ದಾವಣಗೆರೆ: ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಅವಕಾಶವಿದೆಯಾದರೂ, ಇತ್ತೀಚಿನ ಕೆಲವು ಹೋರಾಟಗಳು ಡಾ. ಬಿ. ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ವಿರೋಧಿಯಾಗಿ ಸಾಗುತ್ತಿದ್ದು ಅರಾಜಕತೆ ಸೃಷ್ಟಿಸುತ್ತಿವೆ ಎಂದು ಮಾಜಿ ವಿಧಾನಸಭಾಧ್ಯಕ್ಷ, ಹಾಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕಳವಳ ವ್ಯಕ್ತಪಡಿಸಿದರು.
ನಗರದ ಸೈನ್ಸ್ ಅಕಾಡೆಮಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ’ ಎಂಬ ಶೀರ್ಷಿಕೆಯಡಿ ಆಯೋಜಿಸಲಾಗಿದ್ದ ವಿಶಿಷ್ಟ ಹಾಗೂ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸಿಜೆಪಿ ಹಾಗೂ ಎಸ್ಐಆರ್ ಪ್ರತಿಭಟನೆಗಳು ಕಾನೂನಿನ ಪ್ರಕಾರ ನಡೆದಿಲ್ಲ ಮತ್ತು ಇದರ ಹಿಂದೆ ವಿದೇಶಗಳ ಕೈವಾಡವಿದೆ. ಎಸ್ಐಆರ್ ಎನ್ನುವುದು ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ನಡೆಸಿದ ಅತ್ಯಂತ ಶಿಸ್ತುಬದ್ಧ ಕಾರ್ಯಚಟುವಟಿಕೆಯಾಗಿದೆ. ಇದರಲ್ಲಿ ದೋಷವಿದ್ದರೆ ಕಾನೂನಾತ್ಮಕವಾಗಿ ಪ್ರಶ್ನಿಸುವುದನ್ನು ಬಿಟ್ಟು ವಿದ್ಯಾರ್ಥಿಗಳ ಮೂಲಕ ವಿನಾಕಾರಣ ಅರಾಜಕತೆ ಸೃಷ್ಟಿಸುವುದನ್ನು ಪ್ರಶ್ನಿಸಬೇಕಾಗಿದೆ ಎಂದು ಎಚ್ಚರಿಸಿದರು.
ಪ್ರಸ್ತುತ ಭಾರತ ವಿಶ್ವಗುರುವಾಗುವತ್ತ ಸಾಗುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಲಿಷ್ಠ ರಾಷ್ಟ್ರ ನಿರ್ಮಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಮೋದಿ ಅವರು ಇಡೀ ದೇಶದ ನಾಯಕರಾಗಿದ್ದು, ಅವರ ನೇತೃತ್ವದಲ್ಲಿ ಭಾರತ ಅತ್ಯಂತ ಭದ್ರವಾಗಿದೆ. ಯುವ ಸಮೂಹವು ಎಚ್ಚೆತ್ತುಕೊಂಡು ಭವ್ಯ ಹಾಗೂ ಭ್ರಷ್ಟಾಚಾರ ಮುಕ್ತ ಭಾರತವನ್ನು ಕಟ್ಟಲು ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡಲು ಮುಂದಾಗಬೇಕು ಎಂದು ಕರೆ ನೀಡಿದರು.
ವಿಶ್ವಸಂಸ್ಥೆಯ ಸಭೆಯಲ್ಲಿ ಭಾಗಿಯಾದಾಗ ಬೇರೆ ಬೇರೆ ದೇಶಗಳ ನಾಯಕರು ಮೋದಿಯಂತಹ ಬಲಿಷ್ಠ ನಾಯಕರನ್ನು ಪಡೆದ ಭಾರತೀಯರೇ ಪುಣ್ಯವಂತರು ಎಂದು ಶ್ಲಾಘಿಸುತ್ತಾರೆ. ಕಳೆದ 12 ವರ್ಷಗಳಿಂದ ಭಾರತವು ಇಡೀ ಜಗತ್ತನ್ನೇ ತನ್ನ ಮಾರುಕಟ್ಟೆಯನ್ನಾಗಿ ಮಾಡಿಕೊಳ್ಳುವಷ್ಟು ಬಲಿಷ್ಠವಾಗಿ ಬೆಳೆದಿದೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿಯ ಜಿಲ್ಲಾಧ್ಯಕ್ಷ ನಾಗರಾಜ ಮೆಳ್ಳೇಕಟ್ಟೆ, ಜಿಲ್ಲಾ ಸಂಚಾಲಕ ಲಕ್ಷ್ಮಣ್, ಅದಿತಿ ವಿದ್ಯಾಸಂಸ್ಥೆಯ ನಿರ್ದೇಶಕ ಎಸ್. ಟಿ. ವೀರೇಶ್, ಮಾಜಿ ಸಚೇತಕ ಡಾ.ಎ.ಹೆಚ್. ಶಿವಯೋಗಿಸ್ವಾಮಿ, ಪಾಲಿಕೆ ಮಾಜಿ ಸದಸ್ಯ ಕೆ. ಪ್ರಸನ್ನಕುಮಾರ್, ಮಾಜಿ ಶಾಸಕ ಬಸವರಾಜ ನಾಯ್ಕ್, ಕಾಲೇಜಿನ ಕಾರ್ಯದರ್ಶಿ ವಿನಯ್ ವೈ. ವಿ., ಪ್ರಾಂಶುಪಾಲ ಜಿ. ವಿರೂಪಾಕ್ಷಪ್ಪ, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಮಾಜಿ ಮೇಯರ್ ಎಸ್. ಟಿ. ವೀರೇಶ್ ಸ್ವಾಗತಿಸಿದರು. ಉಪ ಪ್ರಾಂಶುಪಾಲರಾದ ಪ್ರದೀಪ ಕೆ. ವಿ. ಕಾರಂತ್ ಕಾರ್ಯಕ್ರಮ ನಿರೂಪಣೆ ಮಾಡಿದರು.





Leave a comment