SUDDIKSHANA KANNADA NEWS/ DAVANAGERE/ DATE:21-02-2024
ದಾವಣಗೆರೆ: ಪರಿಸರ ಪ್ರೇಮಿಯಾಗಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದ ಎ. ಕೆ. ಫೌಂಡೇಶನ್ ಅಧ್ಯಕ್ಷ ಕೆ. ಬಿ. ಕೊಟ್ರೇಶ್ ಅವರು ಈಗ ಬಿಜೆಪಿ ಪಕ್ಷದಲ್ಲಿ ಗಮನ ಸೆಳೆಯುತ್ತಿರುವ ನೇತಾರ. ಕಾರ್ಯವೈಖರಿಯೊಂದಿಗೆ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿರುವ ಕೆ. ಬಿ. ಕೊಟ್ರೇಶ್ ಅವರ ಹೆಸರು ಎಲ್ಲೆಡೆ ಚಿರಪರಿಚಿತ. ದಾವಣಗೆರೆ ಲೋಕಸಭೆ ಚುನಾವಣೆಗೆ ಬಿಜೆಪಿ ಪಕ್ಷದಲ್ಲಿ ಕೇಳಿ ಬರುತ್ತಿರುವ ಪ್ರಮುಖ ಹೆಸರು.
ದಾವಣಗೆರೆ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ನಮ್ಮ ಗುರಿ ಎಂಬ ಘೋಷವಾಕ್ಯದೊಂದಿಗೆ ಮುನ್ನಡೆಯುತ್ತಿರುವ ಕೆ. ಬಿ. ಕೊಟ್ರೇಶ್ ಅವರು, ದೇಶದ ಅಭಿವೃದ್ಧಿ ಮತ್ತು ಭದ್ರತೆಗಾಗಿ ಬಿಜೆಪಿ ಬೆಂಬಲಿಸಿ. ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಬರಬೇಕೆಂಬ ಕನಸು ಕಂಡಿದ್ದಾರೆ. ಆರ್ ಎಸ್ ಎಸ್ ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಕೆ. ಬಿ. ಕೊಟ್ರೇಶ್ ಅವರು, ಗ್ರಾಮಾಂತರ ಪ್ರದೇಶಗಳಲ್ಲಿ ಈಗಾಗಲೇ ಸುತ್ತಾಡಿದ್ದಾರೆ, ಜನರನ್ನು ಭೇಟಿಯಾಗಿದ್ದಾರೆ. ಯುವಕರು, ಮಹಿಳೆಯರು, ಹಿರಿಯರು
ಸೇರಿದಂತೆ ಎಲ್ಲಾ ವರ್ಗದವರ ಮನ ಗೆಲ್ಲುವತ್ತ ದಾಪುಗಾಲು ಇಟ್ಟಿದ್ದಾರೆ.
32 ಲಕ್ಷಕ್ಕೂ ಹೆಚ್ಚು ಗಿಡಗಳ ಒಡೆಯ..!
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದ ಕೆ. ಬಿ. ಕೊಟ್ರೇಶ್ ಅವರು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಬರೋಬ್ಬರಿ 32 ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಟ್ಟ ದಾಖಲೆ ಹೊಂದಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಕಡಿಮೆ ಅವಧಿಯಲ್ಲಿ ಸಸಿ ನೆಟ್ಟ ಅಧಿಕಾರಿ ಮತ್ತೊಬ್ಬರಿಲ್ಲ.
ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ಬೆಳಗಾವಿ, ಹೊಸಪೇಟೆ, ಬೆಂಗಳೂರು, ಚಿತ್ರದುರ್ಗ, ತುಮಕೂರು, ಹಾವೇರಿಯಲ್ಲಿ ಕಾರ್ಯನಿರ್ವಹಿಸಿದ್ದ ಕೆ. ಬಿ. ಕೊಟ್ರೇಶ್ ಅವರು ಪರಿಸರ ಪ್ರೇಮಿಯಾಗಿಯೂ, ಅಧಿಕಾರಿಯಾಗಿಯೂ ಅದ್ವಿತೀಯ ಸಾಧನೆ ಮಾಡಿದ್ದಾರೆ. ಇದು ಇಲಾಖೆಯಲ್ಲಿ ಇರುವ ಎಲ್ಲರಿಗೂ ಗೊತ್ತು.
ಪರಿಸರ ಮಾಲಿನ್ಯ, ವಾಯು ಮಾಲಿನ್ಯ, ಜಲ ಮಾಲಿನ್ಯ ಸೇರಿದಂತೆ ಎಲ್ಲಾ ವಿಚಾರಗಳಲ್ಲಿ ಸೂಕ್ಷ್ಮಗ್ರಹಿಯಾಗಿರುವ ಕೆ.ಬಿ. ಕೊಟ್ರೇಶ್ ಅವರು ಕಾಡಿದ್ದರೆ ನಾಡು ಎಂಬ ನಾಣ್ಣುಡಿಯಂತೆ ಪರಿಸರ ಉಳಿವಿಗೆ ಟೊಂಕಕಟ್ಟಿ ನಿಂತಿದ್ದರು. ಇದಕ್ಕಾಗಿ ಸಾಕಷ್ಟು ಶ್ರಮವಹಿಸಿದವರು. ಈ ಶ್ರಮದಿಂದಾಗಿ ಲಕ್ಷಾಂತರ ಗಿಡಗಳು ಈಗಲೂ ನಳನಳಿಸುತ್ತಿವೆ. ಪರಿಸರಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ.
ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ಅವರು ಸಹ ಕೆ. ಬಿ. ಕೊಟ್ರೇಶ್ ಅವರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ. ಬೆಂಗಳೂರಿಗೆ ತೆರಳಿದಾಗ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ, ಪಕ್ಷದ ಹೈಕಮಾಂಡ್ ಮಟ್ಟಕ್ಕೂ ಹೆಸರು ಪ್ರಸ್ತಾಪಿಸಿರುವುದಾಗಿ ಮಾಹಿತಿ ಲಭಿಸಿದೆ. ಇದು ಕೊಟ್ರೇಶ್ ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಕೊನೆ ಹಂತಕ್ಕೆ ಬಂದಿದೆ:
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದೆ. ಟಿಕೆಟ್ ವಿಚಾರವೂ ಅಂತಿಮ ಘಟ್ಟಕ್ಕೆ ಬಂದಿದೆ. ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡಿದರೆ ನಮಗೇನೂ ಬೇಸರ ಇಲ್ಲ. ಅವರಿಗೆ ಟಿಕೆಟ್ ನೀಡದಿದ್ದರೆ ನನಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೇನೆ. ಸಾಮಾಜಿಕ ಸೇವೆ, ಆರ್ ಎಸ್ ಎಸ್, ಬಿಜೆಪಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದೇನೆ. ನನಗೆ ಟಿಕೆಟ್ ಸಿಗುವ ವಿಶ್ವಾಸ ಇದೆ. ಈ ನಿಟ್ಟಿನಲ್ಲಿ ಕೆಲಸಗಳನ್ನೂ ಮಾಡಿದ್ದೇನೆ. ಮತ್ತೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಮೋದಿ ಅವರು ಪ್ರಧಾನಿಯಾಗಬೇಕು ಎಂಬ ಆಸೆ ನನ್ನದು ಎನ್ನುತ್ತಾರೆ ಕೆ. ಬಿ. ಕೊಟ್ರೇಶ್ ಅವರು.
ಜಿಲ್ಲೆಯಾದ್ಯಂತ ಸಂಚರಿಸಿದ್ದೇನೆ. ಎಲ್ಲಾ ವರ್ಗದವರನ್ನು ಭೇಟಿಯಾಗಿದ್ದೇನೆ. ಸರ್ವ ಜನಾಂಗದವರ ಆಶೀರ್ವಾದ ಸಿಗುತ್ತದೆ ಎಂಬ ಆಶಾಭಾವನೆ ಇದೆ. ಬಿಜೆಪಿ ಪಕ್ಷದ ಜಿಲ್ಲೆಯ ಎಲ್ಲಾ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಸಹಕಾರವನ್ನೂ ಕೊಡುತ್ತಿದ್ದಾರೆ, ಅಷ್ಟೇ ಪ್ರೀತಿ, ವಿಶ್ವಾಸ ತೋರುತ್ತಿದ್ದಾರೆ. ಈ ಅಭಿಮಾನ ಖುಷಿ ಕೊಟ್ಟಿದೆ ಎನ್ನುತ್ತಾರೆ.
ಕೊಟ್ರೇಶ್ ರ ಕನಸುಗಳು:
- ಜಿಲ್ಲೆಯ ರೈತರ ಅಭಿವೃದ್ಧಿಗಾಗಿ ನೀರಾವರಿ ಯೋಜನೆಗಳ ವಿಸ್ತರಣೆಗೆ ಆದ್ಯತೆ
- ಕೃಷಿ ಮತ್ತು ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕ ಬೆಂಬಲ
- ಕೌಶಲ್ಯಯುಕ್ತ ಶೈಕ್ಷಣಿಕ ಪದ್ಧತಿಗೆ ನಾಂದಿ
- ಯುವ ಜನತೆಗೆ ತರಬೇತಿ ನೀಡಿ ಉದ್ಯೋಗದ ಕಡೆ ದಿಟ್ಟ ಹೆಜ್ಜೆ ಇಡಲು ಪ್ರೋತ್ಸಾಹ
- ಜಿಲ್ಲೆಯ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಮೊದಲ ಆದ್ಯತೆ
- ಸರ್ಕಾರಿ ವಲಯಗಳಲ್ಲಿ ದೆಹಲಿಯ ಏಮ್ಸ್ ಮಾದರಿ ಅತ್ಯಾಧುನಿಕ ಸುಸಜ್ಜಿತ ಆಸ್ಪತ್ರೆ ನಿರ್ಮಾಣ
- ಮಧ್ಯಕರ್ನಾಟಕದ ದಾವಣಗೆರೆಯಲ್ಲಿ ಐಐಟಿ ಸ್ಥಾಪನೆಗೆ ಪ್ರಯತ್ನ
- ಜಿಲ್ಲೆಯ ಎಲ್ಲಾ ಹಳ್ಳಿಗಳಿಗೂ ಶುದ್ಧ ಕುಡಿಯುವ ನೀರು ಮತ್ತು ಸಾರಿಗೆ ವ್ಯವಸ್ಥೆ ಕಲ್ಪಿಸುವುದು
- ಸಣ್ಣ ಕೈಗಾರಿಕೆಗಳ ಸ್ಥಾಪನೆ ಮತ್ತು ಅಭಿವೃದ್ಧಿಗೆ ಒತ್ತು ನೀಡುವುದು
- ಮಧ್ಯ ಕರ್ನಾಟಕದಲ್ಲಿ ಐಟಿ-ಬಿಟಿ ಮತ್ತು ಮಲ್ಪಿನ್ಯಾಷನಲ್ ಕಂಪೆನಿಗಳ ಸ್ಥಾಪನೆಗೆ ಕ್ರಮ ವಹಿಸುವುದು
- ಗ್ರಾಮೀಣ ಅಭಿವೃದ್ಧಿ ಯೋಜನೆಗಳ ಸಮರ್ಪಕ ನಿರ್ವಹಣೆ, ಸರ್ಕಾರಿ ಶಾಲಾ ಕಾಲೇಜುಗಳ ಉನ್ನತೀಕರಣಕ್ಕೆ ಹೊಸ ಯೋಜನೆ ರೂಪಿಸುವುದು
- ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯದ ಮುಖಾಂತರ ಕಿರು ಉದ್ಯಮಕ್ಕೆ ಬೆಂಬಲ ನೀಡಿ, ಪ್ರತಿ ಉದ್ಯಮಿಗೆ ಸ್ಥಳೀಯವಾಗಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು
- ಸಂಘಟಿತ – ಅಸಂಘಟಿತ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸುವುದು
- ನಾನು ಸಾರ್ವಜನಿಕರ ಸೇವೆಗೆ 24*7 ಲಭ್ಯವಿರುತ್ತೇನೆ.
ಒಟ್ಟಿನಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮಿಂಚಿನಂತೆ ಸಂಚಾರ ಮಾಡಿರುವ ಕೆ. ಬಿ. ಕೊಟ್ರೇಶ್ ಅವರು ಲೋಕಸಭೆ ಚುನಾವಣೆಗೆ ಬಿಜೆಪಿ ಪಕ್ಷದಿಂದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ತಮ್ಮದೇ ಆದ ಕನಸು, ಯೋಜನೆಗಳನ್ನು ಹಾಕಿಕೊಂಡಿದ್ದಾರೆ.
ಪಕ್ಷದ ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಬದ್ಧ ಎನ್ನುವ ಕೊಟ್ರೇಶ್ ಅವರು, ಸಿದ್ದೇಶ್ವರ ಅವರು ತುಂಬಾ ಹಿರಿಯರು. ಅವರ ಬಗ್ಗೆ ಅಪಾರವಾದ ಗೌರವವಿದೆ. ಅವರಿಗೆ ಟಿಕೆಟ್ ನೀಡಿದರೆ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಒಂದು ವೇಳೆ ಅವರಿಗೆ ಟಿಕೆಟ್ ನೀಡದಿದ್ದರೆ ನನಗೆ ನೀಡಿ ಎಂಬ ಮನವಿ ಮಾಡಿದ್ದೇನೆ. ಎಲ್ಲರ ಬೆಂಬಲ ನನಗೆ ಇದೆ, ನನಗೆ ಟಿಕೆಟ್ ನೀಡಿದರೆ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.