SUDDIKSHANA KANNADA NEWS/ DAVANAGERE/ DATE:01-04-2024
ದಾವಣಗೆರೆ: ಲೋಕಸಭಾ ಚುನಾವಣೆ ನಡೆಯುತ್ತಿದ್ದು ಹಿರಿಯ ನಾಗರಿಕರು, ವಿಶೇಷಚೇತನರು ಹಾಗೂ ಅಗತ್ಯ ಸೇವಾ ಇಲಾಖೆಯಲ್ಲಿ ಕೆಲಸ ಮಾಡುವವರು ಮತದಾನದಿಂದ ದೂರ ಉಳಿಯಬಾರದೆಂದು ಈ ವರ್ಗದ ಮತದಾರರಿಗೆ ಚುನಾವಣಾ ಆಯೋಗ ಮನೆಯಿಂದಲೇ ಮತದಾನ ಮತ್ತು ಅಗತ್ಯ ಸೇವಾ ಇಲಾಖೆಯಲ್ಲಿ ಕೆಲಸ ಮಾಡುವವರು ಸೌಲಭ್ಯ ಕೇಂದ್ರದಲ್ಲಿ ಮತದಾನ ಮಾಡಲು ಅವಕಾಶ ನೀಡಿದ್ದು ಅಗತ್ಯ ಸೇವೆಯಡಿ ದಾವಣಗೆರೆ ಕ್ಷೇತ್ರಕ್ಕೆ ಮತದಾನ ಮಾಡಲು 688 ಮತದಾರರು ನೊಂದಣಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ: ವೆಂಕಟೇಶ್ ಎಂ.ವಿ ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಅಗತ್ಯ ಸೇವಾ ಇಲಾಖೆ ಮತದಾರರ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಪರಿಶೀಲನೆ ನಡೆಸಿ ಮಾತನಾಡಿದರು.
85 ವರ್ಷ ಮೇಲ್ಪಟ್ಟವರಿಗೆ ಹಾಗೂ ವಿಶೇಷಚೇತನರಿಗೆ ಹಾಗೂ ಅಗತ್ಯ ಸೇವಾ ಇಲಾಖೆಯಲ್ಲಿ ಕರ್ತವ್ಯ ಮಾಡುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳಿಗೆ ಮುಂಚಿತವಾಗಿ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟಿದೆ. 85 ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನರು ತಮ್ಮ ಮನೆಯಲ್ಲಿಯೇ ಮತದಾನ ಮಾಡುವರು. ಅಗತ್ಯ ಸೇವಾ ಇಲಾಖೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೌಲಭ್ಯ ಕೇಂದ್ರದಲ್ಲಿ ಮತದಾನಕ್ಕಿಂತ ಮುಂಚಿತವಾಗಿ ಚುನಾವಣಾಧಿಕಾರಿಗಳ ಕಚೇರಿಯಿಂದ ಸ್ಥಾಪಿಸಲಾಗುವ ಮತದಾನ ಸೌಲಭ್ಯ ಕೇಂದ್ರಕ್ಕೆ ಆಗಮಿಸಿ ಮತದಾನ ಮಾಡುವರು ಎಂದರು.
ಮನೆಯಲ್ಲಿಯೇ ಮತದಾನಕ್ಕೆ ಮತ್ತು ಅಗತ್ಯ ಸೇವಾ ಇಲಾಖೆ ಮತದಾರರಿಗೆ 12ಡಿ ನಮೂನೆಯನ್ನು ವಿತರಣೆ ಮಾಡಿ ದೃಢೀಕರಣ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಈ ಭಾರಿಯ ಚುನಾವಣೆಯಲ್ಲಿ ವಿಶೇಷವೇನೆಂದರೇ ಅಗತ್ಯ ಸೇವೆಯಲ್ಲಿ ತೊಡಗಿರುವ ವಿವಿಧ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಅವರು ಕರ್ತವ್ಯ ನಿರ್ವಹಿಸುತ್ತಿರುವ ಕೇಂದ್ರಸ್ಥಾನದಿಂದಲೇ ಅವರು ಇತರೆ ಬೇರೆ ಲೋಕಸಭಾ ಕ್ಷೇತ್ರದ ಮತದಾರರಾಗಿದ್ದರೂ ಮತದಾನ ಮಾಡಲು ಅವಕಾಶ ಮಾಡಿಕೊಟ್ಟಿದೆ. ಉದಾಹರಣೆಗೆ ದಾವಣಗೆರೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಬೆಂಗಳೂರು, ಕಲಬುರಗಿ ಸೇರಿದಂತೆ ರಾಜ್ಯದ ಯಾವುದೇ ಲೋಕಸಭಾ ಕ್ಷೇತ್ರದ ಮತದಾರರಾಗಿದ್ದರೂ ಕೂಡ ದಾವಣಗೆರೆಯಲ್ಲಿಯೇ ಮತದಾನ ಮಾಡಲು ಸೌಲಭ್ಯ ಕಲ್ಪಿಸಿದೆ, ಇದಕ್ಕಾಗಿ 12ಡಿ ನಮೂನೆಯನ್ನು ನೀಡಲಾಗುತ್ತದೆ. ಅದನ್ನು ಆಯಾ ಇಲಾಖೆ ನೋಡಲ್ ಅಧಿಕಾರಿಗಳ ಮೂಲಕ ಜಿಲ್ಲಾ ನೋಡಲ್ ಅಧಿಕಾರಿಗೆ ಮತದಾರರ ಗುರುತಿನ ಚೀಟಿಯೊಂದಿಗೆ ಹಾಗೂ ದೃಢೀಕರಣದೊಂದಿಗೆ ಸಲ್ಲಿಸಬೇಕಾಗುತ್ತದೆ. 12ಡಿ ಸಲ್ಲಿಸಲು ಆಯಾ ಕ್ಷೇತ್ರಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಿದ 5 ದಿನಗಳೊಳಗಾಗಿ ಸಲ್ಲಿಸಬೇಕು ಎಂಬ ನಿಯಮವಿದೆ ಎಂದು ತಿಳಿಸಿದರು.
ಅಗತ್ಯ ಸೇವಾ ಮತದಾರರ ನೊಂದಣಿ:
ದಾವಣಗೆರೆ ಕ್ಷೇತ್ರದಲ್ಲಿ ಕರ್ತವ್ಯ ಮಾಡುತ್ತಿದ್ದು ಇಲ್ಲಿಯೇ ಸೌಲಭ್ಯ ಕೇಂದ್ರದಲ್ಲಿ ಮತದಾನ ಮಾಡುವವರು 295, ಬೇರೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 393 ದಾವಣಗೆರೆ ಕ್ಷೇತ್ರದ ಮತದಾರರಾಗಿ ಮತದಾನ ಮಾಡಲು 12ಡಿ ನೀಡಿರುವರು. 444 ಮತದಾರರು ದಾವಣಗೆರೆ ಕ್ಷೇತ್ರ ವ್ಯಾಪ್ತಿಯ ಸಿಬ್ಬಂದಿಗಳಾಗಿದ್ದು ಇತರೆ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮಾಡಲು 12ಡಿ ನೊಂದಣಿ ಮಾಡಿಸಿದ್ದು ಇವರೆಲ್ಲರೂ ದಾವಣಗೆರೆ ಕೇಂದ್ರಸ್ಥಾನದಲ್ಲಿಯೇ ಇತರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಿಗೆ ಮತದಾನ ಮಾಡುವರು ಎಂದು ವಿವರಿಸಿದರು.
ಮನೆಯಲ್ಲಿಯೇ ಮತದಾನ; ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 85 ವರ್ಷಕ್ಕಿಂತಲೂ ಹೆಚ್ಚಿರುವ 12837 ಮತದಾರರಿದ್ದಾರೆ. ಇದರಲ್ಲಿ 7665 ಮತದಾರರಿಗೆ 12ಡಿ ನಮೂನೆಯನ್ನು ನೀಡಲಾಗಿದೆ. ವಿಶೇಷಚೇತನ ಮತದಾರರು ಕ್ಷೇತ್ರದಲ್ಲಿ 22831 ಇದ್ದು ಇದರಲ್ಲಿ 16005 ವಿಶೇಷಚೇತನರಿಗೆ 12ಡಿ ನಮೂನೆ ನೀಡಲಾಗಿದೆ. ಈಗಾಗಲೇ ಮನೆಯಲ್ಲಿಯೇ ಮತದಾನ ಮಾಡಲು ಒಪ್ಪಿ ಸಲ್ಲಿಸಿರುವ ಮತದಾರರನ್ನು ಆನ್ಲೈನ್ ಮೂಲಕ ಮತದಾರರ ಪಟ್ಟಿಯಲ್ಲಿ ನಮೂದಿಸುವ ಕೆಲಸವನ್ನು ಆಯಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಮಾಡುತ್ತಿದ್ದಾರೆ.
ಚುನಾವಣಾ ಸಿಬ್ಬಂದಿಗಳಿಗೆ ಇಡಿಸಿ:
ಮತದಾನ ಸಿಬ್ಬಂದಿಗಳಿಗೆ 12 ಮತ್ತು 12ಎ ರಡಿ ಚುನಾವಣಾ ಕರ್ತವ್ಯದಡಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಮತದಾನ ಸಿಬ್ಬಂದಿಗಳು ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಇತರೆ ಲೋಕಸಭಾ ಕ್ಷೇತ್ರದ ಮತದಾರರಾಗಿದ್ದಲ್ಲಿ ಅವರಿಗೆ 12 ರಡಿ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ. ಇದೇ ಲೋಕಸಭಾ ಕ್ಷೇತ್ರದ ಸಿಬ್ಬಂದಿಯಾಗಿದ್ದು ಮತದಾನದ ಕರ್ತವ್ಯಕ್ಕೆ ನೇಮಕವಾಗಿದ್ದಲ್ಲಿ 12ಎ ರಡಿ ಅವಕಾಶ ಕಲ್ಪಿಸಿ ಅವರು ಕರ್ತವ್ಯ ನಿರ್ವಹಿಸುವ ಮತಗಟ್ಟೆಯಲ್ಲಿಯೇ ಮತದಾನ ಮಾಡಲು ಅವಕಾಶ ನೀಡಲಾಗುತ್ತದೆ.
ಶೇ 90 ಕ್ಕಿಂತ ಹೆಚ್ಚು ಮತದಾನಕ್ಕೆ ಸೂಚನೆ; ಎಲ್ಲಾ ಸಹಾಯಕ ಚುನಾವಣಾಧಿಕಾರಿಗಳು ಹಿರಿಯ ನಾಗರಿಕರು, ವಿಶೇಷಚೇತನರು, ಚುನಾವಣಾ ಕರ್ತವ್ಯದಲ್ಲಿರುವರು ಹಾಗೂ ಅಗತ್ಯ ಸೇವಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರು ಶೇ 90 ಕ್ಕಿಂತಲೂ ಹೆಚ್ಚು ಮತದಾನದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕೆಂದು ತಿಳಿಸಿದ ಅವರು ಮತದಾನದಲ್ಲಿ ಯಾರು ಸಹ ಬಿಟ್ಟು ಹೋಗದಂತೆ ಮತ್ತು 12ಡಿ ನೀಡಿದವರಿಗೆ ಮತಗಟ್ಟೆಯಲ್ಲಿ ಮತದಾನ ಮಾಡಲು ಅವಕಾಶ ಇರುವುದಿಲ್ಲ. ಅಂತಹ ಮತದಾರರಿಗೆ ಮಾಹಿತಿ ನೀಡುವ ಮೂಲಕ ಮತದಾನ ಮಾಡುವಂತೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ ಹಾಗೂ ಸಹಾಯ ಚುನಾವಣಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.