SUDDIKSHANA KANNADA NEWS/ DAVANAGERE/ DATE:03-11-2024
ದಾವಣಗೆರೆ: ಹಿರಿಯ ಪತ್ರಕರ್ತರೂ ಆದ ಇಂದಿನ ಸುದ್ದಿ ಪತ್ರಿಕೆಯ ಸಂಪಾದಕ ವೀರಪ್ಪ ಎಂ. ಭಾವಿ ವಿಧಿವಶರಾಗಿದ್ದಾರೆ. ದೇವರಾಜ್ ಅರಸು ಬಡಾವಣೆ ನಿವಾಸಿಯಾಗಿದ್ದ ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ವೀರಪ್ಪ ಎಂ.ಭಾವಿ ಅವರಿಗೆ 63 ವರ್ಷ ವಯಸ್ಸಾಗಿತ್ತು. ಭಾನುವಾರ ಬೆಳಗಿನ ಜಾವ 2. 50ಕ್ಕೆ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಭಾನುವಾರ ಸಂಜೆ 4 ಗಂಟೆಗೆ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಜಿಲ್ಲಾ ಕಸಾಪ ಸಂತಾಪ:
ಇಂದು ಬೆಳಗಿನ ಜಾವ ಹಿರಿಯ ಪತ್ರಕರ್ತರಾದ ವೀರಪ್ಪ ಎಂ ಬಾವಿಯವರು ನಿಧನರಾದರೆಂಬ ಸುದ್ದಿ ಕೇಳಿ ತೀರ ಆಘಾತವಾಯಿತು. ಅವರು ಒಬ್ಬ ಹಿರಿಯ ಪತ್ರಕರ್ತರಾಗಿದ್ದು ಒಂದು ಪತ್ರಿಕೆಯ ಸಂಪಾದಕರಾಗಿ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಸದಾ ಒಡನಾಡಿಗಳಾಗಿದ್ದರು. ಇವರೊಬ್ಬ ಆತ್ಮೀಯ ಸ್ನೇಹಿತರಾಗಿ ಅನೇಕ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿದ್ದರು. ಆದರೆ ಅವರು ಇಂದು ನಮ್ಮಿಂದ ಅಗಲಿರುವುದು ದುರದೃಷ್ಟಕರ. ಅವರ ಅಕಾಲಿಕ ಮರಣವು ನಮಗೆ ನೋವು ಮತ್ತು ದುಃಖವನ್ನು ಉಂಟು ಮಾಡಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.
ಮೃತರ ಆತ್ಮಕ್ಕೆ ಭಗವಂತನು ಹಾಗೂ ಕನ್ನಡ ತಾಯಿ ಶ್ರೀ ಭುವನೇಶ್ವರಿಯು ಚಿರಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತಾ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅರ್ಪಿಸುತ್ತದೆ. ಅವರ ಅಗಲಿಕೆಯಿಂದ ಉಂಟಾಗಿರುವ ದುಃಖವನ್ನು ಅವರ ಕುಟುಂಬದ ಸದಸ್ಯರಿಗೆ ಬಂಧು ಮಿತ್ರರಿಗೆ ಹಾಗೂ ಅವರ ಅಭಿಮಾನಿಗಳಿಗೆ ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಬಿ. ವಾಮದೇವಪ್ಪ ಅವರು ಪ್ರಾರ್ಥಿಸಿದ್ದಾರೆ.