ನವದೆಹಲಿ: ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸುವುದು ಪ್ರತಿಯೊಬ್ಬ ಭಾರತೀಯನಿಗೂ ನಿತ್ಯದ ಅನುಭವ. ಆದರೆ, ವಿದೇಶಿ ಪ್ರವಾಸಿಗರು ಭಾರತದ ರೈಲು ಪ್ರಯಾಣದ ಬಗ್ಗೆ ಹಂಚಿಕೊಳ್ಳುವ ಅನಿಸಿಕೆಗಳು ತೀವ್ರ ಕುತೂಹಲ ಮೂಡಿಸುತ್ತವೆ. ಇದೀಗ ಲಿಥುವೇನಿಯಾ ದೇಶದ ಇಬ್ಬರು ಮಹಿಳಾ ಪ್ರವಾಸಿಗರು ಭಾರತದ ಹೆಮ್ಮೆಯ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲಿನಲ್ಲಿ ಪ್ರಯಾಣಿಸಿದ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಅವರ ವಿಡಿಯೋಗಳು ವ್ಯಾಪಕವಾಗಿ ವೈರಲ್ ಆಗಿವೆ.
ಲಿಥುವೇನಿಯಾದ ಕರಿಷಾ ಹಾಗೂ ಅವರ ಸ್ನೇಹಿತೆ ಕ್ರಿಸ್ಟಿನಾ ತಮ್ಮ ಉದ್ಯೋಗಗಳನ್ನು ತೊರೆದು ಭಾರತ ಪ್ರವಾಸ ಕೈಗೊಂಡಿದ್ದಾರೆ. ನವದೆಹಲಿ, ಆಗ್ರಾ, ಜೈಪುರ, ಕಾಶ್ಮೀರ ಸೇರಿದಂತೆ ದೇಶದ ವಿವಿಧ ಭಾಗಗಳನ್ನು ವೀಕ್ಷಿಸುವ ಯೋಜನೆಯೊಂದಿಗೆ ಆಗಮಿಸಿರುವ ಇವರು, ವಂದೇ ಭಾರತ್ ರೈಲಿನ ಎಸಿ ಕೋಚ್‌ನಲ್ಲಿ ಸುಮಾರು 10 ಗಂಟೆ ಪ್ರಯಾಣಿಸಿದ್ದಾರೆ. ಪ್ರಯಾಣದ ವೇಳೆ ಎದುರಾದ ಲಗೇಜ್ ಇಡುವ ಗೊಂದಲ, ಶೌಚಾಲಯದ ನೈರ್ಮಲ್ಯ ಹಾಗೂ ಎಸಿ ಕೋಚ್‌ನ ಸೌಕರ್ಯಗಳ ಕುರಿತು ಕರಿಷಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮುಕ್ತವಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
‘ಹಂಗರ್ ಗೇಮ್ಸ್’ ಹೋಲಿಕೆ: ರೈಲು ಹತ್ತುವಾಗ ಮತ್ತು ಲಗೇಜ್ ಇಡಲು ಜಾಗ ಹುಡುಕುವಾಗ ಎದುರಾದ ತೀವ್ರ ಗೊಂದಲವನ್ನು ಅವರು ‘ದಿ ಹಂಗರ್ ಗೇಮ್ಸ್’ ಪ್ರಸಿದ್ಧ ಸಿನೆಮಾದ ಸನ್ನಿವೇಶಕ್ಕೆ ತಮಾಷೆಯಾಗಿ ಹೋಲಿಸಿದ್ದಾರೆ.
ಎಸಿ ಕೋಚ್‌ಗೆ ಫುಲ್ ಮಾರ್ಕ್ಸ್: ಈ ಎಲ್ಲಾ ಸವಾಲುಗಳ ನಡುವೆಯೂ 10 ಗಂಟೆಗಳ ಎಸಿ ಕೋಚ್ ಪ್ರಯಾಣ ಅತ್ಯಂತ ಸುಖಕರ ಹಾಗೂ ಸುರಕ್ಷಿತವಾಗಿತ್ತು. ನೀಡಿದ ಹಣಕ್ಕೆ ತಕ್ಕ ಮೌಲ್ಯ ಸಿಕ್ಕಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶೌಚಾಲಯ ಮತ್ತು ಸೌಲಭ್ಯ: ರೈಲಿನ ಶೌಚಾಲಯ ಸ್ವಚ್ಛವಾಗಿದ್ದರೂ ವಾಸನೆ ಮತ್ತು ವಾಶ್‌ಬೇಸಿನ್‌ನ ಸಣ್ಣ ಗಾತ್ರದ ಕುರಿತು ತಮಾಷೆಯಾಗಿ ಚರ್ಚಿಸಿದ್ದಾರೆ.
ಪ್ರವಾಸಿಗರ ಸಲಹೆ: ಎಸಿ ಮತ್ತು ನಾನ್-ಎಸಿ ಕೋಚ್ ನಡುವೆ ಟಿಕೆಟ್ ದರದಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲದಿದ್ದರೆ, ಎಸಿ ಕೋಚ್ ಆಯ್ಕೆ ಮಾಡಿಕೊಳ್ಳುವುದೇ ಹೆಚ್ಚು ಸುರಕ್ಷಿತ ಹಾಗೂ ಸೂಕ್ತ ಎಂದು ವಿದೇಶಿ ಮಹಿಳೆ ಸಲಹೆ ನೀಡಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಭಾರತೀಯ ರೈಲ್ವೆಯಲ್ಲಿ ಟಿಕೆಟ್ ಬುಕ್ಕಿಂಗ್ ಸವಾಲುಗಳು ಹಾಗೂ ದಿನೇ ದಿನೇ ಹೆಚ್ಚುತ್ತಿರುವ ಜನದಟ್ಟಣೆಯ ಬಗ್ಗೆ ವೈವಿಧ್ಯಮಯ ಕಾಮೆಂಟ್‌ಗಳ ಮೂಲಕ ಚರ್ಚೆ ಆರಂಭಿಸಿದ್ದಾರೆ.





Leave a comment