SUDDIKSHANA KANNADA NEWS/ DAVANAGERE/ DATE:03-02-2024
ದಾವಣಗೆರೆ: ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರ ಕುರಿತಂತೆ ಸರ್ವೇ ನಡೆಯುತ್ತಿದೆ. ಆದಷ್ಟು ಬೇಗ ಟಿಕೆಟ್ ಘೋಷಣೆ ಮಾಡಲಾಗುವುದು. ಯಾರಿಗೂ ಟಿಕೆಟ್ ಕೇಳಬೇಡಿ ಎಂದು ಹೇಳಲು ಆಗದು. ಕಾಂಗ್ರೆಸ್ ನಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದಾರೆ ಎಂದು ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದ ಬಾಪೂಜಿ ಎಂಬಿಎ ಗ್ರೌಂಡ್ ನಲ್ಲಿ ಮಾಧ್ಯಮವದರ ಜೊತೆ ಮಾತನಾಡಿದ ಅವರು, ಯಾರಿಗೂ ಟಿಕೆಟ್ ಕೇಳಬೇಡಿಯೆಂದು ಹೇಳಲು ಆಗದು. ಅಂತಿಮವಾಗಿ ಆಯಾ ಲೋಕಸಭಾ ಕ್ಷೇತ್ರದಲ್ಲಿ ಬರುವ ಮುಖಂಡರು, ಶಾಸಕರು, ಸಚಿವರು, ಮಾಜಿ ಶಾಸಕರು, ಮಾಜಿ ಸಂಸದರು, ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಟಿಕೆಟ್ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ದೂರು ನೀಡಿದರೆ ತನಿಖೆ:
ನಗರೋತ್ಥಾನ ಯೋಜನೆಯಡಿ ಕಾಮಗಾರಿಯ ಬಿಲ್ ಪಾಸು ಮಾಡಲು ಅಧಿಕಾರಿಗಳು ಸತಾಯಿಸುತ್ತಿರುವ ಬಗ್ಗೆ ದೂರು ನೀಡಿದರೆ ತನಿಖೆ ಕೈಗೊಂಡು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ
ತಿಳಿಸಿದರು.
ನಗರೋತ್ಥಾನ ಯೋಜನೆಯಡಿ ಕಾಮಗಾರಿಯ ಬಿಲ್ ಪಾಸು ಮಾಡಲು ಅಧಿಕಾರಿಗಳು ಸತಾಯಿಸುತ್ತಿರುವ ಬಗ್ಗೆ 10 ಜಿಲ್ಲೆಗಳ ಗುತ್ತಿಗೆದಾರರು ಆರೋಪಿಸಿರುವ ಬಗ್ಗೆ ಅವರು ಮೇಲಿನಂತೆ ಪ್ರತಿಕ್ರಿಯೆ ನೀಡಿದರು.
ಎಲ್ಲರ ಅಭಿಪ್ರಾಯ ಪಡೆದು ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾಗುವುದು. ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಗಳ ಪಟ್ಟಿ ಆದಷ್ಟು ಶೀಘ್ರದಲ್ಲಿಯೇ ಸಿದ್ಧವಾಗಲಿದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮಗನಿಗೆ ಟಿಕೆಟ್ ಕೊಡಿವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರು ಕೂಡ ಒಬ್ಬ ಟಿಕೆಟ್ ಆಕಾಂಕ್ಷಿಯಾಗಿ ಕೇಳುತ್ತಾರೆ. ಕಾಂಗ್ರೆಸ್ ನಲ್ಲಿ ಟಿಕೆಟ್ ಕೇಳುವವರೇ ಸಂಖ್ಯೆ
ಜಾಸ್ತಿಯಿರುತ್ತದೆ. ಸ್ಥಳೀಯ ನಾಯಕರು, ಬ್ಲಾಕ್ ಸಮಿತಿ ಅಧ್ಯಕ್ಷರು, ಶಾಸಕರು, ಸಂಸದರ ಅಭಿಪ್ರಾಯ ಪಡೆದು ಪಟ್ಟಿಯನ್ನು ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.
ಬಾಗೂರು ಚನ್ನಕೇಶವ ದೇವಸ್ಥಾನದೊಳಗೆ ಈಶ್ವರಾನಂದ ಸ್ವಾಮೀಜಿ ಅವರನ್ನು ಬಿಟ್ಟಿಲ್ಲ ಎಂಬ ವಿಷಯಕ್ಕೆ ಪ್ರತಿ ಕ್ರಿಯೆ ನೀಡಿ ಗೊತ್ತಿಲ್ಲದ ವಿಚಾರದ ಬಗ್ಗೆ ಹೇಗೆ ಪ್ರತಿಕ್ರಿಯೆ ನೀಡುವುದು ಎಂದರು.
ಅಡ್ವಾಣಿಯವರಿಗೆ ಭಾರತ ರತ್ನ ದೊರೆತಿರುವ ಬಗ್ಗೆ ಮಾತನಾಡಿ ಕೊಡಲಿ, ಬೇಡ ಎಂದು ನಾವು ಹೇಳಿಲ್ಲ. ನಾನು ತುಮಕೂರು ಸಿದ್ಧಗಂಗ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಆದ್ರೆ, ಇದಕ್ಕೆ ಮನ್ನಣೆ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ವೇಳೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಕಾಂಗ್ರೆಸ್ ಹಿರಿಯ ಮುಖಂಡ ಸೈಯ್ಯದ್ ಸೈಫುಲ್ಲಾ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.