ದೆಹಲಿ: ಒಂದೇ ಬ್ಯಾಚ್ನ 20ಕ್ಕೂ ಹೆಚ್ಚು ಮಹಿಳಾ ಪೊಲೀಸ್ ಕಾನ್ಸ್ಟೇಬಲ್ಗಳಿಗೆ ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿ ಕೈಕೊಟ್ಟಿದ್ದ ವಿಕ್ರಾಂತ್ ತೋಮರ್ ಎಂಬಾತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
“ಉಂಡು ಹೋದ… ಕೊಂಡು ಹೋದ” ಎನ್ನುವ ಗಾದೆಗೆ ನೂರಕ್ಕೆ ನೂರರಷ್ಟು ಸೂಕ್ತವಾಗಿ ಹೊಂದಾಣಿಕೆಯಾಗುವಂತೆ ಕೃತ್ಯವೆಸಗಿದ್ದ ಈತ, ಕೊನೆಗೂ ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದಾನೆ.
ದೆಹಲಿಯ ಕರೋಲ್ ಬಾಗ್ ಪೊಲೀಸ್ ಠಾಣೆಯಲ್ಲಿ ನಿಯೋಜನೆಗೊಂಡಿದ್ದ ಮಹಿಳಾ ಕಾನ್ಸ್ಟೇಬಲ್ ಒಬ್ಬರು ನೀಡಿದ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಬುರಾರಿ ಪ್ರದೇಶದಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧನದ ಬಳಿಕ ಆತನ ವಂಚನೆಯ ಜಾಲವನ್ನು ಕಂಡು ತನಿಖಾಧಿಕಾರಿಗಳೇ ಆಶ್ಚರ್ಯಚಕಿತರಾಗಿದ್ದಾರೆ. ಮೋಸ ಹೋದ ಹಲವು ಮಹಿಳಾ ಕಾನ್ಸ್ಟೇಬಲ್ಗಳು ಸಮಾಜದಲ್ಲಿ ಮಾನ-ಮರ್ಯಾದೆಗೆ ಹೆದರಿ ದೂರು ನೀಡಲು ಮುಂದೆ ಬಂದಿರಲಿಲ್ಲ ಎಂಬ ಸತ್ಯ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ವಂಚನೆಯ ಶೈಲಿ: ಐಷಾರಾಮಿ ಕಾರುಗಳನ್ನು ಬಾಡಿಗೆಗೆ ಪಡೆದು ಮಹಿಳಾ ಪೇದೆಗಳನ್ನು ದುಬಾರಿ ಕಾಫಿ ಶಾಪ್ ಹಾಗೂ ಹೋಟೆಲ್ಗಳಿಗೆ ಕರೆದೊಯ್ಯುತ್ತಿದ್ದ ಆರೋಪಿ.
ಶ್ರೀಮಂತ ಉದ್ಯಮಿಯ ಅವತಾರ: ತಾನೊಬ್ಬ ದೊಡ್ಡ ಉದ್ಯಮಿ ಎಂದು ನಂಬಿಸಿ, ಮಹಿಳಾ ಕಾನ್ಸ್ಟೇಬಲ್ಗಳ ಮನಸ್ಸು ಗೆದ್ದು ಮದುವೆಯಾಗುವುದಾಗಿ ಆಸೆ ತೋರಿಸುತ್ತಿದ್ದ.
ಬ್ಯಾಚ್ಮೇಟ್ಗಳೇ ಟಾರ್ಗೆಟ್: ಲಿವ್-ಇನ್ ರಿಲೇಷನ್ಶಿಪ್ನಲ್ಲಿದ್ದ ಮೊದಲ ಮಹಿಳಾ ಕಾನ್ಸ್ಟೇಬಲ್ ಮೂಲಕ ಇಲಾಖೆಯ ಇತರ ಬ್ಯಾಚ್ಮೇಟ್ಗಳ ಮಾಹಿತಿ ಪಡೆದು ವಂಚನೆ ನಡೆಸಿದ್ದಾನೆ ಎಂದು ಶಂಕಿಸಲಾಗಿದೆ.
ಮಹಿಳಾ ಕಾನ್ಸ್ಟೇಬಲ್ ನೀಡಿದ ದೂರಿನ ಮೇರೆಗೆ ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಈತನಿಂದ ಮತ್ತಷ್ಟು ಜನ ಮೋಸ ಹೋಗಿದ್ದಾರೆಯೇ ಎಂಬ ಕುರಿತು ಸಮಗ್ರ ತನಿಖೆ ಮುಂದುವರಿಸಿದ್ದಾರೆ.





Leave a comment