ದಾವಣಗೆರೆ: ದಾವಣಗೆರೆಯ ಅಪೂರ್ವ ರೆಸಾರ್ಟ್ ನಲ್ಲಿ ಆಯೋಜಿಸಿದ್ದ ಮದುವೆ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಭೇದಿಸಿರುವ ಪೊಲೀಸರು ಮಧ್ಯಪ್ರದೇಶಗಳ ನಾಲ್ಕು ಗ್ರಾಮಗಳಿಗೆ ಹೋದಾಗ ಪೊಲೀಸರೇ ಶಾಕ್ ಆಗಿದ್ದಾರೆ. ಯಾಕೆಂದರೆ ಈ ನಾಲ್ಕು ಗ್ರಾಮಗಳಲ್ಲಿ ಇರೋದು ಬಹುತೇಕ ಕಳ್ಳರೇ. ಅಂದ ಹಾಗೆ ಈ ಗ್ರಾಮಗಳ ಯುವಕರು, ಪುರುಷರು ಹೆಚ್ಚಾಗಿ ಕಳ್ಳತನವನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಈ ಸುದ್ದಿಯನ್ನೂ ಓದಿ: EXCLUSIVE: 250 ಸಿಸಿಟಿವಿಗಳ ಪರಿಶೀಲನೆ, ಮಧ್ಯಪ್ರದೇಶಕ್ಕೆ ಮಾರುವೇಷದಲ್ಲೋದ ದಾವಣಗೆರೆ ಪೊಲೀಸರು: 51. 49 ಲಕ್ಷ ರೂ. ಬಂಗಾರದ ಒಡವೆಗಳ ವಶಪಡಿಸಿಕೊಂಡಿದ್ದೇಗೆ?
ಶ್ರೀಮಂತರ ಮದುವೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಖತರ್ನಾಕ್ ಖದೀಮರು ಚಿನ್ನಾಭರಣ ದೋಚಲು ಸ್ಕೆಚ್ ಹಾಕುತ್ತಿದ್ದರು. ಮಾತ್ರವಲ್ಲ, ಶ್ರೀಮಂತರು ತುಂಬಾ ದುಬಾರಿ ಬಂಗಾರದ ಒಡವೆ ತಂದಿರುತ್ತಾರೆ, ಇಲ್ಲವೇ ಧರಿಸಿರುತ್ತಾರೆ. ಸ್ವಲ್ಪ ಯಾಮಾರಿದರೂ ಅಲರ್ಟ್ ಆಗುತ್ತಿದ್ದ ಕಳ್ಳರು ಕದ್ದು ಕ್ಷಣಮಾತ್ರದಲ್ಲೇ ನಾಪತ್ತೆಯಾಗಿಬಿಡುತ್ತಾರೆ. ಅಂಥ ಖತರ್ನಾಕ್ ಖದೀಮರು ಇವರು.
ಮಧ್ಯ ಪ್ರದೇಶದ ರಾಜಘರ್ ಜಿಲ್ಲೆಯ ಗುಲ್‌ಕೆಡಾ, ಕಡಿಯಾ ಸಾಂಸಿ ಮತ್ತು ಹುಲ್‌ಕೆಡಾ ಗ್ರಾಮಗಳ ಹೆಚ್ಚಿನ ಜನರು ತಮ್ಮ ಪೂರ್ವಜರ ಕಾಲದಿಂದಲೂ ಕಳ್ಳತನ ಮಾಡುವುದನ್ನು ಕುಲಕಸುಬನ್ನಾಗಿ ಮಾಡಿಕೊಂಡು ಬಂದಿದ್ದಾರೆ.
ಅಲ್ಲಿನ ಜನರು ಪೊಲೀಸರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿವುಳ್ಳವರು. ಗ್ರಾಮದ ಜನರು ಬ್ಯಾಂಡ್ ಬಜ ಗ್ಯಾಂಗ್ ಅಂತಲೇ ಹೆಸರುವಾಸಿ. ಇವರು ವಿಜೃಂಭಣೆ ಮತ್ತು ಆಡಂಬರದ ಮದುವೆ ಟಾರ್ಗೆಟ್ ಮಾಡಿಕೊಂಡು ಮದುವೆ ಸಂಭ್ರಮಗಳಲ್ಲಿ ಕಳ್ಳತನ ಮಾಡುವ ಪ್ರವೃತ್ತಿವುಳ್ಳವರಾಗಿದ್ದಾರೆ. ಪೊಲೀಸರಿಗೆ ಯಾವುದೇ ರೀತಿಯ ಸಹಾಯ ಮಾಡುವ ಪ್ರವೃತ್ತಿವುಳ್ಳವರು ಈ ಊರಿನವರಲ್ಲ,
ಮಧ್ಯಪ್ರದೇಶ ರಾಜ್ಯದ ರಾಜ್‌ಗಡ್ ಜಿಲ್ಲೆಯ ನರಸಿಂಗ್ ತಾಲ್ಲೂಕಿನ ಗುಲ್‌ಖೇಡಾದ ಕರಣ್ ವರ್ಮಾ ಅಲಿಯಾಸ್ ಕರಣ್ ಸಿಸೊಡಿಯಾ, ವಿನಿತ್ ಸಿಸೊಡಿಯಾಗೆ ಮಾಹಿತಿ ಸಿಕ್ಕಿದ್ದು, ದಾವಣಗೆರೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾರೆ. ಅರ್ಧಕೋಟಿ ರೂಪಾಯಿಗೂ ಹೆಚ್ಚು ಚಿನ್ನಾಭರಣ ವಶಪಡಿಸಿಕೊಂಡು ಬರುವಲ್ಲಿ ಖಡಕ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಧನ್ಯವಾದ:
ಮಧ್ಯಪ್ರದೇಶದ ರಾಜಘರ್ ಜಿಲ್ಲೆಯ ಪೊಲೀಸ್ ಅಧೀಕ್ಷಕ ಅಮಿತ್ ಸುರೇಶ್ ತೊಲಾನಿ, ನರಸಿಂಗರ್ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಮಿನಿಶುಕ್ಲಾ ಅವರ ನೆರವನ್ನೂ ಪಡೆದಿರುವ ದಾವಣಗೆರೆ ಪೊಲೀಸರು ಕಾರ್ಯಾಚರಣೆ ಯಶಸ್ವಿಯಾದರೂ ಆರೋಪಿಗಳು ಸಿಕ್ಕಿಲ್ಲ. ಭಾರೀ ಪ್ರಮಾಣದ ಚಿನ್ನಾಭರಣ ವಶಪಡಿಸಿಕೊಳ್ಳಲು ನೆರವಾದ ಪೊಲೀಸ್ ಅಧಿಕಾರಿಗಳಿಗೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಧನ್ಯವಾದ ಅರ್ಪಿಸಿದ್ದಾರೆ.
ಎಂಪಿಗೆ ಹೋಗಿದ್ದ ದಾವಣಗೆರೆ ಪೊಲೀಸರಿವರು:
ಪ್ರಕರಣದ ಆರೋಪಿತರ ಪತ್ತೆಗೆ ಕಾರ್ಯದಲ್ಲಿ ಶ್ರಮಿಸಿದ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ಬಸವರಾಜ್ ಬಿ. ಎಸ್, ಚನ್ನಗಿರಿ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಕೆ. ಟಿ. ಅಣ್ಣಯ್ಯ, ಪಿಎಸ್ಐಗಳಾದ ಪ್ರಭು ಡಿ. ಕೆಳಗಿನಮನಿ, ಅಬ್ದುಲ್ ಖಾದರ್ ಜಿಲಾನಿ, ಜೋವಿತ್ ರಾಜ್ ಮತ್ತು ಸಿಬ್ಬಂದಿಗಳಾದ ಮಾರುತಿ, ಮಹಮ್ಮದ್ ಯೂಸೂಫ್ ಅತ್ತಾರ್, ಹನುಮಂತಪ್ಪ, ಸಿ, ಗಿರೀಶ್ ಗೌಡ, ಲಿಂಗರಾಜ್, ಪ್ರವೀಣ್ ಕುರಿ, ನಾಗಭೂಷಣ್, ವೀರೇಶ್, ಜಿಲ್ಲಾ ಪೊಲೀಸ್ ಕಚೇರಿಯ ರಾಮಚಂದ್ರ ಜಾಧವ್, ರಮೇಶ್, ಸಿದ್ದಾರ್ಥ, ದಾವಣಗೆರೆ ಕಮಾಂಡೋ ಸೆಂಟರ್ ಸಿಬ್ಬಂದಿಗಳಾದ ಮಾರುತಿ, ಸೋಮಪ್ಪ, ಪ್ರಶಾಂತ, ಚಾಲಕರಾದ ನೂರುಲ್ಲಾ ಷರೀಫ್, ಅಸ್ಗರ್ ಅಲಿ, ಮಧ್ಯಪ್ರದೇಶ ಸ್ಥಳೀಯ ಪೊಲೀಸರಾದ ಬೋಡಾ ಪೊಲೀಸ್ ಠಾಣೆಯ ಠಾಣಾಧಿಕಾರಿಯಾದ ದೇವೇಂದ್ರ ರಜಪೂತ್ ಮತ್ತು ಕಾನ್ ಸ್ಟೇಬಲ್ ಪೊಲೀಸ್ ಅವರನ್ನು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಅಭಿನಂದಿಸಿದ್ದಾರೆ.





Leave a comment