SUDDIKSHANA KANNADA NEWS/ DAVANAGERE/ DATE:03-02-2024
ಬೆಂಗಳೂರು: ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸಗೊಳಿಸುವಾಗ ಬಿಜೆಪಿ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಅವರ ಜೊತೆಗಿದ್ದದ್ದು ನನ್ನ ಜೀವನದಲ್ಲಿ ಮರೆಯಲಾರದ ಕ್ಷಣ. ಬಿಜೆಪಿ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿರುವುದು ಸಂತೋಷದ ಸಂಗತಿ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇನೆ ಎಂದು ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ತಿಳಿಸಿದರು.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಎಲ್. ಕೆ. ಅಡ್ವಾಣಿ ಅವರು ನನಗೆ ಅತ್ಯಮೂಲ್ಯ ಸಲಹೆ ನೀಡಿದ್ದರು. ಅಡ್ವಾಣಿ ಅವರ ನಿಸ್ವಾರ್ಥ ಸೇವೆ, ಅಗಣಿತ ದೇಶ ಪ್ರೇಮವೂ ಸೇರಿದಂತೆ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಹಿರಿಯರಾದ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅಲ್ಲದೇ, ನನಗೆ ಬಹಳ ಸಂತೋಷವಾಗಿದೆ ಎಂದರು.
ಅನೇಕ ಸಂದರ್ಭಗಳಲ್ಲಿ ನಾನು ಅಡ್ವಾಣಿ ಅವರ ಜೊತೆಗಿದ್ದೆ. ರಥಯಾತ್ರೆ, ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸಗೊಳಿಸುವಾಗಲೂ ಜೊತೆಗಿದ್ದೆ. ಬಾಬ್ರಿ ಮಸೀದಿ ಧ್ವಂಸ ಗೊಳಿಸಿ ಮಾರನೇ ದಿನ ರಾಮ ಮಂದಿರದ ಪ್ರತಿಷ್ಠಾಪನೆ ವೇಳೆ ಪೇಜಾವರ ಶ್ರೀಗಳ ಜೊತೆಗಿದ್ದೆ. ಇದು ಸಹ ನನಗೆ ಮರೆಯಲಾಗದ್ದು. ನರೇಂದ್ರ ಮೋದಿ ಅವರು ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದಾರೆ. ಅತ್ಯಂತ ಸಂತೋಷ. ಕೋಟ್ಯಂತರ ಕಾರ್ಯಕರ್ತರು ಆನಂದದಿಂದ ಕುಣಿದು ಕುಪ್ಪಳಿಸುತ್ತಿದ್ದಾರೆ ಎಂದು ಹೇಳಿದರು.
ಬಿ. ವೈ. ವಿಜಯೇಂದ್ರ ಏನಂದ್ರು…?
ದೇಶ ಕಂಡ ಅತ್ಯುನ್ನತ ರಾಜಕಾರಣಿ. ಮೌಲ್ಯಗಳನ್ನು ಎತ್ತಿ ಹಿಡಿದ ನಾಯಕ. ಭಾರತ ರತ್ನ ಗೌರವ ನೀಡಿದ್ದು ದೇಶದ ಕೋಟ್ಯಂತರ ಜನರಿಗೆ ಖುಷಿ ತಂದಿದೆ. ಅಡ್ವಾಣಿ ಅವರ ಮಾರ್ಗದರ್ಶನ ಎಲ್ಲರಿಗೂ ಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ತಿಳಿಸಿದರು.
ಭಾರತದ ಸೇವಕನಿಗೆ ಒಲಿದ ಭಾರತ ರತ್ನ
ಭಾರತದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಹಿರಿಯ ಮುತ್ಸದ್ಧಿ ನಾಯಕ, ದಣಿವರಿಯದ ಧೀಮಂತ, ಅವಿಶ್ರಾಂತ ಹೋರಾಟಗಾರ ಭಾರತದ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿಯವರಿಗೆ ಭಾರತ ರತ್ನ ಪುರಸ್ಕಾರ ದೊರೆತಿರುವುದು ನಿಜಕ್ಕೂ ಅತ್ಯಂತ ಸಂತಸದ ವಿಚಾರ. ಭಾರತ ರತ್ನ ಎಲ್. ಕೆ. ಅಡ್ವಾಣಿಯವರಿಗೆ ಹಾರ್ದಿಕ ಅಭಿನಂದನೆಗಳು ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ನನ್ನ ಪೂಜ್ಯ ತಂದೆಯವರಾದ ಎಸ್.ಆರ್.ಬೊಮ್ಮಾಯಿಯವರ ಉತ್ತಮ ಸ್ನೇಹಿತರಾಗಿದ್ದ ಅಡ್ವಾಣಿಯವರ ವ್ಯಕ್ತಿತ್ವವನ್ನು ನಾನು ನನ್ನ ಚಿಕ್ಕ ವಯಸ್ಸಿನಿಂದ ಬಲ್ಲೆ. ಅಡ್ವಾಣಿಯವರ ಚಿಂತನೆಗಳು ಹಾಗೂ ರಾಷ್ಟ್ರ
ನಿರ್ಮಾಣದ ಸಂಕಲ್ಪ ಹಾಗೂ ಸಂಸದೀಯ ನಡುವಳಿಕೆಗಳು ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾಗಿವೆ ಎಂದು ಹೇಳಿದ್ದಾರೆ.