ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ಮಹತ್ವಾಕಾಂಕ್ಷೆಯ ‘ಒಂದು ಜಿಲ್ಲೆ, ಒಂದು ಉತ್ಪನ್ನ’ (ODOP) ಯೋಜನೆಯು ರಾಜ್ಯದ ಸಾಂಪ್ರದಾಯಿಕ ಕರಕುಶಲ ಉದ್ಯಮಕ್ಕೆ ಹೊಸ ಜೀವ ನೀಡಿದೆ.
ಒಂದು ಕಾಲದಲ್ಲಿ ಆರ್ಥಿಕವಾಗಿ ಹಿಂದುಳಿದ ‘ಬಿಮಾರು’ (BIMARU) ರಾಜ್ಯ ಎಂದು ಕರೆಯಲ್ಪಡುತ್ತಿದ್ದ ಉತ್ತರ ಪ್ರದೇಶ, ಇಂದು ದೇಶದ ಪ್ರಮುಖ ಉತ್ಪಾದನಾ ಮತ್ತು ರಫ್ತು ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಈ ಯೋಜನೆಯ ಮೂಲಕ ರಾಜ್ಯದಲ್ಲಿ 3 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಿದ್ದು, ಸ್ಥಳೀಯ ಕುಶಲಕರ್ಮಿಗಳ ಉತ್ಪನ್ನಗಳು ಜಾಗತಿಕ ಮಾರುಕಟ್ಟೆ ತಲುಪುತ್ತಿವೆ.
ದಾಖಲೆಯ ಮಟ್ಟಕ್ಕೆ ಏರಿದ ರಫ್ತು ವ್ಯಾಪಾರ
2026-27ರ ಬಜೆಟ್ ಅಧಿವೇಶನದಲ್ಲಿ ಯುಪಿ ಜಿಐ ಮತ್ತು ಎಂಎಸ್‌ಎಂಇ ಸಚಿವ ರಾಕೇಶ್ ಸಚನ್ ಅವರು ಮಾಹಿತಿ ನೀಡಿ, ಒಡಿಒಪಿ ಯೋಜನೆಯು ಕೇವಲ ಬ್ರ್ಯಾಂಡಿಂಗ್‌ಗೆ ಸೀಮಿತವಾಗಿಲ್ಲ, ಬದಲಿಗೆ ಇದು ಗ್ರಾಮೀಣ ಭಾಗದ ಆರ್ಥಿಕ ಪುನರುತ್ಥಾನಕ್ಕೆ ಕಾರಣವಾಗಿದೆ ಎಂದಿದ್ದಾರೆ. ಸರ್ಕಾರದ ಅಧಿಕೃತ ಅಂಕಿ-ಅಂಶಗಳ ಪ್ರಕಾರ, 2017-18ರಲ್ಲಿ ಕೇವಲ ₹86,000 ಕೋಟಿ ಇದ್ದ ಉತ್ತರ ಪ್ರದೇಶದ ಒಟ್ಟು ರಫ್ತು ಪ್ರಮಾಣವು, ಪ್ರಸ್ತುತ ದಾಖಲೆಯ ₹1.84 ಲಕ್ಷ ಕೋಟಿಗೆ ತಲುಪಿದೆ. ವಿಶೇಷವೆಂದರೆ, ಈ ಒಟ್ಟು ರಫ್ತಿನಲ್ಲಿ ಶೇಕಡಾ 50 ರಷ್ಟು ಪಾಲು ಒಡಿಒಪಿ ಹಾಗೂ ಸಾಂಪ್ರದಾಯಿಕ ಕರಕುಶಲ ವಸ್ತುಗಳದ್ದಾಗಿದೆ.
3.16 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ
ಕಳೆದ ಒಂಬತ್ತು ವರ್ಷಗಳಲ್ಲಿ ಈ ಯೋಜನೆಯಡಿ 1.46 ಲಕ್ಷಕ್ಕೂ ಹೆಚ್ಚು ಕುಶಲಕರ್ಮಿಗಳಿಗೆ ಆಧುನಿಕ ತರಬೇತಿ ಹಾಗೂ ಉಚಿತ ಪರಿಕರಗಳ ಕಿಟ್‌ಗಳನ್ನು ವಿತರಿಸಲಾಗಿದೆ. ಅಲ್ಲದೆ, 20,000ಕ್ಕೂ ಹೆಚ್ಚು ಸ್ಥಳೀಯ ಉದ್ಯಮಿಗಳು ಇದರ ನೇರ ಲಾಭ ಪಡೆದುಕೊಂಡಿದ್ದಾರೆ. ಒಟ್ಟಾರೆಯಾಗಿ 3.16 ಲಕ್ಷಕ್ಕೂ ಹೆಚ್ಚು ಜನರಿಗೆ ಈ ಯೋಜನೆ ಉದ್ಯೋಗಾವಕಾಶ ಕಲ್ಪಿಸಿಕೊಟ್ಟಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಯುಪಿ ಉತ್ಪನ್ನಗಳ ದರ್ಬಾರ್
ಅಲಿಗಢದ ಪ್ರಸಿದ್ಧ ಬೀಗಗಳು, ಮೊರಾದಾಬಾದ್‌ನ ಹಿತ್ತಾಳೆ ಕಲಾಕೃತಿಗಳು, ವಾರಣಾಸಿಯ ರೇಷ್ಮೆ ಸೀರೆಗಳು, ಕನ್ನೌಜ್‌ನ ಸುಗಂಧ ದ್ರವ್ಯ (ಅತ್ತರ್), ಆಗ್ರಾದ ಚರ್ಮದ ಉತ್ಪನ್ನಗಳು ಮತ್ತು ಸಹರಾನ್‌ಪುರದ ಮರದ ಪೀಠೋಪಕರಣಗಳು ಇಂದು ಇ-ಕಾಮರ್ಸ್ ವೇದಿಕೆಗಳು ಹಾಗೂ ಅಂತರರಾಷ್ಟ್ರೀಯ ವ್ಯಾಪಾರ ಮೇಳಗಳ ಮೂಲಕ ಜಗತ್ತಿನಾದ್ಯಂತ ಮಾರಾಟವಾಗುತ್ತಿವೆ. ಪ್ಯಾಕೇಜಿಂಗ್ ಮತ್ತು ಬ್ರ್ಯಾಂಡಿಂಗ್ ಸುಧಾರಣೆಯಿಂದಾಗಿ ಕುಶಲಕರ್ಮಿಗಳ ಆದಾಯ ದುಪ್ಪಟ್ಟಾಗಿದೆ ಎಂದು ಸ್ಥಳೀಯ ಉದ್ಯಮಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
79 ಉತ್ಪನ್ನಗಳಿಗೆ ಜಿಐ ಟ್ಯಾಗ್ ಗೌರವ
ಉತ್ತರ ಪ್ರದೇಶದ ವಿಶಿಷ್ಟ ಉತ್ಪನ್ನಗಳ ಜಾಗತಿಕ ಗುರುತನ್ನು ಬಲಪಡಿಸಲು ಸರ್ಕಾರ ಸತತ ಶ್ರಮಿಸುತ್ತಿದ್ದು, ಪ್ರಸ್ತುತ ರಾಜ್ಯದ 79 ಉತ್ಪನ್ನಗಳಿಗೆ ಜಿಐ (Geographical Indication) ಟ್ಯಾಗ್ ಲಭಿಸಿದೆ. ಜಿಐ ಉತ್ಪನ್ನಗಳ ಪ್ರಚಾರ ಮತ್ತು ಮಾರುಕಟ್ಟೆ ವಿಸ್ತರಣೆಗಾಗಿ ಯೋಗಿ ಸರ್ಕಾರವು ಬಜೆಟ್ ಅನುದಾನವನ್ನು ₹145 ಕೋಟಿಯಿಂದ ₹200 ಕೋಟಿಗೆ ಹೆಚ್ಚಿಸಿದೆ. ಈ ಮೂಲಕ ಗ್ರಾಮೀಣ ಭಾಗದ ಸಣ್ಣ ಉದ್ಯಮಿಗಳು ಹಾಗೂ ಕುಶಲಕರ್ಮಿಗಳು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಬಲವಾದ ಮುನ್ನುಡಿ ಬರೆಯಲಾಗಿದೆ.





Leave a comment