SUDDIKSHANA KANNADA NEWS/ DAVANAGERE/ DATE:05-01-2024
ದಾವಣಗೆರೆ: ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಆಶ್ರಯದಲ್ಲಿ ಜ.28ರ ಬೆಳಿಗ್ಗೆ 11 ಗಂಟೆಗೆ ಚಿತ್ರದುರ್ಗದ ಶ್ರೀ ಬಸವ ಮೂರ್ತಿ ಮಾದಾರ ಚನ್ನಯ್ಯ ಪೀಠದ ಮೈದಾನದಲ್ಲಿ ಸಂವಿಧಾನ, ಸಾಮಾಜಿಕ ನ್ಯಾಯ, ಸಹಬಾಳ್ವೆ ಮತ್ತು ಸ್ವಾಭಿಮಾನದ ಸಂರಕ್ಷಣೆಗಾಗಿ ಶೋಷಿತರ ಜಾಗೃತ ಸಮಾವೇಶ ಆಯೋಜಿಸಲಾಗಿದೆ ಎಂದು ಮಹಾಒಕ್ಕೂಟದ ಅಧ್ಯಕ್ಷ ಕೆ. ಎಂ. ರಾಮಚಂದ್ರಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಪಾಲ್ಗೊಳ್ಳಲಿದ್ದು, ಶೋಷಿತ ಸಮುದಾಯಗಳ ಸಚಿವರು ಹಾಗೂ ಎಲ್ಲಾ ಮುಖಂಡರು ಆಗಮಿಸಲಿದ್ದು, ಹೆಚ್. ಕಾಂತರಾಜ ಆಯೋಗದ ವರದಿ ಅಂಗೀಕರಿಸಬೇಕು ಎಂಬುದೂ ಸೇರಿದಂತೆ ಹತ್ತು ಹಕ್ಕೊತ್ತಾಯಗಳನ್ನು ಮಂಡನೆ ಮಾಡಲಾಗುವುದು ಎಂದು ಹೇಳಿದರು.
ಕೇಂದ್ರ ಸರ್ಕಾರವು ಜಾತಿವಾರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಮಾಡಿಸಬೇಕು. ಇಡಬ್ಲ್ಯೂಎಸ್ ಶೇಕಡಾ 10ರಷ್ಟು ಮೀಸಲಾತಿ ರದ್ದುಪಡಿಸಬೇಕು. ಮಹಿಳಾ ರಾಜಕೀಯ ಮೀಸಲಾತಿ ಕಾಯಿದೆ ಕೂಡಲೇ ಜಾರಿ ಮಾಡಬೇಕು. ರಾಜಕೀಯ ಕ್ಷೇತ್ರದಲ್ಲೂ ಒಳಮೀಸಲಾತಿ ಕಲ್ಪಿಸಬೇಕು. ರಾಜಕೀಯ ಮೀಸಲಾತಿಯನ್ನು ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಹಿಂದುಳಿದ ಜಾತಿಗಳಿಗೆ ಮತ್ತು ಅಲ್ಪಸಂಖ್ಯಾತರಿಗೆ ಅವಕಾಶ ಕಲ್ಪಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಶೇಕಡಾವಾರು ಪ್ರಮಾಣದಲ್ಲಿ ಮೀಸಲಾತಿ ಹೆಚ್ಚಿಸಬೇಕು. ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೂ ನಮ್ಮ ಹಕ್ಕೊತ್ತಾಯಗಳನ್ನು ಶೀಘ್ರವಾಗಿ ಈಡೇರಿಸುವಂತೆ ಒತ್ತಾಯಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತ ಮತ್ತು ಅಸಂಘಟಿತ ಶೋಷಿತ ಸಮುದಾಯಗಳು ಸಂಘಟಿತರಾಗಬೇಕಾದ ಅನಿವಾರ್ಯತೆ ಇದೆ. ಎಲ್ಲಾ ಶೋಷಿತ ಸಮುದಾಯಗಳಿಗೆ ಮಾಡು ಇಲ್ಲವೇ ಮಡಿ ಎಂಬ ಸ್ಥಿತಿ ಉಂಟಾಗಿದೆ. ನಮ್ಮ ಹಕ್ಕುಗಳ ರಕ್ಷಣೆಗಾಗಿ ಐಕ್ಯತೆಯಿಂದ ಜಾಗೃತಿ ಹೊಂದಿ ಹೋರಾಟ ರೂಪಿಸಬೇಕಿದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಐತಿಹಾಸಿಕ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶ ರೂಪಿಸಲು ನಿರ್ಧರಿಸಲಾಗಿದೆ ಎಂದರು.
ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಾಧಿವೇಶನದಂತೆ ಲಕ್ಷಾಂತರ ಜನರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಮೂಲೆಮೂಲೆಗಳಿಂದ ಜನರು ಆಗಮಿಸಲಿದ್ದಾರೆ ಎಂದು ಹೇಳಿದ ಅವರು ಜಾತಿಗಣತಿ ವರದಿ ಮೊದಲು ಸ್ವೀಕರಿಸುವ ಮೊದಲು ಸಾರ್ವಜನಿಕರ ಚರ್ಚೆಗೆ ಬಿಡಲಿ. ನ್ಯೂನತೆಗಳಿದ್ದರೆ ಸರಿಪಡಿಸಲಿ. ವರದಿ ಬಿಡುಗಡೆಗೆ ಮುನ್ನ ಅಪಸ್ವರ ಸಲ್ಲದು ಎಂದು ತಿಳಿಸಿದರು.
ಈ ಎರಡು ಜಾತಿಗಳ್ಯಾಕೆ ವಿರೋಧ…?
ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಸಮಾಜ ಮಾತ್ರ ಜಾತಿ ಗಣತಿ ವರದಿ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿವೆ. ಈ ಎರಡು ಜಾತಿಗಳಿಗೆ ಏಕೆ ಬೇಡ? ಜಾತಿಗಣತಿ ವರದಿ ಬಿಡುಗಡೆಯೇ ಆಗಿಲ್ಲ. ಮೊದಲೇ ಯಾಕೆ ವಿರೋಧ ವ್ಯಕ್ತಪಡಿಸಬೇಕು. ಒಂದು ವೇಳೆ ವೈಜ್ಞಾನಿಕವಾಗಿ ಇಲ್ಲದಿದ್ದರೆ, ನ್ಯೂನತೆಗಳು ಇದ್ದರೆ ವಿರೋಧ ವ್ಯಕ್ತಪಡಿಸಲಿ. ಅದನ್ನು ಬಿಟ್ಟು ಮೊದಲ ವಿರೋಧಿಸುವುದು ಸರಿಯಲ್ಲ. ಜಾತಿ ಗಣತಿ ವರದಿ
ಸ್ವೀಕರಿಸಬೇಕು ಎಂಬುದು ಎಲ್ಲಾ ಶೋಷಿತ ವರ್ಗಗಳ ಆಗ್ರಹ ಎಂದು ರಾಮಚಂದ್ರಪ್ಪ ಹೇಳಿದರು.
ಗೋಷ್ಠಿಯಲ್ಲಿ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಎಣ್ಣೆಗೆರೆ ವೆಂಕಟರಾವ್, ವೆಂಕಟ ಸುಬ್ಬರಾಜು, ಡಿ.ಬಸವರಾಜ್, ಹೊದಿಗೆರೆ ರಮೇಶ್, ಎಂ. ರಾಮಚಂದ್ರಪ್ಪ ಮತ್ತಿತರರು ಹಾಜರಿದ್ದರು.