SUDDIKSHANA KANNADA NEWS/ DAVANAGERE/ DATE:19-02-2024
ದಾವಣಗೆರೆ: ರಾಮಮಂದಿರ ಉದ್ಘಾಟನೆಗೆ ಬಾಲಿವುಟ್ ನಟ ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ ಅವರನ್ನು ಆಹ್ವಾನಿಸಲಾಗಿದೆ. ಒಬಿಸಿ, ಎಸ್ಸಿ, ಎಸ್ಟಿ ಸಮುದಾಯವರನ್ನು ಆಹ್ವಾನಿಸಿಲ್ಲ ಎಂಬ ಆರೋಪ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ರಾಜ್ಯದಲ್ಲಿ ಸುಳ್ಳು ಹೇಳುತ್ತಲೇ ಇರುವ ಸಿದ್ದರಾಮಯ್ಯ ಅವರಿಗೆ ನೊಬೆಲ್ ಪ್ರಶಸ್ತಿ ನೀಡಬೇಕು ಎಂದು ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ವ್ಯಂಗ್ಯವಾಡಿದರು.
ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಕ ಗುರುಪೀಠದ ನಿರಂಜನಾನಂದಪುರಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಶ್ರೀ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ರಾಮಮಂದಿರ ಉದ್ಘಾಟನೆ ಕಾರ್ಯಕ್ರಮವನ್ನು ಇಡೀ ವಿಶ್ವವೇ ಮೆಚ್ಚಿದೆ. ಕನಕ ಶ್ರೀಗಳು, ಮಾದಾರ ಚನ್ನಯ್ಯ ಸ್ವಾಮೀಜಿಯವರು ಹಿಂದೂ ಎಂಬ ಕಾರಣಕ್ಕೆ ಹೋಗಿದ್ದರು. ಆದರೂ ರಾಹುಲ್ ಗಾಂಧಿ ಇಷ್ಟೊಂದು ಸುಳ್ಳು ಹೇಳುವುದನ್ನು ನೋಡಿದರೆ ಹತಾಶ ಮನೋಭಾವನೆ ತೋರಿಸುತ್ತದೆ. ರಾಹುಲ್ ಗಾಂಧಿ ಅವರು ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ರಾಹುಲ್ ಗಾಂಧಿ ಹೇಳಿಕೆಯನ್ನು ದೇಶ, ರಾಜ್ಯದ ಜನರು ಒಪ್ಪುವುದಿಲ್ಲ. ನೂರು ಬಾರಿ ಸುಳ್ಳು ಹೇಳಿ ಸತ್ಯ ಮಾಡಲು ಹೊರಟಿರುವ ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಅವರಿಗೆ ದೇಶದ ಜನರು ಲೋಕಸಭೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಭವಿಷ್ಯ ನುಡಿದರು.
ಹಿಜಾಬ್ ಕುರಿತಂತೆ ಸಿಎಂ ಸಿದ್ದರಾಮಯ್ಯ ಅವರು ಧರಿಸಬಹುದು ಎಂದು ಒಮ್ಮೆ ಹೇಳಿದ್ದರು. ಹಿಂದೂ ಸಮಾಜ ತೀವ್ರ ವಿರೋಧ ವ್ಯಕ್ತಪಡಿಸಿದಾಗ ನಾನು ಆ ರೀತಿ ಹೇಳಿಲ್ಲ ಎಂದರು. ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳು ಜನರಿಗೆ ಸರಿಯಾಗಿ ತಲುಪಿಲ್ಲ. ಎಲ್ಲಾ ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಹಣ ಬಂದಿದೆಯಾ, ಪದವೀಧರರಿಗೆ ನೀಡಿದ್ದ ಭರವಸೆ ಈಡೇರಿಸಲಾಗಿದೆಯಾ? ಯಾವ ಕಾರ್ಯಕ್ರಮಗಳೂ ಸಮರ್ಪಕವಾಗಿ ಜಾರಿಯಾಗಿಲ್ಲ. ಆದರೂ ಸಿದ್ದರಾಮಯ್ಯ ಅವರು ರಾಜ್ಯದ ಜನರಿಗೆ ಮುಟ್ಟಿವೆ ಎಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರ ವಸತಿ ಶಾಲೆಗಳಲ್ಲಿ ಇದುವರೆಗೂ ಇದ್ದ ಜ್ಞಾನ ದೇಗುಲವಿದು ಕೈಮುಗಿದು ಬಾ ಎಂಬ ವಾಕ್ಯವನ್ನು ಜ್ಞಾನ ದೇಗುಲವಿದು ಪ್ರಶ್ನೆ ಮಾಡಿ ಎಂಬ ಬರಹ ಬರೆಸಲಾಗಿದೆ. ಧೈರ್ಯವಾಗಿ ಪ್ರಶ್ನಿಸು ಎಂದು ಹೇಳಿದ್ದು ಸರಿ ಇದೆ. ಆದ್ರೆ, ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಹಾಸ್ಟೆಲ್ ಗಳಲ್ಲಿ ಊಟ ಸರಿಯಿಲ್ಲ, ಮೂಲಭೂತ ಸೌಲಭ್ಯಗಳಿಲ್ಲ ಎಂಬುದೂ ಸೇರಿದಂತೆ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸಬೇಕಾ ಎಂದು ಪ್ರಶ್ನಿಸಿದರು.
ರಾಷ್ಟ್ರಕವಿ ಕುವೆಂಪು ಅವರು ಯಾವುದೇ ಕಲ್ಪನೆ ಇಲ್ಲದೇ ಕೈಮುಗಿದು ಒಳಗೆ ಬಾ ಎಂಬ ಸಂದೇಶ ನೀಡಿದ್ದರು. ಕಾಂಗ್ರೆಸ್ ಗೆ ದೇಶದ ಸಂಸ್ಕೃತಿ ತಡೆದುಕೊಳ್ಳಲು ಆಗಲ್ಲ. ಏನು ಮಾಡಲು ಹೇಳಿ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಜಾಣ್ಮೆಯ ಉತ್ತರ ನೀಡಿದ್ದಾರೆ. ಒದ್ದಾಡಿಕೊಂಡು ಪ್ರತಿಕ್ರಿಯೆ ನೀಡಿದ್ದಾರೆ. ಕುವೆಂಪು, ಸಂಸ್ಕೃತಿ ಅವಹೇಳನ ಮಾಡಿದ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕು. ಈ ಆದೇಶ ಮಾಡಿದ ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.
ಗ್ಯಾರಂಟಿ ಅಲೆ ಎಲ್ಲಿದೆ? ನುಡಿದಂತೆ ನಡೆದ ಸರ್ಕಾರ ಎಂದು ಸಿದ್ದರಾಮಯ್ಯ ಹೇಳ್ತಾರೆ. ನಿರುದ್ಯೋಗಿ ಪದವೀಧರರಿಗೆ ಇದು ಅಪಮಾನ ಮಾಡಿದಂತೆ. ರಾಜ್ಯದ ರೈತರು, ಕೈಗಾರಿಕೆ, ವಿದ್ಯುತ್ ಬಳಕೆದಾರರಿಗೆ ದ್ರೋಹ ಎಸಗಲಾಗಿದೆ. ಎಷ್ಟು ವಿದ್ಯುತ್ ಕೊಟ್ಟಿದ್ದಾರೆ. ಹೆಣ್ಣು ಮಕ್ಕಳಿಗೆ 2 ಸಾವಿರ ನಿರಂತರಾವಗಿ ಬರುತ್ತಿದೆಯಾ ಎಂದು ಪ್ರಶ್ನಿಸಿದ ಕೆ. ಎಸ್. ಈಶ್ವರಪ್ಪ ಅವರು, ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಒಂದೂ ಸೀಟ್ ಪಡೆಯಲ್ಲ. ಒಂದೆಡೆ ಮೋದಿ, ಮತ್ತೊಂದೆಡೆ ರಾಮನ ಹೆಸರಿನಲ್ಲಿ ಮನೆ ಮನೆಗೆ ತೆರಳಿ
ಬಿಜೆಪಿ ಮತಯಾಚಿಸಲಿದೆ. ಮೋದಿನೇ ಗ್ಯಾರಂಟಿ, ರಾಮನೇ ಗ್ಯಾರಂಟಿ ಎಂದು ಹೇಳಿದರು.
ಗೋಷ್ಠಿಯಲ್ಲಿ ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ಈಶ್ವರಪ್ಪರ ಪುತ್ರ ಕೆ. ಇ. ಕಾಂತೇಶ್, ಜಿಲ್ಲಾ ವಕ್ತಾರ ಡಿ. ಎಸ್. ಶಿವಶಂಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಐರಾಣಿ ಅಣ್ಣೇಶ್, ಅನಿಲ್ ಕುಮಾರ್ ನಾಯಕ್, ಓಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಬಿಜೆಪಿ ಮುಖಂಡರಾದ ಕೆ. ಬಿ. ಕೊಟ್ರೇಶ್, ಎಲ್. ಎನ್. ಕಲ್ಲೇಶ್, ಕೊಳೇನಹಳ್ಳಿ ಸತೀಶ್, ಗುರುನಾಥ್, ಲಿಂಗರಾಜ, ಎಚ್. ಎಸ್. ಕೃಷ್ಣಮೂರ್ತಿ ಪವಾರ್ ಮತ್ತಿತರರು ಹಾಜರಿದ್ದರು.