SUDDIKSHANA KANNADA NEWS/ DAVANAGERE/ DATE:19-01-2025
ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವುದಾಗಿ ಬಿಜೆಪಿ ಹೈಕಮಾಂಡ್ ಘೋಷಿಸಿ ಭಿನ್ನಮತ ತೇಪೆ ಹಚ್ಚುವ ಕೆಲಸ ಮಾಡಿದ್ದರೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕ್ಯಾರೇ ಎನ್ನುತ್ತಿಲ್ಲ. ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಹಾಗೂ ಬಿ. ವೈ. ವಿಜಯೇಂದ್ರ ವಿರುದ್ಧದ ವಾಗ್ದಾಳಿ ಮುಂದುವರಿಸಿದ್ದಾರೆ.
ಬಿ. ಎಸ್. ಯಡಿಯೂರಪ್ಪ ವಿರುದ್ಧ ಮಾತನಾಡಿದರೆ ರಾಜ್ಯದ ಲಕ್ಷಾಂತರ ಕಾರ್ಯಕರ್ತರು, ಮುಖಂಡರು ಓಡಾಡಲು ಬಿಡುವುದಿಲ್ಲ ಎಂಬ ಬಿ. ವೈ. ವಿಜಯೇಂದ್ರ ಹೇಳಿಕೆಗೆ ರಮೇಶ್ ಜಾರಕಿಹೊಳಿ ಉತ್ತರಿಸಿದ್ದಾರೆ. ಇನ್ನು ವಿಜಯೇಂದ್ರ ಬಚ್ಚಾ ಎಂದು ಹೇಳಿರುವುದು ಸರಿಯಾಗಿಯೇ ಇದೆ ಎಂದು ಹೇಳಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ವಿಜಯೇಂದ್ರ ಬಚ್ಚಾ ಎಂಬ ಹೇಳಿಕೆ ನೀಡಿರುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಬೆನ್ನಲ್ಲೇ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿರುವುದನ್ನು ನೋಡಿದರೆ ಹೈಕಮಾಂಡ್ ಗೆ ಸೆಡ್ಡು ಹೊಡೆದಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಬಿ. ವೈ. ವಿಜಯೇಂದ್ರ ವಿರುದ್ಧದ ವಾಗ್ದಾಳಿ ಮುಂದುವರಿಸಿರುವ ಯತ್ನಾಳ್ ಯಾರ ಮಾತಿಗೂ ಕೇಳುವ ಸ್ಥಿತಿಯಲ್ಲಿ ಇಲ್ಲ. ಇದು ಬಿಜೆಪಿ ರಾಜ್ಯ ನಾಯಕರು ಹಾಗೂ ಕೇಂದ್ರ ವರಿಷ್ಠರಿಗೆ ತಲೆಬಿಸಿ ತಂದಿದೆ. ಎಚ್ಚರಿಕೆ ನೀಡಿದ ಹೊರತಾಗಿಯೂ ಯತ್ನಾಳ್ ಆರೋಪ, ಟೀಕಾಪ್ರಹಾರ ಮುಂದುವರಿಸಿದನ್ನು ಗಮನಿಸಿದರೆ ರಾಷ್ಟ್ರ ಮಟ್ಟದ ನಾಯಕರು ಇವರ ಹಿಂದೆ ಇದ್ದಾರೆ ಎಂಬುದು ವಿಜಯೇಂದ್ರ ಟೀಂನ ವಾದ.
ವಿಜಯೇಂದ್ರ ವಿರುದ್ಧ ಸ್ವಲ್ಪ ದಿನಗಳ ಮಟ್ಟಿಗೆ ತಣ್ಣಗಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮತ್ತೆ ನಿಗಿನಿಗಿ ಕೆಂಡ ಎನ್ನುವಂತಾಗಿದ್ದಾರೆ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ತನಕ ವಿರಮಿಸುವುದಿಲ್ಲ ಎಂಬ ರಮೇಶ್ ಜಾರಕಿಹೊಳಿ ಪರ ನಿಂತಿರುವುದರಿಂದ ಉತ್ತರ ಕರ್ನಾಟಕದ ಈ ಬಿಜೆಪಿ ನಾಯಕರ ನಡೆಗಳೇ ಬಿಜೆಪಿ ವರಿಷ್ಠರಿಗೆ ಮಗ್ಗುಲ ಮುಳ್ಳಾಗಿದೆ.
ಯಡಿಯೂರಪ್ಪ ಮಾತ್ರ ಬಿಜೆಪಿ ಪಕ್ಷ ಕಟ್ಟಿಲ್ಲ. ನಾನೂ ಯಡಿಯೂರಪ್ಪರ ಜೊತೆಗೂಡಿ ಪಕ್ಷ ಕಟ್ಟಿದ್ದೇನೆ. ಇದು ಒಬ್ಬರೇ ಕಟ್ಟಿರುವ ಪಕ್ಷವಲ್ಲ. ನೂರಾರು, ಸಾವಿರಾರು ಮುಖಂಡರು, ಲಕ್ಷಾಂತರ ಕಾರ್ಯಕರ್ತರ ಶ್ರಮದಿಂದ ಪಕ್ಷ ಬಲಿಷ್ಠಗೊಂಡಿದೆ ಎನ್ನುವ ಮೂಲಕ ಯಡಿಯೂರಪ್ಪ ವಿರುದ್ಧದ ಸಿಟ್ಟು ಮತ್ತೆ ಹೊರ ಹಾಕಲಾರಂಭಿಸಿದ್ದಾರೆ. ಇದು ಯಾವ ಮಟ್ಟಕ್ಕೆ ತಲುಪುತ್ತದೆ ಎಂಬುದನ್ನು ಕಾದು ನೋಡಬೇಕಿದೆ.