ಗೋಪಾಲಗಂಜ್ (ಬಿಹಾರ): ವಿವಾಹಿತ ಮಹಿಳೆಯೊಬ್ಬಳನ್ನು ಭೇಟಿಯಾಗಲು ಆಕೆಯ ಮನೆಗೆ ಬಂದಿದ್ದ 23 ವರ್ಷದ ಯುವಕನೊಬ್ಬನನ್ನು ಆಕೆಯ ಕುಟುಂಬಸ್ಥರೇ ತೀವ್ರವಾಗಿ ಥಳಿಸಿ ಕೊಲೆ ಮಾಡಿರುವ ಘಟನೆ ಬಿಹಾರದ ಗೋಪಾಲಗಂಜ್ ಜಿಲ್ಲೆಯಲ್ಲಿ ನಡೆದಿದೆ. ವಿವಾಹಿತ ಪ್ರೇಯಸಿ ಭೇಟಿಯಾಗಲು ಬಂದು ಜೀವವನ್ನೇ ಕಳೆದುಕೊಂಡಿದ್ದಾನೆ.
ಮೃತರನ್ನು ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿ ಮೂಲದ ಬಾದಲ್ ಸಿಂಗ್ (23) ಎಂದು ಗುರುತಿಸಲಾಗಿದೆ. ಈತ ಗೋಪಾಲಗಂಜ್‌ನ ಮಜ್ವಾಲಿಯಾ ಗ್ರಾಮದ ಕಾಜಲ್ ಕುಮಾರಿ ಎಂಬಾಕೆಯೊಂದಿಗೆ ದೀರ್ಘಕಾಲದಿಂದ ಪ್ರೀತಿಯಲ್ಲಿದ್ದ ಎನ್ನಲಾಗಿದೆ. ಕಾಜಲ್ ಕುಮಾರಿಗೆ ಮದುವೆಯಾಗಿದ್ದು, ಒಂದು ಮಗುವಿದೆ. ಆದರೆ ಪತಿಯೊಂದಿಗೆ ಸಂಬಂಧ ಹಳಸಿದ್ದರಿಂದ ಆಕೆ ಕಳೆದ ಕೆಲವು ಸಮಯದಿಂದ ತವರು ಮನೆಯಲ್ಲೇ ವಾಸವಾಗಿದ್ದಳು.
ಮಧ್ಯರಾತ್ರಿ ಸಿಕ್ಕಿಬಿದ್ದ ಪ್ರೇಮಿ:
ಶನಿವಾರ ತಡರಾತ್ರಿ ಬಾದಲ್ ಸಿಂಗ್ ತನ್ನ ಪ್ರೇಯಸಿ ಕಾಜಲ್ ಕುಮಾರಿಯನ್ನು ಭೇಟಿಯಾಗಲು ಆಕೆಯ ತವರು ಮನೆಗೆ ಬಂದಿದ್ದ ಎನ್ನಲಾಗಿದೆ. ಈ ವೇಳೆ ಯುವಕ ಬಂದಿರುವುದನ್ನು ಗಮನಿಸಿದ ಯುವತಿಯ ಕುಟುಂಬಸ್ಥರು ಆತನನ್ನು ರೆಡ್-ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಳಿಕ ಆತನನ್ನು ತೀವ್ರವಾಗಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು, ಗಂಭೀರವಾಗಿ ಗಾಯಗೊಂಡಿದ್ದ ಬಾದಲ್‌ನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಇಬ್ಬರ ಬಂಧನ, ತನಿಖೆ ಚುರುಕು:
ಘಟನೆಯಿಂದಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ (FSL) ತಂಡ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಇಬ್ಬರ ನಡುವಿನ ಸಂಭಾಷಣೆಯ ವಿವರಗಳನ್ನು ತಿಳಿಯಲು ಮೃತನ ಮೊಬೈಲ್ ಫೋನ್ ಅನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಪಾಲಗಂಜ್ ಸದರ್ ಎಸ್‌ಡಿಪಿಒ ರಾಜೇಶ್ ಕುಮಾರ್ ಪ್ರತಿಕ್ರಿಯಿಸಿದ್ದು, “ಪ್ರೇಯಸಿ ಕಾಜಲ್ ಕುಮಾರಿ ಮತ್ತು ಆಕೆಯ ತಾಯಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ದಾಳಿಯಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಬಂಧನಕ್ಕಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ,” ಎಂದು ತಿಳಿಸಿದ್ದಾರೆ. ಮೃತನ ಕುಟುಂಬಸ್ಥರಿಂದ ಅಧಿಕೃತ ದೂರು ಬಂದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ನಡೆದ ಈ ಆನರ್ ಕಿಲ್ಲಿಂಗ್ ಮಾದರಿಯ ಕೃತ್ಯ ಸ್ಥಳೀಯರಲ್ಲಿ ಭಾರೀ ಆತಂಕ ಮೂಡಿಸಿದೆ.
- Badal Singh murder
- Bihar crime news
- Bihar Gopalganj murder case
- extramarital affair murder Bihar
- honor killing Bihar
- Kajal Kumari Gopalganj
- man beaten to death in Bihar
- ಕಾಜಲ್ ಕುಮಾರಿ ಬಿಹಾರ
- ಗೋಪಾಲಗಂಜ್ ಆನರ್ ಕಿಲ್ಲಿಂಗ್
- ತಡರಾತ್ರಿ ಪ್ರೇಮಿ ಹತ್ಯೆ
- ಬಾದಲ್ ಸಿಂಗ್ ಕೊಲೆ
- ಬಿಹಾರ ಕೊಲೆ ಪ್ರಕರಣ
- ಬಿಹಾರ ಕ್ರೈಂ ನ್ಯೂಸ್
- ವಿವಾಹಿತ ಮಹಿಳೆ ಪ್ರೇಮಿ ಕೊಲೆ





Leave a comment