Home ದಾವಣಗೆರೆ ಭದ್ರಾ ಅಚ್ಚುಕಟ್ಟು ಭಾಗದ ರೈತರಿಗೆ ಸತತ 120 ದಿನ ನೀರು ಕೊಡಿ: ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಒತ್ತಾಯ
ದಾವಣಗೆರೆನವದೆಹಲಿಬೆಂಗಳೂರು

ಭದ್ರಾ ಅಚ್ಚುಕಟ್ಟು ಭಾಗದ ರೈತರಿಗೆ ಸತತ 120 ದಿನ ನೀರು ಕೊಡಿ: ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಒತ್ತಾಯ

Share
ಭದ್ರಾ
Share

ದಾವಣಗೆರೆ: ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ರೈತರ ಹಿತದೃಷ್ಟಿಯಿಂದ ಅಪ್ಪರ್ ಭದ್ರಾ ಕಾಲುವೆಗೆ ನೀರು ಹರಿಸಲು ಉದ್ದೇಶಿಸಿರುವ ಆದೇಶವನ್ನು ತಕ್ಷಣವೇ ತಡೆಹಿಡಿಯಬೇಕು ಮತ್ತು ನೀರಾವರಿ ಸಲಹಾ ಸಮಿತಿ ಸಭೆ ಕರೆದು ದಾವಣಗೆರೆ ಜಿಲ್ಲೆಯ ರೈತರ ಜಮೀನುಗಳಿಗೆ ಬೇಸಿಗೆ ಬೆಳೆಗೆ ಸತತವಾಗಿ 120 ದಿನಗಳ ಕಾಲ ನೀರು ಒದಗಿಸಬೇಕು ಎಂದು ಮಾಜಿ ಶಾಸಕ ಹೆಚ್. ಎಸ್. ಶಿವಶಂಕರ್ ಒತ್ತಾಯಿಸಿದ್ದಾರೆ.  

ಈ ಹಿಂದೆ ಹರಿಹರ ಹಾಗೂ ದಾವಣಗೆರೆಯಲ್ಲಿ ಮಳೆಗಾಲದ ಬೆಳೆಗೆ ನೀರು ಬಿಡಲು ಆಗ್ರಹಿಸಿ, ಸರ್ಕಾರದ ಗಮನ ಸೆಳೆಯಲು ಭದ್ರಾ ಅಚ್ಚುಕಟ್ಟಿನ ಕೊನೆಯ ಭಾಗದ ರೈತರು ನೀರಿಗಾಗಿ ಹೋರಾಟ ಹಾಗೂ ಹೆದ್ದಾರಿ ತಡೆ ಚಳವಳಿ ನಡೆಸಿದ್ದರು. ಆಗ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳು ಮಧ್ಯಪ್ರವೇಶಿಸಿ, ರೈತರ ಆಗ್ರಹದಂತೆ ಬೇಸಿಗೆ ಬೆಳೆಗೆ ಸಂಪೂರ್ಣ ನೀರು ನೀಡುವ ಭರವಸೆ ನೀಡಿದ್ದರಿಂದ ಚಳವಳಿಯನ್ನು ಹಿಂಪಡೆಯಲಾಗಿತ್ತು.

ಆದರೆ, ಯಾವುದೇ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ನಡೆಸದೆ, ಸರ್ಕಾರವೇ ಏಕಪಕ್ಷೀಯವಾಗಿ ಅಪ್ಪರ್ ಭದ್ರಾ ಕಾಲುವೆಗೆ ಪ್ರಯೋಗಾತ್ಮಕವಾಗಿ 3 ಟಿಎಂಸಿ ನೀರು ಹರಿಸುವುದಾಗಿ ಆದೇಶಿಸಿತ್ತು. ಪ್ರಸ್ತುತ 3 ಟಿಎಂಸಿ ಬದಲಾಗಿ ಈಗಾಗಲೇ 4 ರಿಂದ 5 ಟಿಎಂಸಿ ನೀರು ಹರಿದು ಹೋಗಿರುವುದು ತಿಳಿದುಬಂದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗ ಮತ್ತೆ ಯಾವುದೇ ನೀರಾವರಿ ಸಲಹಾ ಸಮಿತಿ ಸಭೆ ನಡೆಸದೆ, ಅಪ್ಪರ್ ಭದ್ರಾ ಕಾಲುವೆಗೆ 1 ಟಿಎಂಸಿ ನೀರು ಹರಿಸಲು ಸರ್ಕಾರ ಆದೇಶ ಮಾಡಿದೆ. ಅದೇ ರೀತಿ ತುಂಗಭದ್ರಾ ಜಲಾಶಯಕ್ಕೆ 4 ಟಿಎಂಸಿ ನೀರು ಬಿಡಲು ಆದೇಶ ಮಾಡಿಸಲು ಅಲ್ಲಿನ ಜನಪ್ರತಿನಿಧಿಗಳು ಕಾಯುತ್ತಿರುವುದು ಗಮನಕ್ಕೆ ಬಂದಿದೆ.

ಸ್ಥಳೀಯ ರೈತರು ಹಾಗೂ ನೀರಾವರಿ ಸಲಹಾ ಸಮಿತಿಯ ಸಭೆ ಕರೆದು ತೀರ್ಮಾನಿಸದೇ, ಸರ್ಕಾರವೇ ನೇರವಾಗಿ ನೀರು ಬಿಡುವ ನಿರ್ಧಾರ ಕೈಗೊಳ್ಳುವುದಾದರೆ ನೀರಾವರಿ ಸಲಹಾ ಸಮಿತಿಯ ಪಾತ್ರವೇನು ಎಂದು ಪ್ರಶ್ನಿಸಿದ್ದಾರೆ.

ಆದ್ದರಿಂದ, ಪ್ರಸ್ತುತ 1 ಟಿಎಂಸಿ ನೀರು ಹರಿಸಲು ಹೊರಡಿಸಿರುವ ಆದೇಶವನ್ನು ತಕ್ಷಣದಿಂದಲೇ ತಡೆಹಿಡಿಯಬೇಕು. ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ದಾವಣಗೆರೆ ಜಿಲ್ಲೆಯ ರೈತರ ಜಮೀನುಗಳಿಗೆ ಬೇಸಿಗೆ ಬೆಳೆಗೆ ಸಂಪೂರ್ಣವಾಗಿ ಸತತ 120 ದಿನಗಳ ಕಾಲ ನೀರು ನೀಡಲು ನೀರಾವರಿ ಸಲಹಾ ಸಮಿತಿಯ ಸಭೆಯನ್ನು ತಕ್ಷಣವೇ ಕರೆಯಬೇಕು ಎಂದು ಶಿವಶಂಕರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *