್ದ ಯುವಕರು, ರೈತರು ಮತ್ತು ಭಕ್ತರನ್ನು ಮಾತನಾಡಿಸಿದಾಗ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ರಾಜ್ಯದಲ್ಲಿ ತೀವ್ರ ಬರ ಆವರಿಸಿದೆ. ರೈತ ಸಮುದಾಯ ಹಲವು ತೊಂದರೆಗಳಿಗೆ ಸಿಲುಕಿದೆ. ರೈತರ ಬಾಳು ಹಸನಾಗಲು ಶ್ರೀಗಳು ಹಲವು ಏತ ನೀರಾವರಿ ಯೋಜನೆಗಳು ಜಾರಿಯಾಗುವಂತೆ ಸರ್ಕಾರದ ಮನವೊಲಿಸಿ ಕೆಲಸ ನಿರ್ವಹಿಸಿದ್ದಾರೆ. ಜನರು ಸಂಕಟದಲ್ಲಿರುವಾಗ ಮೆರವಣಿಗೆ ಬೇಡವೆಂದು ಶ್ರೀಗಳು ತೆಗೆದುಕೊಂಡ ಕ್ರಮ ಸ್ತುತ್ಯಾರ್ಹವಾದುದಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರೆ, ಮತ್ತೊಂದೆಡೆ ಪಲ್ಲಕ್ಕಿಯಲ್ಲಿ ಕುಳಿತು ಮೆರವಣಿಗೆ ಸಾಗುವ ಶ್ರೀಗಳನ್ನು ಕಣ್ತುಂಬಿಕೊಳ್ಳುವುದೇ ಅಪರೂಪದ ಸನ್ನಿವೇಶ. ಅಂತಹ ಸಡಗರಕ್ಕೆ ಈ ಬಾರಿ ಅವಕಾಶ ಇಲ್ಲದಂತಾಯಿತು ಎಂಬ ಕೊರಗು ಉಳಿಯಿತು ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.
ತರಳಬಾಳು ಮಠದ ಸಂಪ್ರದಾಯದಂತೆ ಕಳೆದ 7 ದಶಕಗಳಿಂದ ನಡೆಯುತ್ತಾ ಬಂದಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಸಂದರ್ಭದಲ್ಲಿ ಇದೇ ಮೊಟ್ಟಮೊದಲ ಬಾರಿಗೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಅಡ್ಡಪಲ್ಲಕ್ಕಿ ಮೆರವಣಿಗೆಯನ್ನು ನಿರಾಕರಿಸಿ ಅಲಂಕೃತ ವಾಹನ ಏರಿ ಸಿರಿಗೆರೆಯ ಬೀದಿಗಳಲ್ಲಿ ಸಂಚಾರ ನಡೆಸಿದರು. ಇದರಿಂದ ಮಠದ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಸೃಷ್ಟಿಯಾದಂತಾಯಿತು.
ಐಕ್ಯಮಂಟಪದಿಂದ ಹೊರಬಂದು ಮೆರವಣಿಗೆಯ ವಾಹನವೇರುತ್ತಿದ್ದಂತೆ ಹಲವು ಜಿಲ್ಲೆಗಳಿಂದ ಬಂದಿದ್ದ ಶಿವಸೈನ್ಯ ಯುವಕರ ಜಯಘೋಷ ಮುಗಿಲು ಮುಟ್ಟಿದವು. ಯುವಕರ ತಂಡಗಳು ಕುಣಿದು ಕುಪ್ಪಳಿಸಿ ತರಳಬಾಳು ಸಂತತಿಗೆ ಜಯವಾಗಲಿಎಂದರು. ಬೃಹದಾಕಾರದ ಶಿವಧ್ವಜಗಳುಮುಗಿಲುಮುಟ್ಟಿದವು. ಹಲವು ಜಾನಪದತಂಡಗಳು ಮೆರವಣಿಗೆಯಲ್ಲಿಸಾಗಿಬಂದವು. ಪೂರ್ಣಕುಂಭ ಹೊತ್ತ ಬಾಲಿಕೆಯರು ಮೆರವಣಿಗೆಯುದ್ದಕ್ಕೂ ಸಾಗಿ ಮೆರವಣಿಗೆಗೆ ಮೆರಗು ನೀಡಿದರು.
ಚಿಂತಕರು ಮತ್ತು ಕುವೆಂಪು ವಿವಿ ವಿಶ್ರಾಂತಕುಲಪತಿಡಾ.ಚಿದಾನಂದಗೌಡ, ಹಿರೇಮಗಳೂರು ಕಣ್ಣನ್ ಮುಂತಾದವರು ಉಪನ್ಯಾಸ ನೀಡಿದರು. ಡಾ. ಮಹದೇವ ಬಣಕಾರರ ವಿಶ್ವಬಂಧು ಮರುಳಸಿದ್ದ ಕಾವ್ಯ ಗ್ರಂಥವನ್ನು ಚಿದಾನಂದಗೌಡರು ಲೋಕಾರ್ಪಣೆ ಮಾಡಿದರು. ಶಾಸಕರಾದ ಎಂ. ಚಂದ್ರಪ್ಪ ಡಿ.ಜಿ. ಶಾಂತನಗೌಡ, ಬಿ.ಪಿ. ಹರೀಶ್, ಗಣೇಶ್ ಪ್ರಸಾದ್, ಎಂಎಲ್ಸಿ ಎಂ.ಬಿ.ನವೀನ್, ಚಿಂತಕ ಚಿದಾನಂದಗೌಡ, ಹಿರೇಮಗಳೂರು ಕಣ್ಣನ್, ಎಚ್. ಆರ್. ಬಸವರಾಜಪ್ಪ, ಕರ್ನಾಟಕ ನೀರಾವರಿ ನಿಗಮದ ಮಾಜಿ ವ್ಯವಸ್ಥಾಪಕ
ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಮುಂತಾದವರು ಉಪಸ್ಥಿತರಿದ್ದರು.