SUDDIKSHANA KANNADA NEWS/ DAVANAGERE/ DATE:05-11-2024
ದಾವಣಗೆರೆ: ಮಗನ ಕಾಲೇಜು ಶುಲ್ಕ ಕಟ್ಟಲು ಬಂದು ಜ್ಯೂಸ್ ಅಂಗಡಿಯಲ್ಲಿ ಬಿಟ್ಟು ಹೋಗಿದ್ದ ಹಣ, ಶಾಸಕ ಕೆ.ಎಸ್.ಬಸವಂತಪ್ಪ ಅವರ ಕೈಗೆ ಸಿಕ್ಕಿದ್ದು, ಸಿಕ್ಕಿದ್ದ ಹಣವನ್ನು ಕಳೆದುಕೊಂಡ ಹಣದ ಮಾಲೀಕನಿಗೆ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೇನ್ನೂರು ಮೂಲದ ಕಿರಾಣಿ ಅಂಗಡಿ ಮಾಲೀಕ ವೆಂಕಟೇಶ್ ಎಂಬುವವರು ಮಗನನ್ನು ನಗರದ ಶಿರಮಗೊಂಡನಹಳ್ಳಿ ಬಳಿ ಇರುವ ಆನ್ ಮೋಲ್ ಕಾಲೇಜಿಗೆ ಸೇರಿಸಿದ್ದು, ಸೋಮವಾರ ಸಂಜೆ 7.30ರ ಸುಮಾರಿನಲ್ಲಿ 1.20 ಲಕ್ಷ ರೂ. ಕಾಲೇಜು ಶುಲ್ಕ ಕಟ್ಟಲು ಕಾರಿನಲ್ಲಿ ದಾವಣಗೆರೆಗೆ ಬಂದಿದ್ದಾರೆ. ರಾಂ ಅಂಡ್ ಕೋ ವೃತ್ತದಲ್ಲಿರುವ ರಸವಂತಿ ಜ್ಯೂಸ್ ಸೆಂಟರ್ ಗೆ ಜ್ಯೂಸ್ ಕುಡಿಯಲು ಕಾರಿನಲ್ಲಿಟ್ಟಿದ್ದ ಹಣ ಇರುವ ಬ್ಯಾಗ್ ತೆಗೆದುಕೊಂಡು ಹೋಗಿದ್ದಾರೆ. ಹಣದ ಬ್ಯಾಗ್ ಟೇಬಲ್ ಮೇಲೆ ಇಟ್ಟು ಜ್ಯೂಸ್ ಕುಡಿದಿದ್ದಾರೆ. ಬಳಿಕ ಹಣದ ಬ್ಯಾಗ್ ಟೇಬಲ್ ಮೇಲೆ ಬಿಟ್ಟು ಕಾಲೇಜಿಗೆ ಹೋಗಿದ್ದಾರೆ.
ಕಾಲೇಜು ಶುಲ್ಕ ಕಟ್ಟಲು ಕಾರಿನಲ್ಲಿ ಇಟ್ಟಿದ್ದೇನೆ ಎಂದು ಭಾವಿಸಿದ್ದ ವೆಂಕಟೇಶ್ ಅವರು ಹಣದ ಬ್ಯಾಗ್ ಹುಡುಕಾಡಿದ್ದಾರೆ. ಆದರೆ ಹಣದ ಬ್ಯಾಗ್ ಕಾರಿನಲ್ಲಿ ಇರಲಿಲ್ಲ. ಆಗ ಕಾಲೇಜಿಗೆ ಬರುವ ಮಾರ್ಗ ಮಧ್ಯೆ ಜ್ಯೂಸ್ ಸೆಂಟರ್ ಗೆ ಹೋಗಿ ಜ್ಯೂಸ್ ಕುಡಿದು ಬಂದಿದ್ದನ್ನು ನೆನಪಿಸಿಕೊಂಡಿದ್ದಾರೆ.
ಅಷ್ಟರಲ್ಲಿ ಜ್ಯೂಸ್ ಕುಡಿಯಲು ಅದೇ ಸಮಯಕ್ಕೆ ಬಂದ ಶಾಸಕ ಕೆ.ಎಸ್.ಬಸವಂತಪ್ಪ, ಟೇಬಲ್ ಮೇಲೆ ಬಿಟ್ಟು ಹೋಗಿದ್ದ ಹಣದ ಬ್ಯಾಗನ್ನು ತೆಗೆದು ನೋಡಿದಾಗ ಬ್ಯಾಗ್ ನಲ್ಲಿ ಹಣ ಇರುವುದು ಪತ್ತೆಯಾಗಿದೆ. ಯಾರೋ ಹಣ ಬಿಟ್ಟು ಹೋಗಿದ್ದಾರೆ ಎಂದು ಶಾಸಕ ಬಸವಂತಪ್ಪ, ಜ್ಯೂಸ್ ಸೆಂಟರ್ ಮಾಲೀಕ ಮತ್ತು ಜನರ ಎದುರು ಹಣವನ್ನು ಎಣಿಸಿದ್ದಾರೆ. ಅಗ ಬ್ಯಾಗ್ ನಲ್ಲಿ 1.20 ಲಕ್ಷ ರೂ. ಇತ್ತು. ಕೂಡಲೇ ಈ ಹಣ ಯಾರದೂ ಎಂದು ಗೊತ್ತಾಗುವವರೆಗೂ ನನ್ನ ಬಳಿ ಇರುತ್ತದೆ. ಅವರು ಬಂದ ಮೇಲೆ ಫೋನ್ ಮಾಡಿ ಎಂದು ಶಾಸಕರು ಜ್ಯೂಸ್ ಸೆಂಟರ್ ಮಾಲೀಕನಿಗೆ ಹೇಳಿ ಪದ್ದು ಕಾಫಿ ಬಾರ್ ಬಳಿ ಇದ್ದರು.
ಹಣ ಕಳೆದುಕೊಂಡಿದ್ದ ವೆಂಕಟೇಶ್ ಗೂಗಲ್ ನಲ್ಲಿ ಜ್ಯೂಸ್ ಸೆಂಟರ್ ದೂರವಾಣಿ ಸಂಖ್ಯೆ ಹುಡುಕಿ ಫೋನ್ ಮಾಡಿ ವಿಚಾರಿಸಿದ್ದಾರೆ. ಹಣದ ಬ್ಯಾಗ್ ಸಿಕ್ಕಿದೆ ಎಂದು ಜ್ಯೂಸ್ ಸೆಂಟರ್ ಮಾಲೀಕ ಮಾಹಿತಿ ನೀಡಿದ್ದಾರೆ. ನಂತರ ಹಣ ಕಳೆದುಕೊಂಡ ವ್ಯಕ್ತಿ ಬರುತ್ತಿದ್ದಾರೆ ಎಂದು ಜ್ಯೂಸ್ ಸೆಂಟರ್ ಮಾಲೀಕ ಶಾಸಕರಿಗೆ ತಿಳಿಸಿದ್ದಾರೆ. ಪದ್ದು ಕಾಫಿ ಬಾರ್ ಬಳಿಯಿದ್ದ ಶಾಸಕರು ಜ್ಯೂಸ್ ಸೆಂಟರ್ ಗೆ ಬಂದಿದ್ದಾರೆ. ಅಷ್ಟರಲ್ಲೇ ಹಣ ಕಳೆದುಕೊಂಡಿದ್ದ ವೆಂಕಟೇಶ್ ಬಂದಿದ್ದಾರೆ.
ಬ್ಯಾಗಿನಲ್ಲಿ ಎಷ್ಟು ಹಣ ಇತ್ತು ಎಂದು ಕೇಳಿದಾಗ 1.30 ಲಕ್ಷ ರೂ. ಇತ್ತು ಎಂದು ಹೇಳಿದ್ದಾರೆ. ಆಗಾದರೆ ಈ ಹಣ ನಿನ್ನದಲ್ಲ. ಏಕೆಂದರೆ ಈ ಬ್ಯಾಗಿನಲ್ಲಿ 1.20 ಲಕ್ಷ ರೂ. ಇರುವುದನ್ನು ನಾನೇ ಸಾರ್ವಜನಿಕರ ಮುಂದೆ ಎಣಿಸಿದ್ದೇನೆ. ಹೀಗಾಗಿ ಇದು ನಿಮ್ಮದಲ್ಲ, ಬೇರೆ ಯಾರದೋ ಇರಬಹುದು ಎಂದು ಶಾಸಕರು ಹೇಳಿದ್ದಾರೆ. ಆಗ ಇಲ್ಲ ಸರ್ ಬಾಗಿನಲ್ಲಿ 1.20 ಲಕ್ಷ ರೂ. ಇತ್ತು. ನನ್ನ ಮಗ ಆನ್ ಮೋಲ್ ವಸತಿ ಕಾಲೇಜಿನಲ್ಲಿ ಓದುತ್ತಿದ್ದಾನೆ. ಕಾಲೇಜು ಶುಲ್ಕ ಕಟ್ಟಲು ತಂದಿದ್ದೆ ಎಂದು ಹೇಳಿದ್ದಾನೆ. ಸುಳ್ಳು ಏಕೆ ಹೇಳಿದೆ, ನಿನ್ನಂಗೆ ಇನ್ನೊಬ್ಬರು ಕಳೆದುಕೊಂಡಿರಬಹುದು. ಇನ್ನು ಹತ್ತು ಸಾವಿರ ನಾನು ತೆಗೆದುಕೊಂಡಿದ್ದೇನೆ ಎಂಬರ್ಥವಾಗುತ್ತದೆ ಎಂದು ಹಣ ಕಳೆದುಕೊಂಡ ಮಾಲೀಕನಿಗೆ ನೀತಿ ಪಾಠ ಮಾಡಿ ಹಣವನ್ನು ಹಿಂದಿರುಗಿಸಿ ಮಾನವೀಯತೆ ಮೆರೆದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಈ ಹಣ ಶಾಸಕರ ಕೈಗೆ ಸಿಕ್ಕು, ಹಣ ಕಳೆದುಕೊಂಡ ವ್ಯಕ್ತಿಗೆ ಹಿಂದಿರುಗಿಸಿದರು. ಅದೇ ಹಣ ಬೇರೆ ವ್ಯಕ್ತಿಗಳಿಗೆ ಸಿಕ್ಕಿದ್ದರೆ, ಮಗನ ಕಾಲೇಜು ಶುಲ್ಕ ಕಟ್ಟಲು ತಂದಿದ್ದ ಹಣ ಕಂಡವರ ಪಾಲಾಗುತ್ತಿತ್ತು ಎಂದು ಸ್ಥಳದಲ್ಲಿ ಇದ್ದ ಸಾರ್ವಜನಿಕರು ಮಾತನಾಡಿಕೊಂಡರು.