Home ದಾವಣಗೆರೆ ಕೇರಳ ಸಿಎಂ ಆಗಿ ವಿ.ಡಿ. ಸತೀಶನ್ ಪ್ರಮಾಣ ವಚನ ಸ್ವೀಕಾರ: ದಶಕದ ಬಳಿಕ ಮರಳಿ ಅಧಿಕಾರಕ್ಕೇರಿದ ಯುಡಿಎಫ್ ನಲ್ಲಿ ಯುವಕರಿಗೆ ಲಕ್!
ದಾವಣಗೆರೆನವದೆಹಲಿಬೆಂಗಳೂರು

ಕೇರಳ ಸಿಎಂ ಆಗಿ ವಿ.ಡಿ. ಸತೀಶನ್ ಪ್ರಮಾಣ ವಚನ ಸ್ವೀಕಾರ: ದಶಕದ ಬಳಿಕ ಮರಳಿ ಅಧಿಕಾರಕ್ಕೇರಿದ ಯುಡಿಎಫ್ ನಲ್ಲಿ ಯುವಕರಿಗೆ ಲಕ್!

Share
ಕೇರಳ
Share

ತಿರುವನಂತಪುರಂ: ದಶಕಗಳ ಕಾಲ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಕೇರಳದಲ್ಲಿ ಭರ್ಜರಿ ಜಯಭೇರಿ ಬಾರಿಸುವ ಮೂಲಕ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಾಂಗ್ರೆಸ್‌ನ ಹಿರಿಯ ನಾಯಕ ವಿ.ಡಿ. ಸತೀಶನ್ ಅವರು ಸೋಮವಾರ ಕೇರಳದ 13ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

ತಿರುವನಂತಪುರಂನ ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ವಿ.ಡಿ. ಸತೀಶನ್ ಹಾಗೂ ಅವರ 20 ಸದಸ್ಯರ ಸಚಿವ ಸಂಪುಟಕ್ಕೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಕೇರಳದ ಇತಿಹಾಸದಲ್ಲೇ ಇಡೀ ಸಚಿವ ಸಂಪುಟವು ಒಂದೇ ದಿನ ಒಟ್ಟಿಗೆ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಕಳೆದ ಆರು ದಶಕಗಳಲ್ಲಿ ಇದೇ ಮೊದಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಯುವ ಪೀಳಿಗೆಗೆ ಆದ್ಯತೆ:

ಹೊಸ ಸಚಿವ ಸಂಪುಟದಲ್ಲಿ ಭಾರಿ ಬದಲಾವಣೆ ತರಲಾಗಿದ್ದು, ಒಟ್ಟು 21 ಸದಸ್ಯರ ಪೈಕಿ 14 ಮಂದಿ ಹೊಸ ಮುಖಗಳಿಗೆ ಆದ್ಯತೆ ನೀಡಲಾಗಿದೆ. ಯುಡಿಎಫ್ ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) 5 ಸಚಿವ ಸ್ಥಾನಗಳನ್ನು ಪಡೆದುಕೊಂಡಿದೆ. ಮೂಲಗಳ ಪ್ರಕಾರ, ಮುಖ್ಯಮಂತ್ರಿ ಸತೀಶನ್ ಅವರು ಹಣಕಾಸು ಮತ್ತು ಬಂದರು ಖಾತೆಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವ ಸಾಧ್ಯತೆಯಿದ್ದು, ರಮೇಶ್ ಚೆನ್ನಿತ್ತಲ ಅವರಿಗೆ ಗೃಹ ಖಾತೆ ಹಾಗೂ ಸನ್ನಿ ಜೋಸೆಫ್ ಅವರಿಗೆ ಕಂದಾಯ ಖಾತೆ ಸಿಗುವ ಸಾಧ್ಯತೆಯಿದೆ.

140 ಸದಸ್ಯ ಬಲದ ಕೇರಳ ವಿಧಾನಸಭೆಯಲ್ಲಿ ಯುಡಿಎಫ್ ಮೈತ್ರಿಕೂಟ 102 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ. ಈ ಮೂಲಕ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌ನ 10 ವರ್ಷಗಳ ಆಡಳಿತ ಅಂತ್ಯಗೊಂಡಿದೆ. ನಿರ್ಗಮಿತ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇನ್ಮುಂದೆ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಈ ಐತಿಹಾಸಿಕ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ರಾಜ್ಯಗಳ ಗಣ್ಯರು ಭಾಗವಹಿಸಿದ್ದರು.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles